ಸರ್ವರಿಗೂ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು..
ದೇಶದ ಪ್ರಗತಿ ಆಗಬೇಕೆಂದರೆ ಮೊದಲು ನಮ್ಮ ಮನೆ ಚೆನ್ನಾಗಿರಬೇಕು..
ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಎಂಬುದಕ್ಕೆ ನಮ್ಮ ಸಂಸಾರವೇ ಸಾಕ್ಷಿ..
ಜಿಲ್ಲಾಧಿಕಾರಿ ಮಹಮ್ಮದ್ ರೋಷನ್..
ಬೆಳಗಾವಿ : ಸರ್ವರಿಗೂ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು, ನಮ್ಮ ಭಾರತ ದೇಶದ ಮೂಲವೆಂದರೆ ಮೌಲ್ಯಗಳು, ಅವೆಂದರೆ ವಿವಿಧತೆಯಲ್ಲಿ ಏಕತೆ, ಶಾಂತಿ, ಸಹಿಷ್ಣುತೆ ಹಾಗೂ ಸೌಹಾರ್ದತೆ ಇವುಗಳನ್ನು ನಾವು ಕಾಪಾಡಿಕೊಂಡು ದೇಶದ ಪ್ರಗತಿಯತ್ತ ಸಾಗಬೇಕು ಎಂದು ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ತಿಳಿಸಿದ್ದಾರೆ.

ರವಿವಾರ ದಿನಾಂಕ 26/01/2025 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವದ ನಿಮಿತ್ತ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿ, ಈ ದೇಶದ ಮೂಲ ಮೌಲ್ಯಗಳನ್ನು ನಾವೆಲ್ಲಾ ಕಾಪಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದ್ದಾರೆ.

ದೇಶ ಅಭಿವೃದ್ಧಿ ಆಗಬೇಕೆಂದರೆ ಮೊದಲು ನಾವು ನಮ್ಮ ಮನೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ನಾನಿಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ನಮ್ಮ ಮನೆಯವರು ಈ ಸಂಭ್ರಮದಲ್ಲಿ ಅವರು ಭಾಗಿಯಾಗಿದ್ದು, ಅವರಿಗೆ ನಾನು ವೈಯಕ್ತಿಕವಾಗಿ ಗಣರಾಜ್ಯೋತ್ಸವದ ಶುಭಾಶಯ ತಿಳಿಸುತ್ತೇನೆ ಎಂದರು.
ದೇಶದ ಮೌಲ್ಯಗಳಾದ ವಿವಿಧತೆಯಲ್ಲಿ ಏಕತೆ, ಶಾಂತಿ, ಸಹಿಷ್ಣುತೆ ಹಾಗೂ ಸೌಹಾರ್ದತೆ ಇವೆಲ್ಲವನ್ನೂ ನಾವು ಕಾಪಾಡಿಕೊಂಡು ಹೋಗಬೇಕು, ಈ ಮೌಲ್ಯಗಳನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ, ಯಾಕೆಂದರೆ ನಾವೆಲ್ಲಾ ಒಂದೇ, ನಾವೆಲ್ಲಾ ಯಾವುದೇ ಜಾತಿ, ಮತ, ಕುಲ, ಬೇಧಭಾವಗಳು ಇಲ್ಲದೇ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದರು.

ನಾವೆಲ್ಲಾ ಒಂದೇ ಎಂಬುದಕ್ಕೆ ನಮ್ಮ ಕುಟುಂಬವೇ ಸೂಕ್ತ ಉದಾಹರಣೆ ಆಗಿದೆ, ನನ್ನ ಧರ್ಮಪತ್ನಿಯವರು ಕೂಡಾ ನಾಗರಿಕ ಸೇವಾ ಹುದ್ದೆಯಲ್ಲಿರುವವರು, ಅವರು ಹಿಮಾಚಲದವರು ಅವರ ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರ, ಊಟ, ಉಡುಗೆ ತೊಡುಗೆ ಬೇರೆಬೇರೆ ಆದರೆ ಈಗ ಇಲ್ಲಿ ಕರ್ನಾಟಕದಲ್ಲಿ ಕಡಕ್ ರೊಟ್ಟಿ ಹಾಗೂ ರಾಗಿ ಮುದ್ದೆ ತಿನ್ನುತ್ತಾರೆ, ಅದೇರೀತಿ ನಾನು ನನ್ನ ಮಾವನ ಮನೆ ಹಿಮಾಚಲಕ್ಕೆ ಹೋದಾಗ ಅಲ್ಲಿಯ ರೀತಿ ನೀತಿ ಪದ್ಧತಿಗೆ ಹೊಂದಿಕೊಳ್ಳುವೆ, ಇದೆಯಲ್ಲವೇ ವಿವಿಧತೆಯಲ್ಲಿನ ಏಕತೆ? ಎಂದು ಮಾರ್ಮಿಕವಾಗಿ ಹೇಳಿದಾಗ ಎಲ್ಲರಿಂದ ಚಪ್ಪಾಳೆಯ ಸುರಿಮಳೆ.

ಈ ಜಿಲ್ಲೆಯ ಅಭಿವೃದ್ಧಿ ಆಗಬೇಕೆಂದರೆ ನಾವೆಲ್ಲರೂ ಒಂದಾಗಿ, ಸಜ್ಜಾಗಿ ಕೆಲಸ ಮಾಡಬೇಕು, ನಮ್ಮ ದೇಶ ತುಂಬಾ ವಿಶಾಲವಾದ ದೇಶ, ನಮ್ಮದು ಯಾವುದೇ ಹಿನ್ನೆಲೆ ಇದ್ದರೂ, ದೇಶದ ಕೆಲಸ ಮಾಡಲು ನಮಗೆ ಈ ದೇಶ ತುಂಬಾ ಅವಕಾಶ ಮಾಡಿ ಕೊಟ್ಟಿದೆ, ಇಷ್ಟೊಂದು ಅವಕಾಶಗಳನ್ನು ಯಾವ ದೇಶವೂ ನೀಡುವುದಿಲ್ಲ, ಅಂತಹ ಅದ್ಬುತ ದೇಶ ನಮ್ಮದು, ನಾವೆಲ್ಲರೂ ಇಂದು ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತ, ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ದೇಶದ ಪ್ರಗತಿಗಾಗಿ ಕೆಲಸ ಮಾಡೋಣ ಎಂದರು.

ವರದಿ ಪ್ರಕಾಶ ಬಸಪ್ಪ ಕುರಗುಂದ.