ಸಚಿವರ ಖಡಕ್ ಹೇಳಿಕೆಗೆ, ಸ್ವಲ್ಪ ಸಮಯದಲ್ಲೇ ಸೈಲೆಂಟಾಗಿ, ಕೊನೆಯಾದ ಪಾಲಿಕೆ ಪರಿಷತ್ ಸಭೆ..
ಪಾಲಿಕೆ ಮೇಯರ್ ಅವರು ಶಾಸಕ ಅಭಯ ಪಾಟೀಲರ ಕೈಗೊಂಬೆ ಆಗಿದ್ದಾರೆ..
ಹಾಗಂತ ಅಧಿಕಾರಿಗಳನ್ನು ಬ್ಲ್ಯಾಕ್ಮೇಲ್ ಮಾಡುವ ತಂತ್ರವನ್ನು ಸಹಿಸೊಲ್ಲ…
ಬೆಳಗಾವಿ : ಶನಿವಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ಪರಿಷತ್ ಸಭೆ ಕೊನೆಗೊಂಡ ನಂತರ ಮಧ್ಯಾಹ್ನದವರೆಗೂ ಸಭೆಯಲ್ಲಿ ನಡೆದ ಗಲಾಟೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು, ಶಾಸಕ ಅಭಯ ಪಾಟೀಲ್ ಅವರು, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವಿರುದ್ಧ ಬ್ಲ್ಯಾಕ್ಮೇಲ್ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ನೇರವಾಗಿ ಆರೋಪಿಸಿದರು..

‘ಆಸ್ತಿ ಕರ ಪರಿಷ್ಕರಣೆಗೆ ಸಂಬಂಧಿಸಿ ಸರ್ಕಾರಕ್ಕೆ ಮಾಹಿತಿ ಕೊಡುವಾಗ ಯಾವುದೋ ಸಣ್ಣ ತಪ್ಪಾಗಿರಬಹುದು. ಅದನ್ನು ದೊಡ್ಡದಾಗಿ ಬಿಂಬಿಸಿ, ಇಷ್ಟೊಂದು ಚರ್ಚಿಸುವ ಅಗತ್ಯವಿರಲಿಲ್ಲ. ಯಾವುದೇ ಅಧಿಕಾರಿ ನನ್ನ ಮಾತು ಕೇಳಬೇಕು. ನಾನು ಹೇಳಿದಂತೆಯೇ ಪಾಲಿಕೆಯಲ್ಲಿ ನಡೆಯಬೇಕು ಎಂಬುದು ಅಭಯ ಪಾಟೀಲ ನಿಲುವು. ಹಾಗಾಗಿ ಇಂಥ ಬ್ಲ್ಯಾಕ್ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಅವರು ಹೀಗೆ ವರ್ತಿಸುತ್ತಿರುವುದು ಇದೇ ಮೊದಲೇನಲ್ಲ’ ಎಂದು ತಿವಿದರು.
‘ಮೇಯರ್ ಶೋಭಾ ಸೋಮನ್ನಾಚೆ ಅವರು, ಅಭಯ ಪಾಟೀಲ ಕೈಗೊಂಬೆಯಾಗಿದ್ದಾರೆ. ಆಸ್ತಿ ಪರಿಷ್ಕರಣೆಗೆ ಸಂಬಂಧಿಸಿ ಮೇಯರ್ ಸಹಿ ಹಾಕಿದ್ದ ಓರಿಜನಲ್ ಪತ್ರವನ್ನು ಪಾಲಿಕೆಯ ಆಡಳಿತ ಗುಂಪಿನ ಸದಸ್ಯರು ಕದ್ದಿರಬಹುದು. ಅದನ್ನು ಮನೆಯಲ್ಲಿ ಇಟ್ಟು ಬಂದಿರಬಹುದು. ಅದಕ್ಕೆ ಆಯುಕ್ತರ ಮೇಲೆ ಹರಿಹಾಯ್ದರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಧಿಕಾರಿಗಳ ಕ್ಲರಿಕಲ್ ಹಂತದ ಸಣ್ಣ ತಪ್ಪಿಗಾಗಿ ಇಡೀ ಪರಿಷತ್ ಸಮಯವನ್ನು ಹಾಳು ಮಾಡುತ್ತಾ, ತಮ್ಮ ನಗರ ಸೇವಕರಿಗೆ ಸೂಪರ್ ಸೀಡ್ ಭಯ ಹುಟ್ಟಿಸಿ, ಮುಂಜಾನೆಯಿಂದ ಸಂಜೆವರೆಗೂ ತವಡು ಕಟ್ಟುವ ಕೆಲಸ ಮಾಡುವದು, ಆ ಮೂಲಕ ಅಧಿಕಾರಿಗಳನ್ನು ತನ್ನ ಕೈವಶ ಮಾಡಿಕೊಳ್ಳುವ ಈ ಶಾಸಕನ ತಂತ್ರ, ಇವರ ಮಾತು ಕೇಳಿ ಪಾಪ ತಮ್ಮ ಕೆಲಸ ಕಾರ್ಯ ಬಿಟ್ಟು ಕುಳಿತ ನಗರ ಸೇವಕರು ಇನ್ನಾದರೂ, ಹುಷಾರಾಗಿ ತಮ್ಮ ವಾರ್ಡುಗಳ ಅಭಿವೃದ್ದಿ ಕೆಲಸದಲ್ಲಿ ನಿರತರಾಗಬೇಕು ಎಂದು ಕಿವಿಮಾತು ಹೇಳಿದರು.
‘ಪಾಲಿಕೆಯಲ್ಲಿ 138 ಪೌರ ಕಾರ್ಮಿಕರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡ ಪ್ರಕರಣದ ವಿಚಾರವಾಗಿ ಚರ್ಚಿಸಲು ಅವರಿಗೆ ಶಕ್ತಿಯಿಲ್ಲ. ಹಾಗಾಗಿ ತರಾತುರಿಯಲ್ಲಿ ಸಭೆ ಮುಗಿಸಿದರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಿಯಮ ಬಾಹಿರವಾಗಿ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅಕ್ರಮ ನಡೆದಿವೆ. ಸ್ಮಾರ್ಟ ಸಿಟಿ ಕಾಮಗಾರಿಯ ಒಂದೊಂದು ಕಂಬಗಳು, ಇಟ್ಟಿಗೆಗಳು ಈ ಶಾಸಕನ ಹೆಸರಿನಲ್ಲಿ ಕಣ್ಣೀರು ಹಾಕುತ್ತಿವೆ, ಆ ಅಕ್ರಮದ ಈ ಬಗ್ಗೆಯೂ ತನಿಖೆ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವರದಿ ಪ್ರಕಾಶ ಕುರಗುಂದ..