ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನ 2024..
ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಅರಣ್ಯ ಸಂರಕ್ಷಣೆ ಆಗಬೇಕು..
ಟಿ ಎನ್ ಇನವಳ್ಳಿ, ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ..
ಬೆಳಗಾವಿ : ಹುತಾತ್ಮರ ಸ್ಮರಣ ದಿನಾಚರಣೆ ಎಂದರೆ, ಅರಣ್ಯ ಸಂರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ನೆನೆದು, ಪುಷ್ಪಾರ್ಚನೆ ಮಾಡುವುದಲ್ಲ, ಬದಲಾಗಿ ಅಂತಹ ಅನಾಹುತಗಳು ನಮ್ಮ ಎದುರು ಬರದಂತೆ, ಪ್ರಾಯೋಗಿಕವಾಗಿ, ವೃತ್ತಿಪರವಾಗಿ ಕರ್ತವ್ಯ ನಿರ್ವಹಿಸಿಬೇಕು, ಆಗ ಇಂತಹ ಜೀವಹಾನಿಯ ಪ್ರಸಂಗಗಳನ್ನು ತಡೆಯಬಹುದು ಎಂದು ಬೆಳಗಾವಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಟಿ ಎನ್ ಇನವಳ್ಳಿ ಹೇಳಿದ್ದಾರೆ..

ಬುಧವಾರ ದಿನಾಂಕ 11/09/2024 ರಂದು ಜಿಲ್ಲಾ ಅರಣ್ಯ ಇಲಾಖೆಯು ಆಯೋಜನೆ ಮಾಡಿದ “ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನ 2024” ರ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಭಾವನಾತ್ಮಕವಾದ ಇಂತಹ ಕಾರ್ಯಕ್ರಮಕ್ಕೆ ಆಗಮಿಸಿದಾಗ, ಇಲ್ಲಿಯ ಮಾತುಗಳನ್ನು ಕೇಳಿದಾಗ ತುಂಬಾ ನೋವಾಗುತ್ತದೆ, ನಮ್ಮ ರಾಜ್ಯದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದವರಲ್ಲಿ ಹೆಚ್ಚಿನವರು ಕೆಳ ಹಂತದ ಸಿಬ್ಬಂದಿಗಳು, ಅವರು ಯಾವ ಕಾರಣಕ್ಕಾಗಿ ಹುತಾತ್ಮರಾದರು? ಅದನ್ನು ತಿಳಿದು ಆ ರೀತಿಯ ತಪ್ಪು ಮತ್ತೆ ನಡೆಯದಂತೆ ನೋಡಿಕೊಂಡಾಗ ಮಾತ್ರ ಈ ಹುತಾತ್ಮ ಸ್ಮರಣೆಯ ದಿನದ ಸಾರ್ಥಕತೆ ಎಂದರು..
ಅರಣ್ಯ ಸಿಬ್ಬಂದಿಗಳು ಅಲ್ಲದೇ, ಜನಸಾಮಾನ್ಯರು ಕೂಡಾ ಅರಣ್ಯ ರಕ್ಷಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಅದಕ್ಕಾಗಿ ನಾವು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು ಅದರ ಜೊತೆಗೆ ಜನರೊಂದಿಗೆ ಪರಿಸರ ಅರಣ್ಯ ಸಂರಕ್ಷಣೆ ಕಾರ್ಯ ಮಾಡಬೇಕು ಎಂಬ ಸಲಹೆ ನೀಡಿದ್ದಾರೆ..

ಇನ್ನು ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ, ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಚವ್ಹಾಣ್ ಅವರು ಮಾತನಾಡಿ, ಅರಣ್ಯ ರಕ್ಷಣೆಯಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ ಹಸಿರು ಯೋಧರನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಅರ್ಪಿಸುವ ದಿನವಿದು, ನಮ್ಮ ರಾಜ್ಯದಲ್ಲಿಯೇ ನೂರಾರು ಅರಣ್ಯ ಯೋಧರು, ಅರಣ್ಯ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ, ನಿಷ್ಠಾವಂತ ಸೇವೆ ಮಾಡುತ್ತಾ ತಮ್ಮ ಜೀವವನ್ನೇ ತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ, ಅಂತ ತ್ಯಾಗಮಯಿಗಳಿಗೆ ಗೌರವ ಸಮರ್ಪಿಸಲು ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಹುತಾತ್ಮ ಸ್ಮರಣೆ ದಿನ ಎಂದು ಆಚರಣೆ ಮಾಡುತ್ತಿದ್ದೇವೆ..

ಕಾಡುಗಳ್ಳ ವೀರಪ್ಪನ್ ಹಾಗೂ ಆತನ ಸಹಚರರನ್ನು ಹಿಡಿಯಲು ನಮ್ಮ ಇಲಾಖೆಯ ಸಾಕಷ್ಟು ಸಿಬ್ಬಂದಿಗಳು ಪ್ರಾಣತ್ಯಾಗ ಮಾಡಿದ್ದಾರೆ, ಬೆಳಗಾವಿ ವೃತ್ತದಲ್ಲಿ ಕೂಡಾ ಅನೇಕರು ಅರಣ್ಯ ಸಂಪತ್ತಿನ ರಕ್ಷಣೆಯಲ್ಲಿ ತಮ್ಮ ಪ್ರಾಣ ಬಲಿ ನೀಡಿದ್ದಾರೆ, ಇಷ್ಟಲ್ಲದೇ 1730 ರಲ್ಲಿ ಜೋಧಪುರ ಪ್ರಾಂತ್ಯದಲ್ಲಿ ಕೇಜ್ರಿ ಮರಗಳ ರಕ್ಷಣೆಯಲ್ಲಿ, ಬಿಷ್ಣವಿ ಸಮುದಾಯದ ನೂರಾರು ಜನಸಾಮಾನ್ಯರೂ ಹಾಗೂ ಅರಣ್ಯ ರಕ್ಷಕರು ಅರಣ್ಯ ರಕ್ಷಣೆಯ ಸಲುವಾಗಿ ಹೋರಾಡಿ ತಮ್ಮ ಪ್ರಾಣ ಕಳೆದುಕೊಂಡಿದ್ದು ಮಹತ್ವದ ಸಂಗತಿಯಾಗಿದೆ ಎಂದರು..

ಇನ್ನು ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮರಿಯ ಕ್ರಿಸ್ತು ರಾಜಾ ಅವರು ಹುತಾತ್ಮರ ಹೆಸರುಗಳನ್ನು ಸ್ಮರಿಸುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು, ಎರಡು ನಿಮಿಷಗಳ. ಮೌನ ಆಚರಣೆಯ ಮೂಲಕ ಎಲ್ಲಾ ಹುತಾತ್ಮ ಜೀವಗಳಿಗೆ ಗೌರವ ನಮನ ಸಲ್ಲಿಸಲಾಯಿತು..

ಈ ವಿಶೇಷ ಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ವಿಕಾಸ ಕುಮಾರ ವಿಕಾಸ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..