ಮಾನವೀಯತೆಗೆ ಮಾದರಿಯಾದ ಜನ್ಮದಿನದ ಆಚರಣೆ..
ಜನ್ಮ ದಿನದಂದು ಸಾರ್ಥಕ ಕಾರ್ಯ ಮಾಡಿದ ಗಂಗಾಧರ ಪಾಟೀಲ..
ಬೆಳಗಾವಿ : ಎಷ್ಟೋ ಜನರು ತಮ್ಮ ಹಾಗೂ ತಮ್ಮ ಮಕ್ಕಳ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡುವ ನೆಪದಲ್ಲಿ ಎಲ್ಲರನ್ನೂ ಕರೆದು ಸಂಭ್ರಮಿಸಿ, ಊಟ, ಉಪಚಾರ, ಹೋಟೆಲ್, ಪಾರ್ಟಿ ಅಂತಾ ಹಣವನ್ನು ವೆಚ್ಚ ಮಾಡಿ ಖುಷಿ ಪಡುವ ಪ್ರಸ್ತುತ ಸಮಾಜದಲ್ಲಿ ಬೆಳಗಾವಿ ನಗರದ ಒಬ್ಬ ನಿವಾಸಿ ತಮ್ಮ ಜನ್ಮದಿನದಂದು ಅತ್ಯಂತ ಸಾರ್ಥಕವಾಗಿ ಆಚರಣೆ ಮಾಡಿಕೊಂಡು, ಮಾನವೀಯತೆ ಮೆರೆದು ಮಾದರಿ ಆಗಿದ್ದಾರೆ.

ಬೆಳಗಾವಿಯ ಗಣಾಚಾರಿ ಗಲ್ಲಿಯ ಗಂಗಾಧರ ಪಾಟೀಲ ಎಂಬುವವರು ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದು, ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿಯೂ ಗುರ್ತಿಸಿ ಕೊಂಡವರು, ಜೊತೆಗೆ ವಾರ್ಡ ಸಂಖ್ಯೆ 7ರ ನಗರ ಸೇವಕ ಶಂಕರ ಪಾಟೀಲ ಅವರ ಸಹೋದರ, ಗಂಗಾಧರ ಅವರು ನಿನ್ನೆಯ ದಿನ ತಮ್ಮ ಜನ್ಮ ದಿನವನ್ನು ನಗರದ ಕಡು ಬಡವರೊಂದಿಗೆ ಆಚರಿಸುತ್ತಾ ಅವರ ಮೂಲಭೂತ ಅವಶ್ಯಕತೆಗೆ ಸಹಕಾರಿಯಾಗಿ ತಮ್ಮ ಜನ್ಮ ದಿನದಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ.

ನಗರದ ಕೋಟೆ ಕೆರೆ ರಸ್ತೆಯ ಪಕ್ಕದಲ್ಲಿ ಅಭದ್ರತೆಯ ಹಾಗೂ ತಾತ್ಕಾಲಿಕ ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ಸುಮಾರು ಆರು ಜೋಪಡಪಟ್ಟಿಗಳ ಜನರಿಗೆ ಸುರಕ್ಷಿತವಾದ ಬ್ರಹತ್ ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಿದ್ದು, ಈ ಮಳೆಗಾಲದಲ್ಲಿ ಅವರ ಗುಡಿಸಲುಗಳು ಬೆಚ್ಚಗೆ ಇರಲು ನೆರವಾಗುವಂತೆ ಮಾಡಿದ್ದಾರೆ.
ಅವರ ಗುಡಿಸಲುಗಳಲ್ಲಿ ಮೊದಲಿಗೆ ಲಾಟೆನ್ ಹಾಗೂ ಚುಮನಿಗಳಿಂದ ದ್ವೀಪ ಉರುಸುತ್ತಿದ್ದು, ಅವುಗಳಿಂದ ಕೆಲವು ಸಲ ಅಪಾಯದ ಅಂಜಿಕೆಯೂ ಅವರನ್ನು ಕಾಡುತ್ತಿದ್ದು, ಅದನ್ನು ಹೋಗಲಾಡಿಸಲು ಅವರ ಗುಡಿಸಲುಗಳಲ್ಲಿ ಸುಮಾರು ನಾಲ್ಕು ಸೌರ ವಿದ್ಯುತ್ ದ್ವೀಪಗಳನ್ನು ಅಳವಡಿಸಿ ಅವರಿಗೆ ಉತ್ತಮ ಬೆಳಕು ಸಿಗುವಂತೆ ಮಾಡಿದ್ದಾರೆ.

ಕಡುಬಡತನದ ಗುಡಿಸಲಿನಲ್ಲಿ ವಾಸ ಮಾಡುತ್ತಿರುವ 9 ಕುಟುಂಬದ ಸುಮಾರು 30 ಜನರಿಗೆ ಅನುಕೂಲವಾಗಲು ಕೆಲ ವ್ಯವಸ್ಥೆಯನ್ನು ಸಮಾಜ ಸೇವಕ ಗಂಗಾಧರ ಪಾಟೀಲ ಅವರು ತಮ್ಮ ಜನ್ಮ ದಿನದಂದು ಮಾಡಿದ್ದು, ಇದರ ಹಿಂದೆ ಅವರ ಸಹೋದರ ವಾರ್ಡ್ ಸಂಖ್ಯೆ 7ರ ನಗರ ಸೇವಕರಾದ ಶಂಕರ ಪಾಟೀಲ ಅವರ ಸಾಮಾಜಿಕ ಕಳಕಳಿಯೂ ಇದಕ್ಕೆ ಮಹತ್ವದ ಪ್ರೇರಣೆಯಾಗಿದೆ.

ತಮ್ಮ ಜನ್ಮ ದಿನದಂದು ಈ ಮಾನವೀಯತೆಯ ಕಾರ್ಯ ಮಾಡಿದ ಗಂಗಾಧರ ಪಾಟೀಲ ಅವರು ಕೊನೆಗೆ ಅಲ್ಲಿ ಇದ್ದ 30 ಬಡ ಜನರನ್ನೂ ಕರೆದುಕೊಂಡು ಹೋಗಿ ನಗರದ ಉತ್ತಮ ದಾಬಾದಲ್ಲಿ ತಮ್ಮ ಜನ್ಮ ದಿನದ ಅಂಗವಾಗಿ ಊಟ ಮಾಡಿಸಿ, ಅವರೊಂದಿಗೆ ಸಂತಸದಿಂದ ಕಾಲ ಕಳೆದಿದ್ದು ಎಲ್ಲರಿಗೂ ಮೆಚ್ಚುಗೆಯಾಗುವಂತಹ ಸಂಗತಿಯಾಗಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..