ವಿದ್ಯುತ್ ಸಮಸ್ಯೆಗೆ ತಾವು ಯಾರ ಮನೆಯ ಮುಂದೆ ನಿಲ್ಲುವ ಅವಶ್ಯಕತೆ ಇಲ್ಲಾ..
ಧೈರ್ಯದಿಂದ ಮುಂದೆ ಬಂದು ನಮ್ಮ ಬಣಕ್ಕೆ ಮತ ನೀಡಿ..
ಟೀಕೆ ಟಿಪ್ಪಣಿ ಮಾಡುವದನ್ನು ಬಿಟ್ಟು ಜನರ ಕೆಲಸ ಮಾಡಿರಿ..
33 ವರ್ಷದ ಲೆಕ್ಕ ಕೊಡಲು ನಾನು ಸಿದ್ಧ, ನೀವು ಕೊಡುತ್ತೀರಾ?
ಬೆಳಗಾವಿ : ಹುಕ್ಕೇರಿಯ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ನಮ್ಮ ಬಣಕ್ಕೆ ತಾವು ಆಶೀರ್ವಾದ ಮಾಡಿದ್ದೆ ಆದರೆ, ಹುಕ್ಕೇರಿಯಲ್ಲಿ ಇನ್ನು ಮುಂದೆ ವಿದ್ಯುತ್ ಸಮಸ್ಯೆಗೆ ಜನರನ್ನು ಸೇರಿಸಿಕೊಂಡು ಯಾರ ಮನೆಯ ಮುಂದೆಯೂ ನಿಲ್ಲುವ ಅವಶ್ಯಕತೆ ಇರುವದಿಲ್ಲ, ಟಿಸಿ, ವಾಯರ, ಕಂಬ ಏನೇ ಸಮಸ್ಯೆ ಇದ್ದರೂ ನೇರವಾಗಿ ವಿದ್ಯುತ್ ಕಚೇರಿಗೆ ಹೋಗಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಗುರುವಾರ ಹುಕ್ಕೇರಿಯ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕರು, ಜನರು ಈ ಚುನಾವಣೆಯಲ್ಲಿ ಧೈರ್ಯದಿಂದ ಮುಂದೆ ಬಂದು ನಮ್ಮ ಪ್ಯಾನೆಲಗೆ ಮತ ನೀಡಿ ಆಶೀರ್ವದಿಸಬೇಕು, ಆಗ ವಿದ್ಯುತ್ ಸಂಬಂಧಿತ ಜನರ ಸಮಸ್ಯೆಗಳು ನಿಶ್ಚಯವಾಗಿ ಪರಿಹಾರ ಆಗುತ್ತವೆ, ಆಗ ಯಾರ ಮನೆಯ ಮುಂದೆ ನಿಲ್ಲುವ ಅವಶ್ಯಕತೆ ಇರುವದಿಲ್ಲ ಎಂದ ಶಾಸಕರು, ಒಳ್ಳೆಯ ಕೆಲಸ ಮಾಡಲು ನಾವು ಈ ಪ್ಯಾನೆಲ್ ಮೂಲಕ ತಮ್ಮ ಬಳಿ ಬಂದಿದ್ದೇವೆ ದಯಮಾಡಿ ತಾವು ಯಾರಿಗೂ ಹೆದರದೇ ಹೊರಗೆ ಬಂದು ಮತದಾನ ಮಾಡಿ, ದೇವರು ಇದೊಂದು ದೊಡ್ಡ ಅವಕಾಶವನ್ನು ತಮಗೆ, ನಮಗೆ ನೀಡಿದ್ದಾನೆ, ನಮಗೆ ತಮ್ಮ ಮತ ಹಾಕುವ ಮೂಲಕ ವಿದ್ಯುತ್ ಸಹಕಾರಿ ಸಂಘವನ್ನು ಉನ್ನತ ಮಟ್ಟಕ್ಕೆ ಬೆಳೆಸಿರಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ನಮ್ಮ ವಿರೋಧಿ ಬಣ ಹೇಗೆ ಭಾಷಣ ಮಾಡುತ್ತಿದ್ದಾರೆ ಎಂದು ತಾವು ನೋಡಿದ್ದೀರಿ, ಟೀಕೆ ಟಿಪ್ಪಣಿ ಮಾಡುವುದರಿಂದ ಉಪಯೋಗವಿಲ್ಲ, ಬಾಯಿಗೆ ಬಂದಂಗೆ ಮಾತಾಡಿದರೆ ಜನ ಒಪ್ಪುವುದಿಲ್ಲ, ಜನರು ಬುದ್ಧಿವಂತರಿದ್ದಾರೆ, ಯಾರು ಹೇಗೆ ಎಂದು ಎಲ್ಲವನ್ನೂ ತಿಳಿದಿದ್ದಾರೆ, ತಾವು ದಯಮಾಡಿ ರೈತರು, ಜನರು ಒಪ್ಪುವಂತಹ ಕಾರ್ಯ ಮಾಡಿರಿ, ನಿಮ್ಮ ಹಾಗೆ ನಾವು ಕೆಳ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ ಎನ್ನುವ ಮೂಲಕ ವಿರೋಧಿ ಬಣಕ್ಕೆ ಮಾತಿನ ಚಾಟಿ ಬೀಸಿದ್ದಾರೆ.
ನಿಮ್ಮ ಸಂಸ್ಥೆಗಳ ಲೆಕ್ಕ ಕೊಡಿ ಎಂದು ಕೇಳುತ್ತಾರೆ, ನಾನು ಈ ವೇದಿಕೆ ಮೂಲಕ ಅವರಿಗೆ ವಿನಂತಿ ಮಾಡುವೆ, ನಾನು 33 ವರ್ಷದ ಘಟಪ್ರಭಾ ಸುಗರ್ ಪ್ಯಾಕ್ಟರಿ ಲೆಕ್ಕ ಕೊಡುವೆ, ಸತೀಶ್ ಜಾರಕಿಹೊಳಿ ಪ್ಯಾಕ್ಟರಿ ಲೆಕ್ಕ ಕೊಡುವೆ, ಇನ್ನೂ ನಮ್ಮ ಅಸ್ತಿತ್ವದ ಪ್ಯಾಕ್ಟ್ರಿಗಳ ಒಂದೊಂದು ರೂಪಾಯಿಗಳ ಲೆಕ್ಕ ಕೊಡುವೆ, ಆದರೆ ನೀವೂ ಕೂಡಾ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಲೆಕ್ಕ ಕೊಡಬೇಕು, ಹತ್ತು ವರ್ಷದ ಡಿಸಿಸಿ ಬ್ಯಾಂಕ ಲೆಕ್ಕ ಕೊಡಬೇಕು, ವಿದ್ಯುತ್ ಸಹಕಾರಿ ಸಂಘದ ಲೆಕ್ಕ ಕೊಡಬೇಕು ಪ್ರತಿಯೊಂದರ ಲೆಕ್ಕವನ್ನು ನೀವು ಕೊಡಬೇಕು, ನಾವು ಕೊಡಬೇಕು, ನಾವು ಈಗಲೂ ಸಿದ್ದವಿದ್ದೇವೆ, ಚುನಾವಣೆ ನಂತರವೂ ಸಿದ್ಧರಿದ್ದೇವೆ, ರೈತರ ಎದುರೇ ನಾವು ಲೆಕ್ಕ ನೀಡಲು ಸಿದ್ಧರಿದ್ದೇವೆ, ನೀವು ಲೆಕ್ಕ ಕೊಡಲು ಸಿದ್ದರಾಗಿ, ನಾವು ತಪ್ಪು ಮಾಡಿದ್ದರೆ ನಮಗೆ ಶಿಕ್ಷೆ ಆಗಲಿ, ನೀವು ಮಾಡಿದ್ದರೆ ನಿಮಗೆ ಆಗಲಿ, ಹುಕ್ಕೇರಿ ಜನ ಏನು ತೀರ್ಮಾನ ಮಾಡುತ್ತಾರೋ ಅದು ಆಗಲಿ ಎಂದು ಖಡಕ್ಕಾಗಿ ಹೇಳಿದ್ದಾರೆ.
ನೀವು ಯಾವಾಗ ಬೇಕಾದರೂ, ಎಲ್ಲಿಯಾದರೂ ಕರೆದರೂ ಬಂದು ನಾವು ಲೆಕ್ಕ ಕೊಡುತ್ತೇವೆ, ಅದೇ ರೀತಿ ತಾವು ಕೂಡಾ ಜನರ ಮುಂದೆ ಲೆಕ್ಕ ನೀಡಬೇಕು, ಇದೆಲ್ಲಕ್ಕಿಂತ ಮುಖ್ಯವಾದದ್ದು ಈ ಭಾಗದ ಜನರಿಗೆ ಒಳ್ಳೆ ಕೆಲಸ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಮತ ಕೇಳಿ, ಅಂತಿಮವಾಗಿ ಹುಕ್ಕೇರಿ ಜನರು ಯಾರಿಗೆ ಆಶೀರ್ವಾದ ಮಾಡುತ್ತಾರೋ, ಏನು ತೀರ್ಮಾನ ಮಾಡುತ್ತಾರೋ ಅದು ಆಗುತ್ತೆ, ಜನರ ನಿರ್ಧಾರವನ್ನು ಎರಡು ಪಕ್ಷಗಳು ಒಪ್ಪಬೇಕಾಗುತ್ತದೆ, ಆದಕಾರಣ ನಾನು ಜನರಲ್ಲಿ ವಿನಂತಿ ಮಾಡಿಕೊಳ್ಳುವದೇನೆಂದರೆ ಈ ಚುನಾವಣೆಯಲ್ಲಿ ನಮ್ಮ ಪ್ಯಾನೆಲ್ಲಿಗೆ ಗೆಲುವು ತಂದು ಕೊಟ್ಟಿದ್ದೆ ಆದರೆ ಹುಕ್ಕೇರಿ ತಾಲೂಕಿಗೆ ಹಾಗೂ ರೈತರಿಗೆ ಒಳ್ಳೆಯದಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..