ಶನಿವಾರ ಸಂತೆಯಾದ ಪರಿಷತ್ ಸಾಮಾನ್ಯ ಸಭೆ..

ಬೆಳಗಾವಿ ಪಾಲಿಕೆ ಪರಿಷತ್ತಿನ ಸಾಮಾನ್ಯ ಸಭೆ..

ಶನಿವಾರದ ಸಂತೆಯಾದ ಪರಿಷತ್ ಸಾಮಾನ್ಯ ಸಭೆ..

ಶಾಸಕ ಅಭಯ ಪಾಟೀಲ್ ಅಸಮಾಧಾನ..

ಬೆಳಗಾವಿ : ಮಹಾನಗರ ಪಾಲಿಕೆಯ ಪರಿಷತ್ ಸಾಮಾನ್ಯ ಸಭೆ ಎನ್ನುವದು ಶನಿವಾರದ ಸಂತೆಯಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ, ನಗರ ಸೇವಕರಾದವರು ಸಭೆಯ ಗಾಂಭೀರ್ಯವನ್ನು ತಿಳಿದುಕೊಂಡು ಚರ್ಚೆ ಮಾಡಬೇಕು ವಿನಃ, ಸಂತೆಯಲ್ಲಿ ಗದ್ದಲ ಮಾಡುವಂತೆ ಮಾತನಾಡಬಾರದೆಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಗುರುವಾರ ದಿನಾಂಕ 05/12/2024ರಂದು ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡಾವಳಿಯ ಚರ್ಚೆಯ ವಿಷಯವಾಗಿ ಮಾತನಾಡಿದ ಅವರು, ನಗರ ಸೇವಕರು ಯಾವುದೇ ವಿಷಯದ ಚರ್ಚೆಯಲ್ಲಿ ಎಲ್ಲರೂ ವಾದ ವಿವಾದ ಮಾಡದೇ ಒಬ್ಬಬ್ಬರಾಗಿ ಮಾತನಾಡಿ ವಿಷಯ ಮಂಡಿಸುವ ಕಾರ್ಯ ಮಾಡಬೇಕು. ಅದನ್ನು ಬಿಟ್ಟು ಎಲ್ಲರೂ ಒಟ್ಟಿಗೆ ಚರ್ಚೆಗೆ ಇಳಿದು ಗಲಾಟೆ ಮಾಡುವುದರಿಂದ ಸಭೆಯು ಶನಿವಾರದ ಸಂತೆಯಂತೆ ಆಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ..

ಸಭೆಯ ಪ್ರಾರಂಭದಲ್ಲಿ ಹಿಂದಿನ ಸಭೆಯ ನಡಾವಳಿಕೆಯನ್ನು ಓದಿ ಅನುಮೋದನೆ ಮಾಡಲಾಗಿದ್ದು,
ಸಭೆಯ ನಡವಳಿ ಮಾಹಿತಿಯ ಪಸ್ತಿಕೆಯನ್ನು ಮರಾಠಿ ಭಾಷೆಯಲ್ಲಿ ನೀಡಬೇಕು ಎಂದು ಎಂಇಎಸ್ ನಗರ ಸೇವಕರು ಪ್ರಶ್ನೆ ಮಾಡಿದ್ದು, ಅದಕ್ಕೆ ಆಡಳಿತ ಪಕ್ಷದ ಅಧ್ಯಕ್ಷರಾದ ಗಿರೀಶ್ ದೊಂಗಡಿ ಸೇರಿ ಬಿಜೆಪಿಯ ಕೆಲ ನಗರ ಸೇವಕರು ಇದು ಮುಗಿದು ಹೋದ ವಿಷಯವಾಗಿದ್ದು, ಸರ್ಕಾರದ ನಿಯಮದ ಪ್ರಕಾರ ಆಡಳಿತ ಭಾಷೆ ಕನ್ನಡ ಇರುವದರಿಂದ ಕನ್ನಡದಲ್ಲಿ ನೀಡುತ್ತಿದ್ದಾರೆ ಎಂಬ ಸ್ಪಷ್ಟನೆ ನೀಡಿದರು..

ಅದನ್ನು ಆಲಿಸದ ಎಂಇಎಸ್ ನಗರ ಸೇವಕರು ಹಿಂದೆ ನೀಡುತ್ತಿದ್ದರು ಆದಕಾರಣ ಈಗಲೂ ಮರಾಠಿಯಲ್ಲಿ ನೀಡಬೇಕು ಎಂದು ಪಟ್ಟು ಹಿಡಿದಾಗ, ಶಾಸಕ ಆಶೀಫ್ ಸೇಠ್ ಅವರು ಕೇವಲ ನಡಾವಳಿ ಮಾಹಿತಿಯನ್ನು ಮರಾಠಿಯಲ್ಲಿ ನೀಡಿದರೆ ತೊಂದರೆಯೇನು ಎಂದು ಹೇಳಿದರೆ, ಕಾಂಗ್ರೆಸ್ ನಾಮನಿರ್ದೇಶಿತ ನಗರಸೇವಕರಾದ ರಮೇಶ್ ಸೊಂಟಕ್ಕಿ ಮಾತನಾಡಿ, ಮರಾಠಿ ಮಾಹಿತಿ ಬೇಕು ಎನ್ನುವವರು ಈಗ 40 ವರ್ಷ ಇಲ್ಲಿ ಇದ್ದರೂ ಕನ್ನಡ ಏಕೆ ಕಲಿಯಲಿಲ್ಲ, ಆಡಳಿತ ಭಾಷೆ ಕನ್ನಡ ಇರುವದರಿಂದ ನಗರ ಸೇವಕರಾಗಿ ಅವರು ಕನ್ನಡ ಕಲಿಯಬೇಕಿತ್ತಲ್ಲ ಎಂದು ಪ್ರಶ್ನೆ ಮಾಡಿದಾಗ ಸಭೆ ಶಾಂತವಾಗಿತ್ತು..

ಇನ್ನೂ ಮುಂದುವರೆದು ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಮೂಜಾಮಿಲ್ ದೋನಿ ಅವರು ಉರ್ದು ಭಾಷೆಯಲ್ಲಿ ಕೂಡಾ ನಡಾವಳಿಯ ಮಾಹಿತಿ ಪತ್ರಿಕೆಯನ್ನು ನೀಡಬೇಕು ಎಂದರು..

ಆರೋಗ್ಯ ಮತ್ತು ಸಾಮಾನ್ಯ ಸ್ಥಾಯಿ ಸಮಿತಿಯ ವತಿಯಿಂದ ಆಯ್ಕೆಯಾಗುವ ಸಹಾಯಧನದ ಫಲಾನುಭವಿಗಳ ಪಟ್ಟಿಯಲ್ಲಿ ಬದಲಾವಣೆ ಆಗಿರುವ ಕುರಿತಾಗಿ ವಿರೋಧ ಪಕ್ಷದ ನಾಯಕರು ಪ್ರಶ್ನೆ ಮಾಡಿದಾಗ, ಆಗಿರುವ ಬದಲಾವಣೆ ಕುರಿತಾಗಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಆಡಳಿತ ಉಪ ಆಯುಕ್ತರು ಕೆಲ ಗೊಂದಲಗಳೊಂದಿಗೆ ಸ್ಪಷ್ಟನೆ ನೀಡಿದ್ದು, ಆಡಳಿತ, ವಿರೋಧ ಹಾಗೂ ನಾಮನಿರ್ದೇಶಿತ ನಗರಸೇವಕರೆಲ್ಲಾ ಫಲಾನುಭವಿಗಳ ಪಟ್ಟಿಯಲ್ಲಿ ಆದ ವ್ಯತ್ಯಾಸದ ಚರ್ಚೆ ಮಾಡಿ ಇಡೀ ಸಭೆಯನ್ನು ಗೊಂದಲದ ಗೂಡಾಸಿದ್ದು, ಸಭೆಯ ಧೀರ್ಘ ಸಮಯವನ್ನು ಫಲಾನುಭವಿಗಳ ಪಟ್ಟಿ ನುಂಗಿದಂತಾಯಿತು..

ನಂತರ ಮಧ್ಯ ಪ್ರವೇಶಿಸಿ ಮಾತನಾಡಿದ ಬೆಳಗಾವಿ ದಕ್ಷಿಣದ ಶಾಸಕರಾದ ಅಭಯ ಪಾಟೀಲ ಅವರು, ಎಲ್ಲರೂ ಒಮ್ಮೆಲೆ ಹೀಗೆ ಮಾತಾಡಿ ಗಲಾಟೆ ಮಾಡುತ್ತಾ ಚರ್ಚೆ ಮಾಡಿದರೆ, ಅದು ಪರಿಷತ್ತಿಗೆ ಅವಮಾನ, ಪರಿಷತ್ ಸಭೆಯ ಗಣತೆ ಗಾಂಭೀರ್ಯತೆಯನ್ನು ಕಾಪಾಡಿ, ಎಂದು ಬುದ್ಧಿವಾದ ಹೇಳಿ, ಪಾಲಿಕೆಯಲ್ಲಿ ಲಭ್ಯವಿರುವ ಅನುದಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಅನುದಾನ ಲಭ್ಯತೆ ಇದ್ದರೆ, ಎಲ್ಲಾ ಅರ್ಜಿದರಾರನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿ ಸಮಸ್ಯೆಗೆ ಪರಿಹಾರ ನೀಡಿದರು.

ಇನ್ನು ನಗರ ಸೇವಕ ಸಂದೀಪ್ ಜಿರಾಗ್ಯಾಳ ಮಾತನಾಡಿ ನಗರದ ಕ್ಲಬ್ ರಸ್ತೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ದಿ, ಬಿ ಶಂಕರಾನಂದ ಅವರ ಹೆಸರು ಇಡುವ ಪ್ರಸ್ತಾವನೆಯನ್ನು ಮಾಡಲಾಗಿ, ಈ ವಿಷಯವನ್ನು ಸಭೆಯು ಸರ್ವಾನುಮತದಿಂದ ಅನುಮೋದನೆ ಮಾಡಲಾಯಿತು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..