ಮನಸ್ಸು ಮತ್ತು ದೇಹ ಒಂದೇ ಗುರಿಯತ್ತ ಸಾಗಿದಾಗ ಯಶಸ್ಸು ಸಾಧ್ಯ.
ಸಮಯವೆಂಬ ಸಂಪತ್ತನ್ನು ಸದುಪಯೋಗ ಮಾಡಿಕೊಂಡರೆ ಯಶಸ್ವಿ, ಇಲ್ಲವಾದರೆ ಭವಿಷ್ಯ ಬೀದಿಪಾಲು..
ಹಾಸ್ಟೆಲ್ ವಿಧ್ಯಾರ್ಥಿಗಳಿಗೆ ಗಣ್ಯಮಾನ್ಯರ ಕಿವಿಮಾತು.
ಬೆಳಗಾವಿ : ಈಗಿನ ಆಧುನಿಕ ಸ್ಮಾರ್ಟ್ ಮೊಬೈಲ್ ಯುಗದಲ್ಲಿ ಎಂತಹ ಮಾಹಿತಿಯನ್ನದರೂ ಸರಳವಾಗಿ ಪಡೆಯಬಹುದು, ಗೂಗಲ್ ಅಲ್ಲಿ ಯುಪಿಎಸ್ಸಿ ಎಂದು ಟೈಪ್ ಮಾಡಿದರೆ, ಸಂಪೂರ್ಣ ಮಾಹಿತಿ ಪಡೆಯಬಹುದು, ಆದರೆ ಯುಪಿಎಸ್ಸಿ ಪರೀಕ್ಷೆ ದೇಶದಲ್ಲಿ ಅಷ್ಟೇ ಅಲ್ಲದೇ ಜಗತ್ತಿನಲ್ಲಿಯೇ ಕಠಿಣವಾದ ಪರೀಕ್ಷೆ ಎಂದರೆ ತಪ್ಪಾಗಲಾರದು, ಅಂತಹ ಪರೀಕ್ಷೆಯಲ್ಲಿ ಯಶಸ್ವಿ ಸಾಧಿಸಲು ನಮ್ಮ ಮನಸ್ಸಿನಲ್ಲಿ ಸಧೃಡ ಛಲ ಹಾಗೂ ದೇಹ ಒಂದೇ ಗುರಿಯತ್ತ ಸಾಗಿದಾಗ ಯಶಸ್ಸು ಸಾಧಿಸಬಹುದೆಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗೂಳೆದ ಅವರು ಹೇಳಿದ್ದಾರೆ.

ಶನಿವಾರ ದಿನಾಂಕ 26/04/2025ರಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯ ವಸತಿ ನಿಲಯಗಳ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಗಾರದ ಉದ್ಘಾಟಕರಾಗಿ ಆಗಮಿಸಿ ನೆರೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಧ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನದ ಮಾತುಗಳನ್ನು ಆಡಿದ್ದಾರೆ.
ಐವತ್ತು ನಮ್ಮ ನಡುವೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕರಿದ್ದಾರೆ, ಅವರು ಬಡ ಕುಟುಂಬದವರು, ಕಷ್ಟಪಟ್ಟು ಎಲ್ಲಾ ಅಡೆತಡೆಗಳನ್ನು ಮೀರಿ, ದೃಢ ಸಂಕಲ್ಪದಿಂದ ಓದಿ ಸಾಧನೆ ಮಾಡಿದವರು, ನಿಮಗೆಲ್ಲ ಅವರಿಗಿಂತ ಬೇರೆ ಸ್ಪೂರ್ತಿ ಬೇಕಿಲ್ಲಾ, ನಿಮಗೆಲ್ಲ ಒಂದು ನಿರ್ಧಿಷ್ಟ ಗುರಿ ಇರಬೇಕು, ಗುರಿ ಸಾಧಿಸುವ ಛಲ, ಆ ಛಲಕ್ಕೆ ದೇಹ ಸಾತ ನೀಡಬೇಕು, ಬರುವ ಅಡೆತಡೆಗಳನ್ನು ಮೀರಿ ತಾವು ಗುರಿಯ ಕಡೆಗೆ ಸಾಗಿದರೆ ತಮಗೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದಿದ್ದಾರೆ.

ಇದಾದ ನಂತರ ಜಿಲ್ಲೆಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ಸ್ ಆದಂತ ಹನುಮಂತ ನಂದಿ ಹಾಗೂ ಸಂಜಯ ಕೌಜಲಗಿ ಅವರು ನೆರೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಅನುಭವಗಳನ್ನು ಹಾಗೂ ಮಾರ್ಗದರ್ಶನವನ್ನು ನೀಡಿದ್ದು, ತಾವು ಈ ಸಾಧನೆ ಮಾಡಬೇಕಾದರೆ ಏನೆಲ್ಲಾ ಅಡೆತಡೆ, ಸಮಸ್ಯೆಗಳನ್ನು ಎದುರಿಸಿದ್ದೇವೆ, ಆದರೂ ಕೂಡ ಯಾವ ರೀತಿಯ ಅಧ್ಯಯನ ಮಾಡಿ, ಯಶಸ್ಸು ಗಳಿಸಬೇಕು ಎಂಬ ಅಂಶಗಳನ್ನು ಹೇಳಿಕೊಂಡಿದ್ದು, ಕಾರ್ಯಾಗಾರದಲ್ಲಿ ಭಾಗಿಯಾದ ಸಾವಿರಾರು ವಿದ್ಯಾರ್ಥಿಗಳಿಗೆ ಹತ್ತುಹಲವು ಹೊಸ ವಿಷಯಗಳನ್ನು ತಮ್ಮ ಅನುಭವದ ಮಾತುಗಳಿಂದ ತಿಳಿಸಿಕೊಟ್ಟಿದ್ದಾರೆ.

ಇದಾದ ನಂತರ, ಕಾರ್ಯಾಗಾರದಲ್ಲಿ ನೆರೆದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಯುಪಿಎಸ್ಸಿ ಟಾಪರ್ಸಗಳು ಯುಪಿಎಸ್ಸಿ ಪರೀಕ್ಷೆಯ ತಯಾರಿ, ಸಂದರ್ಶನ, ಪಠ್ಯಕ್ರಮ, ಅಧ್ಯಯನ ಸಮಯ, ತರಬೇತಿ, ವಿಫಲತೆ, ಮಾರ್ಗದರ್ಶನ, ಮುಂತಾದ ವಿಷಯಗಳ ಕುರಿತಾಗಿ ತಮಗಿರುವ ಪ್ರಶ್ನೆಗಳನ್ನು ಕೇಳಿದಾಗ, ಜಿಲ್ಲೆಯ ಯುಪಿಎಸ್ಸಿ ಟಾಪರ್ಸ್ ಹನುಮಂತ ನಂದಿ ಹಾಗೂ ಸಂಜಯ ಕೌಜಲಗಿ ಅವರು ಉತ್ತಮ ಪರಿಹಾರಗಳನ್ನು ತಿಳಿಸಿ, ವಿಧ್ಯಾರ್ಥಿಗಳ ಸಂಶಯಗಳನ್ನು ದೂರ ಮಾಡಿದ್ದಾರೆ.

ವಸತಿ ನಿಲಯಗಳಲ್ಲಿ ಅಧ್ಯಯನ ಮಾಡುವ ತಮ್ಮಂತ ವಿಧ್ಯಾರ್ಥಿಗಳ ಮೇಲೆ ತುಂಬಾ ಜವಾಬ್ದಾರಿ ಇರುತ್ತದೆ, ಸರಿಯಾಗಿ ಅಧ್ಯಯನ ಮಾಡಬೇಕು, ದುಶ್ಚಟಗಳಿಗೆ ತಾವು ಬಲಿಯಾಗದೇ ತಮ್ಮ ಸ್ನೇಹಿತರೂ ಬಲಿಯಾಗದಂತೆ ನೋಡಿಕೊಳ್ಳಬೇಕು, ಸರ್ಕಾರ ತಮ್ಮ ಮೇಲೆ ಮಾಡುವ ಖರ್ಚಿಗೆ, ತಮ್ಮ ಪಾಲಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಮೋಸ ಆಗದಂತೆ ಶಿಸ್ತಿನಿಂದ ಅಧ್ಯಯನ ಮಾಡಿ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕೆಂಬ ಕಿವಿಮಾತು ಹೇಳಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಯುವಸಮೂಹವನ್ನು ಜಾಗೃತಗೊಳಿಸುವ ತಮ್ಮ ಉಪನ್ಯಾಸದ ಮಾತುಗಳ ಮೂಲಕ ವಿಧ್ಯಾರ್ಥಿಗಳ ಮಲಗಿದ ಮನಸುಗಳನ್ನು ಬಡಿದೆಬ್ಬಿಸುವಂತಹ ಕಾರ್ಯ ಮಾಡಿದ್ದು ಮೈಸೂರಿನ ಡಾ ಶಿವಕುಮಾರ ಬಿ ವಿ ಎಸ್ ಅವರು, ವಿಧ್ಯಾರ್ಥಿಗಳ ವ್ಯಕ್ತಿತ್ವ ಹೇಗೆ ರೂಪಿಸಿಕೊಳ್ಳಬೇಕು ಎಂಬ ವಿಷಯದ ಕುರಿತು ಮಾತನಾಡುತ್ತಾ ಇತ್ತೀಚೆಗೆ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ನಾವೆಲ್ಲಾ ಆಚರಣೆ ಮಾಡಿದ್ದೇವೆ, ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವರಿಗಿಂತ ಉತ್ತಮ ನಿದರ್ಶನ ಬೇಕಾ ಎಂದ ಅವರು ಅಂಬೇಡ್ಕರ ಅವರ ಸಾಧನೆ ದೇಶಕ್ಕೆ ಅವರ ಕೊಡುಗೆಗಳ ಬಗ್ಗೆ ಮೊದಲು ತಿಳಿದುಕೊಳ್ಳಿ, ಆಗ ಅವರ ದೂರದೃಷ್ಟಿಯ ವಿಚಾರವನ್ನು ನೀವು ಪೂರ್ಣಗೊಳಿಸಲು ಸಾಧ್ಯ ಎಂದರು.

ದೇಶದಲ್ಲಿ ಇಂದು ಇಸ್ಟೊಂದು ಸಾಕ್ಷರತೆಯ ಪ್ರಮಾಣ ವೃದಿಯಾಗಿದ್ದಾರೆ ಅದು ಅಂಬೇಡ್ಕರ್ ಅವರ ಕೊಡುಗೆ, ದೇಶದ ಎಲ್ಲಾ ಪ್ರಜೆಗಳು ವಿದ್ಯೆ ಪಡೆಯುವ ಹಕ್ಕನ್ನು ಬಾಬಾಸಾಹೇಬರು ನೀಡಿದ್ದಾರೆ, ಅಂಬೇಡ್ಕರ ಅವರಿಗೆ ಶಾಲೆಯಿಂದ ಹಿಡಿದು ಅವರು ಕಲಿತು ಅಧಿಕಾರಿಯಾಗುವವರೆಗೂ ಅವಮಾನ ಆಗಿತ್ತು, ಆದರೆ ಅವರು ಬೌದ್ಧ ಧರ್ಮದ ತತ್ವದ ಅನುಯಾಯಿ ಆಗಿದ್ದರಿಂದ ಶಾಂತಿ, ಪ್ರಜಾಪ್ರಭುತ್ವ, ಅಹಿಂಸಾತ್ಮಕತೆಯಿಂದ ಎಲ್ಲವನ್ನೂ ಗೆಲ್ಲುತ್ತಾ ಹೋದರು, ಇದರಿಂದ ಬಾಬಾಸಾಹೇಬರು ಎಷ್ಟು ನೊಬೆಲ್ ಕೊಟ್ಟರೂ ಕಡಿಮೆಯೇ ಎಂದರು.

ಆದರೆ ಬಾಬಾಸಾಹೇಬರಿಗೆ ಇಂದು ಮುಖ್ಯ ಆಸೆ ಇತ್ತು, ಈ ಸ್ವತಂತ್ರ ಭಾರತವನ್ನು ನನ್ನ ಜನತೆ ಆಳಬೇಕು ಅದನ್ನು ನಾನು ನೋಡಬೇಕು ಎಂಬ ಮಹದಾಸೆ ಇತ್ತು, (ಎಸ್ಸಿ ಎಸ್ಟಿ ಒಬಿಸಿ) ಆದರೆ ಎಪ್ಪತ್ತು ವರ್ಷವಾದರೂ ಆ ಆಸೆ ಈಡೇರಿಲ್ಲ, ಬಾಬಾಸಾಹೇಬರ ಆಸೆಯನ್ನು ಈಡೇರಿಸಬೇಕಾದದ್ದು ಹಾಸ್ಟೆಲಿನಲ್ಲಿ ಓದುತ್ತಿರುವ ನೀವಲ್ಲವೇ ಎಂದಿದ್ದಾರೆ, ಬಾಬಾಸಾಹೇಬರ ಆಸೆ ಈಡೇರಿಸುವ ಸಲುವಾಗಿ ದಿನಕ್ಕೆ ಆರು ಗಂಟೆ ಅಧ್ಯಯನ ಮಾಡಲು ನಿಮಗೆ ಏನಾಗಿದೆ? ಜಯಂತಿಯ ದಿನ ಹಾಡುತ್ತಿರಾ, ಕುಣಿಯುತ್ತಿರಾ, ಘೋಷಣೆ ಕೂಗಿತ್ತಿರಾ, ಮೈಬಗ್ಗಿಸಿ ಕುಳಿತು ಓದಲಿಕ್ಕೆ ಏನು ರೋಗ ಬಂದಿದೆ ನಿಮಗೆ? ಬಾಬಾಸಾಹೇಬರ ತರಹ ನೀವು ಯಾಕೆ ಓದುವದಿಲ್ಲ ಎಂದು ವಿಧ್ಯಾರ್ಥಿಗಳನ್ನು ಖಾರವಾಗಿ ಕೇಳಿದರು.

ಅಂಬೇಡ್ಕರ ಅವರ ಸ್ನೇಹಿತರೆಲ್ಲ ತಿರುಗಾಡಿ, ಮೋಜು ಮಾಡುವಾಗ ಅವರು ಹತ್ತು ಹನ್ನೆರಡು ಗಂಟೆ ಓದುತ್ತಿದ್ದರಲ್ಲ, ನಿಮಗೇನು ಓದಲಿಕ್ಕೆ, ನಿಮ್ಮ ಪಾಲಕರಿಗೆ ಹಣವಿಲ್ಲ ಅದಕ್ಕೆ ನಿಮ್ಮನ್ನು ಹಾಸ್ಟೆಲಿಗೆ ಹಾಕಿದ್ದಾರೆ, ಇಲ್ಲಿ ನೀವು ಓದಿ ಜ್ಞಾನ ಪಡೆಯದಿದ್ದರೆ ಮುಂದೆ ಏನು ಮಾಡುತ್ತೀರಾ? ಬಾಬಾಸಾಹೇಬರಿಗೆ ಅವರು ಗಳಿಸಿದ ಜ್ಞಾನದಿಂದಲೇ ಅವರಿಗೆ ಎಲ್ಲಾ ಕಡೆಗೆ ಮನ್ನಣೆ ದೊರೆತು, ಎಲ್ಲಾ ಸಮಿತಿಗಳಲ್ಲಿ, ಸಂವಿಧಾನ ರಚನೆಯಲ್ಲಿ ಮುಂದಾಳತ್ವ ಒದಗಿತು. ಜ್ಞಾನವೇ ಶಕ್ತಿ, ಜ್ಞಾನವಿದ್ದರೆ ನಿಮ್ಮನ್ನು ಕರೀತಾರೆ, ನಿಮ್ಮತ್ತ ನೋಡುತ್ತಾರೆ, ಹಾಸ್ಟೆಲಲ್ಲಿ ಇದ್ದು ನೀವು ಜ್ಞಾನ ಪಡಿತಾ ಇಲ್ಲ ಅಂದರೆ ನೀವೆಷ್ಟು ಮೋಸಗಾರರು ಎಂದು ವಿದ್ಯಾರ್ಥಿಗಳು ಬದಲಾಗಲು ಪ್ರೇರಣೆ ನೀಡಿದರು.
ಇಂದಿನಿಂದ ಸಂಕಲ್ಪ ಮಾಡಿ, ಹಾಸ್ಟೆಲ್ ಅಲ್ಲಿ ಇರುವಂತ ನೀವು ನ್ಯಾಯವಾಗಿ ಓದಬೇಕು, ಬಸವಣ್ಣನವರು “ಕಾಯಕ ನಿಷ್ಠೆ” ಅಂತ ಒಂದು ಮಾತು ಹೇಳಿದ್ದಾರೆ, ವಿಧ್ಯಾರ್ಥಿಗಳ ಕಾಯಕ ಓದುವದು ಅದನ್ನು ಸರಿಯಾಗಿ, ನ್ಯಾಯವಾಗಿ, ಮಾಡಿ, ಇಲ್ಲವಾದರೆ ಮನೆಗೆ ಹೋಗಿ, ಯಾಕೆ ಇರಬೇಕು ಹಾಸ್ಟೆಲಿನಲ್ಲಿ, ಸಮಯವೆಂಬ ಸಂಪತ್ತನ್ನು ಸರಿಯಾಗಿ ಉಪಯೋಗಿಸಿಕೊಂಡು ಓದಿ ಆಗ ನೀವು ಕೂಡಾ ಹನುಮಂತ ನಂದಿ ಹಾಗೂ ಸಂಜೀವ ಕೌಜಲಗಿ ಹಾಗೆ ದೊಡ್ಡ ಪರೀಕ್ಷೆಯಲ್ಲಿ ಸಾಧನೆ ಮಾಡುತ್ತೀರಾ, ಇಲ್ಲವಾದರೆ ಬೀದಿಯಲ್ಲಿ ಅಲೆಯುತ್ತಿರಾ ಎಂದು ಖಡಕ್ಕಾಗಿ ಹೇಳಿದ್ದಾರೆ.

ಇನ್ನು ಈ ವಿಶೇಷ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಸಂಪನ್ಮೂಲ ವ್ಯಕ್ತಿಗಳು, ಎಲ್ಲಾ ನಾಲ್ಕು ಇಲಾಖೆಯ ನಿಲಯಪಾಲಕರು ಹಾಗೂ ಸಿಬ್ಬಂದಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..