ಸಮಾಜ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹೇಶ್ ಉಣ್ಣಿಯವರಿಗೆ ವಯೋನಿವೃತ್ತಿ..
ಉಣ್ಣಿಯವರ ಮೂವತ್ತಾರು ವರ್ಷಗಳ ಸುದೀರ್ಘ ಸೇವೆ ಇತರರಿಗೆ ಮಾದರಿ..
ರಾಮಗೌಡ ಕನ್ನೊಳಿ, ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ..
ಬೆಳಗಾವಿ : ಸಮಾಜ ಕಲ್ಯಾಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಮೂವತ್ತಾರು ವರ್ಷ, ಏಳು ತಿಂಗಳುಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಮಹೇಶ್ ಉಣ್ಣಿ ಅವರ ಸೇವಾಕಾರ್ಯ ಇಲಾಖೆಗೆ ಉತ್ತಮ ಹೆಸರು ತಂದಿದ್ದು, ಅವರ ಕಾರ್ಯವೈಖರಿ ಇತರ ಸಿಬ್ಬಂದಿಗಳಿಗೂ ಮಾದರಿಯಾಗಿದೆ ಎಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮಗೌಡ ಕನ್ನೋಳ್ಳಿ ಅವರು ಹೇಳಿದ್ದಾರೆ.
ಶುಕ್ರವಾರ ದಿನಾಂಕ 28/02/2024 ರಂದು ನಗರದ ಇಲಾಖಾ ಕಚೇರಿಯ ಸಭಾಭವನದಲ್ಲಿ ಜರುಗಿದ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಮಹೇಶ ಉಣ್ಣಿ ಅವರ ವಯೋನಿವೃತ್ತಿಯ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಇಲಾಖೆಯ ಜಂಟಿ ನಿರ್ದೇಶಕರು ಮಹೇಶ್ ಉಣ್ಣಿ ಅವರ ಯಶಸ್ವಿ ಸೇವಾ ಅವಧಿಯ ಕಾರ್ಯವನ್ನು ಪ್ರಶಂಸಿಸಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆಶಿಸಿದ್ದಾರೆ..

ಇನ್ನು ಈ ಭಾವನಾತ್ಮಕ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಉಮಾ ಸಾಲಿಗೌಡರ, ಬಸವರಾಜ ಕುರಿಹುಲಿ ಅವರೂ ಕೂಡ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಸೇವಾ ನಿವೃತ್ತಿ ಪಡೆಯುತ್ತಿರುವ ಮಹೇಶ್ ಉಣ್ಣಿ ಅವರ ವೃತ್ತಿಜೀವನದ ಬಗ್ಗೆ ಹಾಗೂ ಇಲಾಖೆಯ ಕೆಲಸದಲ್ಲಿ ಅವರ ಉತ್ಸುಕತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
1988 ರಲ್ಲಿ ತಮ್ಮ ವೃತ್ತಿ ಜೀವನಕ್ಕೆ ಕಾಲಿಟ್ಟ ಮಹೇಶ್ ಉಣ್ಣಿಯವರು, ಇಲಾಖೆಯ ವಿವಿಧ ಹುದ್ದೆಗಳಲ್ಲಿ ರಾಯಭಾಗ, ಗೋಕಾಕ, ಅಥಣಿ, ಹುಕ್ಕೇರಿ, ಖಾನಾಪುರ, ಬೈಲಹೊಂಗಲ್, ರಾಮದುರ್ಗ ಹಾಗೂ ಬೆಳಗಾವಿ ತಾಲೂಕುಗಳಲ್ಲಿ, ಅದರಂತೆ ರಾಯಚೂರು, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಹಾಯಕ ನಿರ್ದೇಶಕರು, ಕಚೇರಿ ವ್ಯವಸ್ಥಾಪಕರು, ತಾಲೂಕು ಅಧಿಕಾರಿ ಹೀಗೆ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದು, ಅವರು ನೀಡಿದ ಸುಮಾರು 36 ವರ್ಷಗಳ ಸುದೀರ್ಘ ಸೇವೆಯನ್ನು ಎಲ್ಲರೂ ಮೆಚ್ಚಿ ಕೊಂಡಾಡಿದ್ದಾರೆ.

ವಯೋನಿವೃತ್ತಿ ಹೊಂದಿರುವ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಮಹೇಶ ಉಣ್ಣಿ ಅವರು ನನ್ನ ನೆಚ್ಚಿನ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ತೃಪ್ತಿ ಇಂದು ನನಗಿದೆ, ನನ್ನ ಸೇವಾ ಅವಧಿಯುದ್ದಕ್ಕೂ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಇಲಾಖೆಯ ಸಚಿವರುಗಳಿಗೆ, ಪ್ರಧಾನ ಕಾರ್ಯದರ್ಶಿಗಳಿಗೆ, ಆಯುಕ್ತರಿಗೆ, ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳಿಗೆ, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಿಗೆ, ಎಸ್ಸಿ ಎಸ್ಟಿ ಮುಖಂಡರುಗಳಿಗೆ, ದಲಿತ ಸಂಘಟನೆ ಪ್ರಮುಖರಿಗೆ ನಾನು ಸದಾ ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಅದೇ ರೀತಿ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ಇಲಾಖೆಯ ಸಹೋದ್ಯೋಗಿಗಳಿಗೆ ನನ್ನ ಪ್ರೀತಿ ಪೂರ್ವಕ ನಮನಗಳು ಎಂದು ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಎಲ್ಲರ ಸಹಕಾರವನ್ನು ನೆನೆದಿದ್ದಾರೆ..
ಈ ವಯೋನಿವೃತ್ತಿ ಬೀಳ್ಕೊಡುಗೆಯ ಕಾರ್ಯಕ್ರಮದಲ್ಲಿ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಕಚೇರಿಯ ಸಿಬ್ಬಂದಿಗಳು, ಜಿಲ್ಲೆಯ ಕೆಲ ವಸತಿ ಶಾಲೆಗಳ ಸಿಬ್ಬಂದಿಗಳು ಹಾಗೂ ನಿವೃತ್ತಿ ಪಡೆಯುತ್ತಿರುವ ಮಹೇಶ್ ಉಣ್ಣಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..