ಮನೆಹಾನಿ ಸಂತ್ರಸ್ಥರ ಪಾರದರ್ಶಕ ಆಯ್ಕೆಗಾಗಿ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಮಹತ್ವದ ಸಭೆ…
ಹಾನಿಯಾದ 24 ಗಂಟೆಯಲ್ಲಿ ಪರಿಶೀಲಿಸಿ, ವರದಿ ನೀಡಬೇಕು..
ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ ಹೇಳಿಕೆ..
ಬೆಳಗಾವಿ : ಶುಕ್ರವಾರ ದಿನಾಂಕ 28/07/2023ರಂದು ಸಾಯಂಕಾಲ 5-30ಕ್ಕೆ ನಗರದ ತಹಶೀಲ್ದಾರ ಅವರ ಕಚೇರಿಯ ಸಭಾಭವನದಲ್ಲಿ, ಮಹಾನಗರ ಪಾಲಿಕೆಯ ಆಡಳಿತ, ಕಂದಾಯ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ಹಾಗೂ ಬೆಳಗಾವಿ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಜಂಟಿಯಾಗಿ ಅತೀ ಮಹತ್ವಪೂರ್ಣ ಸಭೆಯಲ್ಲಿ ಭಾಗಿಯಾಗಿದ್ದರು..
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ್ ದುಡಗುಂಟಿ ಹಾಗೂ ಬೆಳಗಾವಿ ತಹಶೀಲ್ದಾರರಾದ ಸಿದರಾಯಿ ಬೋಸಗಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಬೆಳಗಾವಿ ನಗರಕ್ಕೆ ಅತಿವೃಷ್ಟಿಯಿಂದ ಆದಂತ ಹಾಗೂ ಮುಂದೆ ಆಗುವಂತಹ ಸಮಸ್ಯೆಗಳ ಕುರಿತಾಗಿ ಪ್ರಮುಖ ವಿಚಾರಗಳು ಹಾಗೂ ನಿರ್ಧಾರಗಳು ಚರ್ಚೆಯಾದವು..
ಕಳೆದ ಸೋಮವಾರ 24ನೆಯ ತಾರಿಕಿನಂದು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ಕಳೆದ ವರ್ಷದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಯ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಕಂಡುಬಂದಿದೆ ಎಂದು ಹಲವು ಶಾಸಕರು ಆರೋಪ ಮಾಡಿದರು, ಅದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಪರಿಹಾರದ ಪಟ್ಟಿಯನ್ನು ಪರಿಶೀಲನೆ ಮಾಡುತ್ತೇವೆ, ಇನ್ನೂ ಸಂತ್ರಸ್ಥರು ಏನಾದರೂ ಉಳಿದಿದ್ದರೆ ಅವರಿಗೂ ಪರಿಹಾರ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು..

ಅದಕ್ಕಾಗಿ, ಕಳೆದ ವರ್ಷದಿಂದ ಬೆಳಗಾವಿಯ 58 ವಾರ್ಡುಗಳಲ್ಲಿ ಅತಿವೃಷ್ಟಿಯಿಂದ ಎಷ್ಟು ಮನೆಗಳು ಹಾನಿಯಾಗಿವೆ? ಯಾವ ಮನೆಗಳಿಗೆ ಯಾವ ವರ್ಗಗಳಲ್ಲಿ ವಿಂಗಡನೆ ಮಾಡಿದೆ? ಪರಿಹಾರ ಯಾವ ಪ್ರಮಾಣದಲ್ಲಿ ತಲುಪಿದೆ? ಇನ್ನು ಯಾರಾದರೂ ಪ್ರಾಮಾಣಿಕ ಸಂತ್ರಸ್ಥರು ಉಳಿದಿರುವರೆ? ಅಕ್ರಮವಾಗಿ ಯಾರಾದರೂ ಪರಿಹಾರ ಪಡೆದುಕೊಂಡುದ್ದಾರೆಯೇ?? ಎಂಬ ಹಲವಾರು ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸುವದರ ಬಗ್ಗೆ ಮಾತುಕತೆ ನಡೆದು, ಸಂಬಂಧಪಟ್ಟ ಸಿಬ್ಬಂದಿಗಳಿಗೆ ಅದರ ಮಾಹಿತಿ ನೀಡಲು ಸೂಚಿಸಲಾಯಿತು..
ಇನ್ನು ಈ ವರ್ಷ ಅತಿಯಾದ ಮಳೆಯಿಂದ ಹಾನಿಯಾದ ಮನೆಗಳನ್ನು ವ್ಯವಸ್ಥಿತವಾಗಿ ಪರಿಶೀಲನೆ ಮಾಡಿ, ಪಾರದರ್ಶಕವಾದ ವರದಿಯ ಮೂಲಕ, ಸಂತ್ರಸ್ಥರ ಪರಿಹಾರಕ್ಕಾಗಿ ಸೂಕ್ತ ಮಾಹಿತಿಯನ್ನು ಕಲೆ ಹಾಕಬೇಕು, ಅದು ಹಾನಿಯಾದ 24 ಗಂಟೆಗಳಲ್ಲಿಯೇ ವರದಿ ನೀಡಬೇಕು ಎಂದು ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡಿದರು..

ಪಾಲಿಕೆ ಮತ್ತು ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಒಟ್ಟಿಗೆ ಸೇರಿ ಸಂಯೋಜನಾತ್ಮಕವಾಗಿ ಕಾರ್ಯ ಮಾಡಿಕೊಂಡು, ಉತ್ತಮ ಪಲಿತಾಂಶ ನೀಡಬೇಕು ಎಂದರು..
ಈ ವಿಶೇಷ ಸಭೆಯಲ್ಲಿ ಪಾಲಿಕೆ ಆಯುಕ್ತರು, ಬೆಳಗಾವಿಯ ತಹಶೀಲ್ದಾರ, ಪಾಲಿಕೆಯ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ನಿಪ್ಪಾಣಿಕರ, ಆಡಳಿತ ಅಧಿಕಾರಿ ಭಾಗ್ಯಾಶ್ರೀ ಹುಗ್ಗಿ, ಕಂದಾಯ ಆಯುಕ್ತರಾದ ಪ್ರಶಾಂತ ಹಣಗಂಡಿ, ಇಂಜಿನಿಯರಗಳಾದ ಮುತ್ತೆನ್ನವರ, ಸಿದ್ದಗುಂಡ, ಮಂಜುಶ್ರೀ, ಪರಶುರಾಮ, ಅಂಕಿತ, ಇನ್ನೂ ಪಾಲಿಕೆಯ ಆಡಳಿತ, ತಾಂತ್ರಿಕ, ಕಂದಾಯ ವಿಭಾಗದ ಬಹುತೇಕ ಸಿಬ್ಬಂದಿಗಳು ಹಾಜರಿದ್ದರು..
ವರದಿ ಪ್ರಕಾಶ ಕುರಗುಂದ..