ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ 2023 ಅಂಗೀಕಾರ…

ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ 2023 ಅಂಗೀಕಾರ…

ಬೆಳಗಾವಿ ಸುವರ್ಣ ಸೌಧ,: ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ 2023 ನ್ನು ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಕಾನೂನು,ಸಂಸದೀಯ ವ್ಯವಹಾರಗಳು,ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ಅವರು ವಿಧಾನಪರಿಷತ್ ಸದನಕ್ಕೆ ಮಂಡಿಸಿದರು.

ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ಮಾತನಾಡಿ, ಪ್ರಾಧಿಕಾರ ರಚಿಸುತ್ತಿರುವುದು ಸ್ವಾಗತಾರ್ಹ ಕನಿಷ್ಠ 500 ಕೋಟಿ ರೂ.ಮೀಸಲಿಟ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು,

ತೇಜಸ್ವಿನಿಗೌಡ ಮಾತನಾಡಿ, ಬಡವರು, ಬಲ್ಲಿದರೆನ್ನದೇ ಎಲ್ಲ ವರ್ಗಗಳ ಕೋಟ್ಯಂತರ ಭಕ್ತರು ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬರುತ್ತಾರೆ, ಧಾರ್ಮಿಕ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಯಾಗಲಿ, ಜನರು ಮುಗ್ದ ಭಕ್ತಿಯಿಂದ ಲೇಪಿಸುವ ಭಂಡಾರದಲ್ಲಿ ರಸಾಯನಿಕಗಳನ್ನು ಬೆರೆಸುವುದನ್ನು ತಡೆಯಬೇಕು.

ಮಲಪ್ರಭೆ, ತುಂಗಭದ್ರೆ ಸೇರಿದಂತೆ ಎಲ್ಲ ನದಿ ಪಾತ್ರಗಳಲ್ಲಿ ಆರತಿ ಕಾರ್ಯಗಳು ನಡೆಯಲಿ ಎಂದರು.

ಕೇಶವಪ್ರಸಾದ್ ಅವರು ಮಾತನಾಡಿ, ದೇಶದ ನಾನಾ ಭಾಗಗಳಿಂದ ಕೋಟ್ಯಂತರ ಜನ ಭೇಟಿ ನೀಡುವ ಪವಿತ್ರ ಧಾರ್ಮಿಕ ಸ್ಥಳವನ್ನು ಇಲ್ಲಿನ ಸಮೀಪದ ವಿಮಾನ ನಿಲ್ದಾಣ, ವಂದೇ ಭಾರತ್ ರೈಲು ಸಂಪರ್ಕದ ಸೌಕರ್ಯ ಬಳಸಿಕೊಂಡು ಅಭಿವೃದ್ಧಿಪಡಿಸಬೇಕು ಎಂದರು.

ಸದಸ್ಯರಾದ ನವೀನ್, ಟಿ. ಎ. ಶರವಣ, ಪ್ರತಾಪಸಿಂಹ ನಾಯಕ್, ನಾಗರಾಜ ಯಾದವ್, ಹೇಮಲತಾ ನಾಯಕ, ಭಾರತಿಶೆಟ್ಟಿ, ಚನ್ನರಾಜ ಹಟ್ಟಿಹೊಳಿ, ಕೋಟ ಶ್ರೀನಿವಾಸ ಪೂಜಾರಿ, ಬಿ.ಕೆ.ಹರಿಪ್ರಸಾದ,ಕೆ.ಎ.ತಿಪ್ಪೇಸ್ವಾಮಿ, ಉಮಾಶ್ರೀ, ಪಿ.ಹೆಚ್.ಪೂಜಾರ, ಹನುಮಂತ ನಿರಾಣಿ, ಸುನೀಲ್ ವಲ್ಯಾಪುರೆ ಮತ್ತಿತರರು ಮಾತನಾಡಿ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಧಾರ್ಮಿಕ ಪ್ರವಾಸೋದ್ಯಮ ಯೋಜನೆ ರೂಪಿಸುವುದು ಸ್ವಾಗತಾರ್ಹ ಎಂದರು.

ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ಮಾತನಾಡಿ, ಪಕ್ಷಬೇಧವಿಲ್ಲದೇ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಈ ವಿಧೇಯಕಕ್ಕೆ ಬೆಂಬಲ ವ್ಯಕ್ತ ಪಡಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಭರತ ಹುಣ್ಣಿಮೆಯ ದಿನದಂದು ಒಂದೇ ದಿನ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನ ಸೇರಿ ವಸತಿ ಮಾಡಿ, ಅಲ್ಲಿಯೇ ಸಿಹಿ ಹೋಳಿಗೆ ಮಾಡಿ, ನೈವೇದ್ಯ ಒಯ್ಯುವ ಕಟ್ಟು ನಿಟ್ಟಿನ ಶ್ರದ್ಧೆ, ಭಕ್ತಿಯ ಆಚರಣೆಗಳು ಇಲ್ಲಿ ಸಾಂಗವಾಗಿ ನಡೆಯುತ್ತಿವೆ. ದೊಡ್ಡ ಪ್ರಮಾಣದ ಭಕ್ತರು ಆಗಮಿಸುವ ಈ ಪವಿತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು. ಸರ್ಕಾರದ ಜೊತೆಗೆ ಖಾಸಗಿ ವ್ಯಕ್ತಿ, ಸಂಸ್ಥೆಗಳು ಕೈ ಜೋಡಿಸಬೇಕು, ಪ್ರಸಿದ್ಧ ಕ್ಷೇತ್ರಕ್ಕೆ ಈವರೆಗೆ ರೈಲು ಸಂಪರ್ಕ ಇಲ್ಲದಿರುವುದು ವಿಷಾದನೀಯ ಗೋಕಾಕ್ ರೋಡ್ ರೈಲು ನಿಲ್ದಾಣ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಮುಂಬರುವ ದಿನಗಳಲ್ಲಿ ಜಾರಿಗೆ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದಾಗ ಸದಸ್ಯರು ಸರ್ವಾನುಮತದಿಂದ ಮೇಜು ಕುಟ್ಟಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ವಿಧೇಯಕವು ವಿಧಾನಪರಿಷತ್‌ನಲ್ಲಿ ಅಂಗೀಕಾರ ಪಡೆಯಿತು.

ವರದಿ ಪ್ರಕಾಶ್ ಕುರಗುಂದ…