ಶುಶ್ರೂಷಕಿಯರ ಸೇವೆಯೂ ವೈದ್ಯರಷ್ಟೇ ಶ್ರೇಷ್ಠ..
ಶುಶ್ರುಷಕಿಯರ ವೃತ್ತಿಪರತೆಗೆ ಸಚಿವ ಸತೀಶ್ ಜಾರಕಿಹೊಳಿ ಬಣ್ಣನೆ..
ಬೆಳಗಾವಿ : ಆ.02: ರೋಗಿಯನ್ನು ಸ್ವಸ್ಥಗೊಳಿಸುವಲ್ಲಿ ವೈದ್ಯರಷ್ಟೇ ಶುಶ್ರೂಷಕಿಯರೂ ಶ್ರೇಷ್ಠ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ಸರ್ವರೂ ಶುಶ್ರೂಷಕಿಯರ ಸೇವೆಯನ್ನು ಗುರುತಿಸಿ, ಗೌರವಿಸುವ ಸಹಜಗುಣ ರೂಢಿಸಿಕೊಳ್ಳಬೇಕಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ನಗರದ ಬಿಮ್ಸ್ ಕಾಲೇಜಿನ ಪ್ರಸಕ್ತ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಪಾದಾರ್ಪಣೆಯ ಪ್ರತಿಜ್ಞೆ ಸ್ವೀಕರಣೆ ಮತ್ತು ಪ್ಲಾರೆನ್ಸ್ ನೈಟಿಂಗೇಲ್ ಅವರ ಸ್ಮರಣಾರ್ಥ ಜ್ಯೋತಿ ಬೆಳಗುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರದ್ಧೆ, ಸಹನೆ, ಸಮಚಿತ್ತದೊಂದಿಗೆ ತಾವು ಸಲ್ಲಿಸುವ ಸೇವೆಯು ತಾವು ಕಲಿತ ಬಿಮ್ಸ್ ಸಂಸ್ಥೆ, ಬೋಧಕರಿಗೆ ಹಾಗೂ ಇಡೀ ಜಿಲ್ಲೆಯ ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಭಾವಿ ಶುಶ್ರೂಷಕಿಯರಿಗೆ ಕಿವಿಮಾತು ಹೇಳಿದರು. ಜೀವರಕ್ಷಕ ಅತೀ ಶ್ರೇಷ್ಠ ವೈದ್ಯಕೀಯ ಕ್ಷೇತ್ರವನ್ನು ತಮ್ಮ ವೃತ್ತಿ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ಬಿಮ್ಸ್ ಸಂಸ್ಥೆಯ ಮುಖ್ಯಸ್ಥ ಮತ್ತು ನಿರ್ದೇಶಕ ಡಾ. ಅಶೋಕ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕಳೆದ 15 ವರ್ಷಗಳಿಂದ ಸಂಸ್ಥೆಯ ನರ್ಸಿಂಗ್ ಕಾಲೇಜು ಗುಣಮಟ್ಟದ ಪ್ರಾಯೋಗಿಕ ಶಿಕ್ಷಣ ನೀಡುವುದರ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಸಂಪನ್ಮೂಲ ಶುಶ್ರೂಷಕಿಯರನ್ನು ಕೊಡುಗೆ ನೀಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಂಸ್ಥೆಯ ಹೃದಯ ಆರೋಗ್ಯ ಸುರಕ್ಷೆ ವಿಭಾಗದ ಹಿರಿಯ ಸಂಯೋಜಕರಾದ ರಾಜೀವ್ ಕೃಷ್ಣಮೇತ್ರಿ ಅವರು ಅತಿಥಿಗಳಾಗಿ ಮಾತನಾಡಿ, ಶುಶ್ರೂಷಕಿಯರ ಸೇವೆಯ ಮಹತ್ವವನ್ನು ತಿಳಿಸಿದರು. ವೈದ್ಯರಿಗೆ ಬೆನ್ನೆಲುಬು ರೀತಿಯಲ್ಲಿ ತಮ್ಮ ಸೇವೆ ಗುರುತಿಸಿಕೊಳ್ಳುತ್ತದೆ. ಆದ್ದರಿಂದ ಸೇವೆಯಲ್ಲಿ ಜವಾಬ್ದಾರಿ ಮರೆಯಬಾರದು ಎಂದು ಹೇಳಿದರು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶುಶ್ರೂಷಕಿಯರ ಹೊರತಾಗಿ ವೈದ್ಯರ ಸೇವೆ ಪೂರ್ಣಗೊಳ್ಳಲಾರದು ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಬಿಮ್ಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸಿದ್ದು ಹುಲ್ಲೋಳಿ, ಮುಖ್ಯ ಲೆಕ್ಕಧಿಕಾರಿ ಶಿಲ್ಪಾ ವಾಲಿ, ಮತ್ತಿತರರು ಉಪಸ್ಥಿತರಿದ್ದರು..