ರಾಜ್ಯದಲ್ಲಿ ಹಾಳಾದ ರಸ್ತೆಗಳ ದುರಸ್ತಿಗೆ ಶೀಘ್ರವೇ ಕ್ರಮ..

ರಾಜ್ಯದಲ್ಲಿ ಹಾಳಾದ ರಸ್ತೆಗಳ ದುರಸ್ತಿಗೆ ಶೀಘ್ರವೇ ಕ್ರಮ..

ಬಿಮ್ಸ್ ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆಗೆ 570 ಸಿಬ್ಬಂದಿಗಳ ನೇಮಕಕ್ಕೆ ಒಪ್ಪಿಗೆ ದೊರಕಿದೆ..

ಜಿಲ್ಲಾ ವಿಭಜನೆಯನ್ನು ಸಮಯ ಬಂದಾಗ ಸರ್ಕಾರವೇ ಮಾಡುತ್ತದೆ..

ಸಚಿವ ಸತೀಶ್ ಜಾರಕಿಹೊಳಿ..

ಬೆಳಗಾವಿ: ಯಾವುದೇ ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲಾ, ಕಳೆದ ಹದಿನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅನೇಕ ಬದಲಾವಣೆಗಳು ಕಂಡಿದ್ದು, ಜಿಲ್ಲೆಯಲ್ಲಿ ಆರೋಗ್ಯ, ಶೈಕ್ಷಣಿಕ ಪ್ರಗತಿಗಾಗಿ ಪ್ರಯತ್ನಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ನಗರದ ನೆಹರು ಸ್ಟೇಡಿಯಂನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿಯೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬುವುದು ಸರ್ಕಾರದ ಮತ್ತು ನಮ್ಮ ವೈಯಕ್ತಿಕ ಗುರಿ ಇದೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜುಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಹೆಚ್ಚು ಮಳೆ ಸುರಿದ ಕಾರಣ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಡೆ ರಸ್ತೆಗಳು ಹಾಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ವಿಶೇಷ ಅನುದಾನ ನೀಡಿದ್ದು, ಮಳೆ ನಿಂತ ಮೇಲೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದರು.

ಬಿಮ್ಸ್ ಆವರಣದಲ್ಲಿ 188 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ವರ್ಷಕ್ಕೆ 38 ಕೋಟಿ ರೂಪಾಯಿ ಅನುದಾನ ಅವಶ್ಯಕತೆ ಇದ್ದು, ಸಿಎಂ ಸಿದ್ದರಾಮಯ್ಯನವರು ಅನುಮೋದನೆ ನೀಡಿದ್ದಾರೆ. ಈ ಆಸ್ಪತ್ರೆ ಆರಂಭಕ್ಕೆ 570 ಸಿಬ್ಬಂದಿಗಳ ಅವಶ್ಯಕತೆ ಇದ್ದು, ಸಿಬ್ಬಂದಿಗಳ ನೇಮಕಾತಿಗಾಗಿ ತಿಂಗಳ ಹಿಂದಷ್ಟೇ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅವರೊಂದಿಗೆ ಸಭೆ ನಡೆಸಿದ್ದು, ಶೀಘ್ರದಲ್ಲಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ಹೇಳಿದರು.

ಸಮಯ ಬಂದಾಗ ಜಿಲ್ಲೆ ವಿಭಜನೆ: ಬೆಳಗಾವಿ ಜಿಲ್ಲೆ ವಿಭಜನೆ ಆಗಲು ಸಮಯ ಬಂದೇ ಬರುತ್ತದೆ. ಸಮಯ ಬರುವರೆಗೆ ಕಾಯಬೇಕಷ್ಟೇ, ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕೆಂದು ನಮ್ಮ ಆಶಯ ಇದೆ. ಆದರೆ ಈ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳುತ್ತದೆ ಎಂದರು.

ಹಳೆ ಯೋಜನೆ ಪೂರ್ಣಗೊಳಿಸಲು ಸೂಚನೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಕಾಮಗಾರಿ ಹಂತದಲ್ಲಿರುವ 70 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸಂಪೂರ್ಣ ಕಾಮಗಾರಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದೇನೆ. ರಾಜ್ಯಕ್ಕೆ ಯಾವುದೇ ವಿಶೇಷ ಯೋಜನೆ ಕೇಂದ್ರದಿಂದ ನೀಡಿಲ್ಲ. ಕಳೆದ 12 ವರ್ಷಗಳ ಹಿಂದೆ ನೀಡಿರುವ ಕೆಲವು ಯೋಜನೆಗಳು ಇನ್ನು ಪೂರ್ಣಗೊಂಡಿಲ್ಲ. ಅದಕ್ಕಾಗಿ ಹಳೇ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆಂದು ದೆಹಲಿಯಲ್ಲಿ ನಡೆದ ಸಭೆ ಬಗ್ಗೆ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ರಿಂಗ್‌ ರೋಡ್‌ ನಿರ್ಮಿಸಲು ಅನುಮತಿ ದೊರತಿದೆ. ರಾಜ್ಯ ಸರ್ಕಾರದಿಂದ ಭೂಮಿ ಸ್ವಾಧೀನ ಪಡೆಯಬೇಕು. ಎಷ್ಟು ಬೇಗ ಭೂಮಿಯನ್ನು ಸ್ವಾಧೀನ ಪಡೆಯುತ್ತೇವೆ ಅಷ್ಟು ಬೇಗ ಕಾಮಗಾರಿ ಆರಂಭವಾಗುತ್ತದೆ. ಈಗಾಗಲೇ ಟೆಂಡರ್‌ ಆಗಿತ್ತು. ಹೆಚ್ಚಿನ ಸಮಯ ಆಗಿದ್ದರಿಂದ ಟೆಂಡರ್‌ ಕ್ಯಾನ್ಸಲ್‌ ಆಗಿದೆ. ಆದ್ದರಿಂದ ಹೊಸ ಟೆಂಡರ್‌ ಕರೆಲಾಗುತ್ತದೆ ಎಂದು ತಿಳಿಸಿದರು.

ಜನರ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸಿದ್ದೇನಷ್ಟೇ: ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡಿ, ಕಡಿತ ಮಾಡಿ ಎಂದು ನಾ ಹೇಳಿಲ್ಲ. ಉಳ್ಳವರಿಗೆ ಕೊಡಬೇಡಿ. ಅರ್ಹರಿಗೆ ಗ್ಯಾರಂಟಿ ಯೋಜನೆ ಕೊಡಬೇಕು. ಈ ಬಗ್ಗೆ ಪರಿಷ್ಕರಣೆ ಮಾಡಬೇಕೆಂದು ಜನರ ಅಭಿಪ್ರಾಯ ಇದೆ. ಜನರ ಅಭಿಪ್ರಾಯವನ್ನೇ ನಾನು ಹೈಕಮಾಂಡ್ ಗೆ ತಿಳಿಸಿದ್ದೇನೆ. ಆದರೆ ನೀವು ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡಿ, ಕಡಿತ ಮಾಡಬೇಕು. ಪರಿಷ್ಕರಣೆ ಮಾಡಬೇಕೆಂದು ಸತೀಶ್‌ ಜಾರಕಿಹೊಳಿ ಅವರೇ ಹೇಳಿದ್ದಾರೆಂದು ಸುದ್ದಿ ಪ್ರಸಾರ ಮಾಡುತ್ತಿದ್ದಿರಿ. ಅದಕ್ಕೆ ನಾನೆನು ಮಾಡಲಿ ಎಂದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..