ಲೋಕಸಭೆ ಚುನಾವಣೆ-2024: ನೀತಿಸಂಹಿತೆ ಜಾರಿ…

ಲೋಕಸಭೆ ಚುನಾವಣೆ-2024: ನೀತಿಸಂಹಿತೆ ಜಾರಿ..

ಮಾದರಿ ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ:

ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಸೂಚನೆ..

ಬೆಳಗಾವಿ, : ಭಾರತ ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುವುದರಿಂದತಕ್ಷಣದಿಂದಲೇ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿರುತ್ತದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಮಾದರಿ ನೀತಿಸಂಹಿತೆಯನ್ನು ಪಾಲನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಮಾ.16) ನಡೆದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಿತ್ತಪತ್ರ, ಗೋಡೆಬರಹ, ಕಟೌಟ್ ತೆರವುಗೊಳಿಸಲು ಸೂಚನೆ:

ಲೋಕಸಭಾ ಚುನಾವಣೆ-2024 ಘೋಷಣೆಯಾಗಿರುವುದರಿಂದ ಮಾದರಿ ನೀತಿಸಂಹಿತೆ ತಕ್ಷಣವೇ ಜಾರಿಗೆ ಬಂದಿರುತ್ತದೆ. ಆದ್ದರಿಂದ ಸರಕಾರ, ರಾಜಕೀಯ ಪಕ್ಷಗಳ ಜಾಹೀರಾತುಗಳು, ಚುನಾವಣಾ ಸಂಬಂಧಿತ ಎಲ್ಲ ಬಗೆಯ ಜಾಹೀರಾತುಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.

ಸಾರ್ವಜನಿಕ ಸ್ಥಳದಲ್ಲಿರುವ ಭಿತ್ತಿಪತ್ರ, ಗೋಡೆಬರಹ, ಬ್ಯಾನರ್, ಕಟೌಟ್ ಗಳನ್ನು 24 ಗಂಟೆಗಳಲ್ಲಿ ತೆರವುಗೊಳಿಸಬೇಕು.
ಪ್ರವಾಸಿಮಂದಿರದಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದ್ದರಿಂದ ಆಯಾ ತಹಶೀಲ್ದಾರರು ಪ್ರವಾಸಿಮಂದಿರಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು.

ಯಾವುದೇ ರೀತಿಯ ಟೆಂಡರ್ ಆಹ್ವಾನ, ವರ್ಗಾವಣೆಗಳಿಗೆ ನಿರ್ಬಂಧವಿರುತ್ತದೆ. ಸರಕಾರಿ ಅಧಿಕಾರಿಗಳು ಅನಗತ್ಯವಾಗಿ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡುವಂತಿಲ್ಲ.

ಚುನಾವಣಾ ಸಭೆ-ಸಮಾರಂಭಗಳಿಗೆ ಸುವಿಧಾ ಮೂಲಕ ಅನುಮತಿ:

ರಾಜಕೀಯ ಸಭೆ-ಸಮಾರಂಭಗಳಿಗೆ ಸುವಿಧಾ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮತಿ ನೀಡಬೇಕು. ರಾಜಕೀಯ ಸಭೆ-ಸಮಾರಂಭಗಳನ್ನು ನಡೆಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕೂಡಲೇ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಇಂದಿನಿಂದಲೇ ಎಲ್ಲ ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲ ಚೆಕ್ ಪೋಸ್ಟ್ ಹಾಗೂ ಸುವಿಧಾ ಏಕಗವಾಕ್ಷಿ ತಕ್ಷಣವೇ ಕಾರ್ಯಾರಂಭಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪರಸ್ಪರ ಸಮನ್ವಯತೆಗೆ ಅನುಕೂಲವಾಗುವಂತೆ ಪೊಲೀಸ್ ಹಾಗೂ ಇತರೆ ಸೆಕ್ಟರ್ ಅಧಿಕಾರಿಗಳ ತಂಡಗಳನ್ನು ರಚಿಸಬೇಕು ಎಂದು ತಿಳಿಸಿದರು.

ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಶ್ ಕುಮಾರ್ ವಿಕಾಶ್, ಬೆಳಗಾವಿ ಉಪ ಪೊಲೀಸ್ ಆಯುಕ್ತರಾದ ರೋಹನ್ ಜಗದೀಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಚುನಾವಣಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ ಪ್ರಕಾಶ ಕುರಗುಂದ..