ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಮೌಲ್ಯದ ಹಗರಣಕ್ಕೆ, ಲೆಕ್ಕ ಮೇಲ್ವಿಚಾರಕ ಆತ್ಮಹತ್ಯೆ.
ಇಲಾಖೆಯ ಉನ್ನತ ಅಧಿಕಾರಿಗಳು, ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ..
ಬೆಂಗಳೂರು : ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಸುಮಾರು 187 ಕೋಟಿ ಮೌಲ್ಯದ ಹಗರಣ ಜರುಗಿದ್ದು, ಇದರಲ್ಲಿ 85 ಕೋಟಿ ಹಣವನ್ನು ನಿಯಮ ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ, ಉನ್ನತಾಧಿಕಾರಿಗಳು ಮಾಡಿದ ತಪ್ಪು ನನ್ನ ಮೇಲೆ ಹಾಕುತ್ತಿದ್ದಾರೆ ಎಂದು ಮನನೊಂದು, ನಿಗಮದ ಲೆಕ್ಕಪರಿಶೋಧಕದ ಮೇಲ್ವಿಚಾರಕ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ..
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಸೂಪರಿಡೆಂಟ್ ಆದ ಚಂದ್ರಶೇಖರ್ ನೇಣಿಗೆ ಶರಣಾದ ಅಧಿಕಾರಿಯಾಗಿದ್ದು, ಇವರು ನನ್ನ ಸಾವಿಗೆ ನಿಗಮದ ಅಧಿಕಾರಿಗಳು ಹಾಗೂ ಇಲಾಖೆಯ ಸಚಿವರೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟಿರುವುದು ಪೊಲೀಸರಿಗೆ ಲಭ್ಯವಾಗಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಪದ್ಮನಾಭ, ಅಕೌಂಟ್ ವ್ಯವಸ್ಥಾಪಕ ಪರಶುರಾಮ ದುರ್ಗಣ್ಣನವರ್ ಹಾಗೂ ಯೂನಿಯನ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶುಚಿಸ್ಮಿತ ಕಾರಣವೆಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನದಿಂದ 80 ರಿಂದ 85 ಕೋಟಿ ನಿಯಮಬಾಹಿರವಾಗಿ ಲೂಟಿ ಮಾಡಲಾಗಿದೆ. ಈ ಅವ್ಯವಹಾರದಲ್ಲಿ ನನ್ನ ಪಾತ್ರವಿಲ್ಲ, ನಾನು ಮಾಡಿದ ತಪ್ಪೇನೆಂದರೆ ಕೆಲಸದ ಒತ್ತಡದಲ್ಲಿ ಸದರಿ ಖಾತೆಯ ಚೆಕ್ ಪುಸ್ತಕವನ್ನು ವಾಪಸ್ ಪಡೆಯದೇ ಇದ್ದಿದ್ದು. ಜೊತೆಗೆ, ನಿಗಮದ ಕ್ಯಾಶ್ ಪುಸ್ತಕವನ್ನು ಸರಿಯಾದ ಸಮಯದಲ್ಲಿ ಮುಕ್ತಾಯಗೊಳಿಸದಿರುವುದು, 85 ಕೋಟಿ ರೂ. ಮೌಲ್ಯದ ದೊಡ್ಡ ಹಗರಣಕ್ಕೆ ನಾನು ಕಾರಣವಲ್ಲ. ಆದರೆ ತಪ್ಪಿತಸ್ಥ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡೆತ್ ನೋಟ್‌ನಲ್ಲಿ ಆಗ್ರಹಿಸಿದ್ದಾರೆ.
ಇಲಾಖೆಯ ಸಚಿವರ ಮೌಖಿಕ ಸೂಚನೆಯ ಮೇರೆಗೆ ಉಪ ಖಾತೆ ತೆರೆದು ನಿಯಮಬಾಹಿರವಾಗಿ ಹಣ ವರ್ಗಾವಣೆ ಮಾಡಲಾಗಿದೆ. ವಾಲ್ಮೀಕಿ ನಿಗಮವು ಬೆಂಗಳೂರಿನ ವಸಂತನಗರ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಸಂಖ್ಯೆ 520101080091055 ಯಲ್ಲಿ ಉಳಿತಾಯ ಖಾತೆ ಹೊಂದಿದೆ. ಇದಕ್ಕೆ ಪ್ರತಿಯಾಗಿ ಬೆಂಗಳೂರಿನ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಒತ್ತಾಯ ಪೂರ್ವಕವಾಗಿ ಉಪಖಾತೆ ಸಂಖ್ಯೆ 520141001659653 ತೆರೆಯಲಾಗಿದೆ.
ವಿವಿಧ ಹಂತದಲ್ಲಿ ಒಟ್ಟು 187.33 ಕೋಟಿ ರೂಪಾಯಿ ಅನುದಾನವನ್ನು ವಿವಿಧ ಬ್ಯಾಂಕ್‌ಗಳ ಖಾತೆಯಿಂದ ಹಾಗೂ ರಾಜ್ಯ ಖಜಾನೆಯಿಂದ ಹೊಸ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..