ರಾಜ್ಯದ ವೈದ್ಯಕೀಯ ಮತ್ತು ಅರೇವೈಧ್ಯಕೀಯ ಸಿಬ್ಬಂದಿಗಳ ಬಹುದಿನಗಳ, ಹಲವು ಬೇಡಿಕೆಗಳು ಇಂದು ಸಚಿವರ ಮುಂದೆ…
ವೈದ್ಯಕೀಯ ಸೇವಾರಂಗದ ಸಮಸ್ಯ ಹಾಗೂ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಶರಣ ಪ್ರಕಾಶ ಪಾಟೀಲರು
ಬೆಂಗಳೂರು : ಆರೋಗ್ಯ ಮನುಷ್ಯನ ಮೂಲಭೂತ ಅಗತ್ಯವಾಗಿದೆ. ರಾಜ್ಯದ ಜನರ ಆರೋಗ್ಯ ಸೇವೆಗಾಗಿ ಸರ್ಕಾರವು ಹಲವು ಯೋಜನೆಗಳನ್ನು, ಬಹು ಪ್ರಾವಿಣ್ಯತೆಯುಳ್ಳ ಹಲವು ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಹೀಗೆ ಬಹಳಷ್ಟು ಕೆಲಸ ಮಾಡುತ್ತಿದೆ. ಹಲವಾರು ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಜನರ ಆರೋಗ್ಯ ಸೇವೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಹೀಗೆ ದುಡಿಯುತ್ತಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು ಹಲವು ಸಮಸ್ಯೆಗಳ ಆಗರವಾಗಿದ್ದು, ಇಲಾಖೆಯ ನೌಕರರು ಮಲತಾಯಿ ಧೋರಣೆಯನ್ನು ಎದುರಿಸುವಂತಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳ ಸಂಘಗಳು ಒಗ್ಗೂಡಿ ಒಕ್ಕೂಟದ ರೂಪವನ್ನು ಪಡೆದುಕೊಂಡು ತಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವೈದ್ಯಕೀಯ ಶಿಕ್ಷಣ ಸಚಿವರಾದ ಮಾನ್ಯ ಶರಣ ಪ್ರಕಾಶ ಪಾಟೀಲರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ, ಸಭೆ ನಡೆಸಿ, ತಮ್ಮ ಹಲವು ಸಮಸ್ಯೆಗಳತ್ತ ಸಚಿವರ ಗಮನ ಸೆಳೆದು ಅದನ್ನು ಪರಿಹರಿಸುವಂತೆ ಕೋರಿ ಚರ್ಚೆ ನಡೆಸಿದರು..
ರಾಜ್ಯದಲ್ಲಿ ಹಲವಾರು ವೈದ್ಯಕೀಯ ಶಿಕ್ಷಣ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರದ ಅಡಿಯಲ್ಲಿ, ಸಂವಿಧಾನದ 43A ಮತ್ತು 51A.(g) (h) ಮತ್ತು (j) ಪರಿಚ್ಚೇದದ ಅಡಿಯಲ್ಲಿ, ಕಾಯಕಲ್ಪ, NQAS, NABH, ಮತ್ತು NIRF ಮುಂತಾದ ಗುಣಮಟ್ಟವನ್ನು ಅಳವಡಿಸಿಕೊಂಡು, ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತಾ ಬಂದಿವೆ.ಕೋವಿಡ್19ರ ಸಂದರ್ಭದಲ್ಲೂ ಈ ಇಲಾಖೆಗಳ ಸೇವೆ ಗಣನೀಯವಾಗಿದೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ಸ್ವತಃ ತಾನೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಚಿಕಿತ್ಸೆಯ ಅಗತ್ಯವಿದೆ. ಇಲಾಖೆಯ ಸಿಬ್ಬಂದಿಗಳಿಗೆ HRMS ತಂತ್ರಜ್ಞಾನದ ಮುಖಾಂತರ ಸಂಬಳ ನೀಡುವ ವ್ಯವಸ್ಥೆ ಆಗಿದೆಯಾದರೂ, ಸದಾ ಕಾಲ ಸಂಬಳ ವಿಳಂಬವಾಗುತ್ತಿದ್ದು, ನೌಕರರ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದೆ.

ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರಿಗೆ ಅಳವಡಿಕೆ ಮಾಡುವಲ್ಲಿ ವಿಳಂಬವಾಗುತ್ತಿದ್ದು, ಆರೋಗ್ಯ ಸೇವೆ ನೀಡುವ ನೌಕರರಿಗೇ ಸರ್ಕಾರದಡಿಯಲ್ಲಿ ಆರೋಗ್ಯ ಭಾಗ್ಯವಿಲ್ಲದಂತಾಗಿರುವುದು ನಿಜಕ್ಕೂ ದುರಂತವೆನ್ನಬಹುದು. ಇನ್ನು ತಮ್ಮ ಕೈಯಿಂದ ಹಣ ನೀಡಿ, ವೈದ್ಯಕೀಯ ಚಿಕಿತ್ಸೆ ಪಡೆದ ನಂತರವೂ, ವೈದ್ಯಕೀಯ ವೆಚ್ಚ ಮರುಸಂದಾಯವಾಗುವಲ್ಲಿ, ಅಸಮರ್ಪಕ ವಿಳಂಬ ಕಾಣಬರುತ್ತಿದೆ. ಇದರಿಂದ ನೌಕರನು ತನ್ನ ಮತ್ತು ತನ್ನ ಅವಲಂಭಿತ ಕುಟುಂಬದ ಆರೋಗ್ಯಕ್ಕೆ ದುಬಾರಿ ವೆಚ್ಚವನ್ನೇ ಭರಿಸಬೇಕಾಗುತ್ತಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿಯ ಅಳವಡಿಕೆಯಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಹಲವಾರು ನ್ಯಾಯಾಂಗ ಸಮಸ್ಯೆಗಳು, ವೇತನ ಬಡ್ತಿ ಮತ್ತು ಸೇವಾ ಮುಂಬಡ್ತಿಯಲ್ಲಿ ವಿಳಂಬ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದ್ದು, ನೌಕರರಲ್ಲಿ ಅಸಮಾಧಾನ ಸೃಷ್ಟಿಸಿದೆ. ಬೋಧಕೇತರ ವರ್ಗದವರಿಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳ ಅಳವಡಿಕೆಯಲ್ಲಿ ವಿಳಂಬವಾಗುತ್ತಿರುವುದರಿಂದ, ಇವರು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿಲ್ಲವೇ? ಎಂಬ ಅನುಮಾನ ಮೂಡಿಸುವಂತಾಗಿದೆ.
ದಿನಾಂಕ 01/04/2006ರಿಂದ 26/07/2020ರ ವರೆಗೆ ಸೇವೆಗೆ ನೇಮಕವಾದ ಸಿಬ್ಬಂದಿಗಳು ಪಿಂಚಣಿಯಿಂದ ವಂಚಿತರಾಗಿದ್ದು, ಸುಮಾರು 14 ವರ್ಷಗಳ ಪಿಂಚಣಿ ರಹಿತ ಸೇವಾ ಅವಧಿಯನ್ನು ಸೃಷ್ಟಿಸಿದಂತಾಗಿದೆ. ಹೊಸ ಪಿಂಚಣಿಗಾಗಿ ನೌಕರರ ಸಂಬಳದಿಂದ ಹಣ ಕಡಿತವಾಗುತ್ತಿದ್ದಾಗ್ಯೂ, ಈ ಹಣ ನೌಕರನ PRAN ಖಾತೆಗೆ ಸೇರಲು ಸುಮಾರು ನಾಲ್ಕು ತಿಂಗಳಷ್ಟು ಕಾಲ ವಿಳಂಬವಾಗುತ್ತಿದೆ. ಇದರಿಂದ ನೌಕರನಿಗೆ ನಿವೃತ್ತಿ ಸಮಯದಲ್ಲಿ ಸಿಗಬೇಕಾದ ಒಟ್ಟು ಮೊತ್ತದಲ್ಲೂ ಗಣನೀಯ ಇಳಿಕೆಯಾಗುತ್ತಿದೆ. ಇನ್ನು 01/04/2006ರ ನಂತರ ನೇಮಕವಾದ ನೌಕರ ಮತ್ತು ಅವನ ಅವಲಂಭಿತ ಕುಟುಂಬಕ್ಕೆ ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ವಿಸ್ತರಣೆಯಾಗಿರದ ಕಾರಣ, ನೌಕರನ ನಿವೃತ್ತಿ ಅಥವಾ ಮರಣಾ (ಸೇವೆಯಲ್ಲಿರುವಾಗ) ನಂತರ ನೌಕರ ಅಥವಾ ಅವನ ಕುಟುಂಬ ಬಹಳ ಕಷ್ಟ ಕಾರ್ಪಣ್ಯಕ್ಕೆ ಸಿಲುಕುವಂತಾಗಿದೆ. ಸೇವಾ ನಿರತ ನೌಕರನ ಮರಣದ ನಂತರ ಅವನ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡುವಲ್ಲಿಯೂ ಸಹ ವಿಳಂಬವಾಗುತ್ತಿರುವುದನ್ನೂ ಇಲ್ಲಿ ಗಮನಿಸಬೇಕಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನೇ ವೈದ್ಯಕೀಯ ಶಿಕ್ಷಣ ಇಲಾಖೆಯ ಖಾಲಿ ಇರುವ ಸ್ಥಾನಕ್ಕೆ ನಿಯೋಜಿಸುತ್ತಿರುವುದರಿಂದ, ಹಲವು ಗೊಂದಲಗಳು ಏರ್ಪಡುತ್ತಿವೆ. ವೈದ್ಯಕೀಯ ಶಿಕ್ಷಣ ಇಲಾಖೆಗಳು ಜಿಲ್ಲಾ ಆಸ್ಪತ್ರೆಗಳಂತೆ ಕಾರ್ಯನಿರ್ವಹಿಸುತ್ತಿರುವುದು ಕೂಡ, ಜನರಿಗೆ ಸಮರ್ಪಕ ಆರೋಗ್ಯ ಸೇವೆ ಸಲ್ಲಿಸುವಲ್ಲಿ ತೊಡಕನ್ನುಂಟು ಮಾಡುತ್ತಿದೆ. ಅಲ್ಲದೇ ಸರ್ಕಾರಿ ಕೌನ್ಸಿಲ್ ಗಳ ಸಭೆಗಳಲ್ಲಿ ನೌಕರರ ಸಂಬಂಧಿತ ವಿಚಾರಗಳ ಚರ್ಚೆಗೆ ಮಾನ್ಯತೆ ದೊರೆಯದಿರುವುದನ್ನು ಕಾಣಬಹುದಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು 1981ರ ಕರ್ನಾಟಕ ರಾಜ್ಯ ಸರ್ಕಾರ ಗುಂಪು ವಿಮಾ ಯೋಜನೆಯಡಿಯಲ್ಲಿ ಬರುವುದಿಲ್ಲವಾದ್ದರಿಂದ, ದೇಶದ ಉತ್ತಮ ವೀಮಾ ಯೋಜನೆಯ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.
ಕರ್ನಾಟಕ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯು ಕರ್ನಾಟಕ ಸಹಕಾರ ಸಂಘಗಳ ನೊಂದಾವಣಿ ಕಾಯಿದೆ ಅಡಿಯಲ್ಲಿ ರೂಪುಗೊಂಡಿದ್ದು, ಇವು ಸರ್ಕಾರೇತರ, ಲಾಭರಹಿತ ಸಂಸ್ಥೆಗಳಾಗಿದ್ದು, ರಾಷ್ಟ್ರೀಯ ಮಟ್ಟದ ಯಾವುದೇ ವೈದ್ಯಕೀಯ ಇಲಾಖೆಗಳಿಗೆ ಸಮಾನವಾದ ಗುಣಮಟ್ಟದ ಆರೋಗ್ಯ ಸೇವೆಯನ್ನು ಜನರಿಗೆ ನೀಡುವಲ್ಲಿ ಯಶಸ್ವಿಯಾಗಿ ಶ್ರಮಿಸುತ್ತಿವೆ. ಬದಲಾದ ಕಾಲಘಟ್ಟದಲ್ಲಿ, ದೂರದೃಷ್ಟಿಯಿಂದ ವೈದ್ಯಕೀಯ ಇಲಾಖೆಗಳನ್ನು ಬದಲಾಯಿಸಿ ಎಲ್ಲಾ ಏಮ್ಸ್ ಮಾದರಿಯಲ್ಲಿ ನಿರ್ಮಾಣ ಮಾಡಿ, ಎಲ್ಲಾ ವೈದ್ಯಕೀಯ ಮಹಾವಿದ್ಯಾಲಯಗಳು, ಮತ್ತು ಬೋಧನಾ ಸೂಪರ್ ಸ್ಪೆಷಾಲಿಟಿ ಸಂಸ್ಥೆಗಳಿಗೆ ಏಮ್ಸ್ ಮಾದರಿಯಲ್ಲಿ ನೀತಿ ನಿಯಮ ರೂಪಿಸುವ ಕಾಯಿದೆ ತರುವ ಅಗತ್ಯವಿದೆ. ಆ ಮೂಲಕ ಬಹಳಷ್ಟು ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಲಭಿಸಿ, ರೋಗಿಗಳಿಗೆ ಇನ್ನಷ್ಟು ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬಹುದಾಗಿದೆ.
ಇಂದು ಈ ಎಲ್ಲಾ ಸಮಸ್ಯೆಗಳನ್ನು, ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಸಿಬ್ಬಂದಿಗಳ ಕಲ್ಯಾಣ ಸಂಘ, ಕರ್ನಾಟಕ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಬೋಧಕೇತರ ಸಿಬ್ಬಂದಿಗಳ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ತಾಂತ್ರಿಕ ಅಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ತುರ್ತು ಚಿಕಿತ್ಸಾ ಘಟಕ ವೈದ್ಯಕೀಯ ಅಧಿಕಾರಿಗಳ ಸಂಘಗಳ ಪದಾಧಿಕಾರಿಗಳು ಹಾಜರಿದ್ದು ಮಾನ್ಯ ಸಚಿವರೊಂದಿಗೆ ಸಭೆ ನಡೆಸಿ, ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ನೌಕರರ ಅಹವಾಲುಗಳನ್ನು ಆಲಿಸಿದ ಮಾನ್ಯ ಸಚಿವರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ನೌಕರರಲ್ಲಿ ಭರವಸೆ ಮೂಡಿಸಿದೆ. ಇನ್ನಾದರೂ ಸಮಸ್ಯೆಗಳಿಗೆ ಅಂತ್ಯ ದೊರೆಯುವುದೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ : ಸಮಸ್ತ ವೈದ್ಯಕೀಯ ಕ್ಷೇತ್ರದ, ತಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಸೇವಾ ಭಾವನೆಯ ಮನಸುಗಳು…