ಸಾಮಾಜಿಕ ಕ್ರಾಂತಿಗೆ ಮುಂದಾದ ಲಿಂಗಾಯತ ನಿಜಾಚರಣೆ ಚಿಂತನಾ ಶಿಬಿರ..!!!

ಸಾಮಾಜಿಕ ಕ್ರಾಂತಿಗೆ ಮುಂದಾದ ಲಿಂಗಾಯತ ನಿಜಾಚರಣೆ ಚಿಂತನಾ ಶಿಬಿರ..

ಬೆಳಗಾವಿ : ಶನಿವಾರ ದಿನಾಂಕ 05/08/2023 ನಗರದ ನಾಗನೂರು ರುದ್ರಾಕ್ಷಿ ಮಠದ ಎಸ್ ಜಿಬಿಐಟಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಎರಡು ದಿನಗಳ ಲಿಂಗಾಯತ ನಿಜಾಚರಣೆಯ ಚಿಂತನಾ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು..

ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು, ಇದೇ ವೇದಿಕೆಯಲ್ಲಿ ಲಿಂಗಾಯತ ಧರ್ಮಾಚರಣೆಗೆ ಸಂಭಂದಿಸಿದ ಎರಡು ಪ್ರಮುಖ ಪುಸ್ತಕಗಳ ಬಿಡುಗಡೆ ಮಾಡಿದರು..

ಇನ್ನು ಕಾರ್ಯಕ್ರಮದಲ್ಲಿ ಸ್ವಾಗತ ಕೋರಿ ಮಾತನಾಡಿದ ಲಿಂಗಾಯತ ಮಹಸಂಘಟನೆಯ ಪ್ರಮುಖರಾದ ನ್ಯಾಯವಾದಿ ಬಸವರಾಜ್ ರೊಟ್ಟಿಯವರು, ಹಿಂದಿನಿಂದಲೂ ವೈದಿಕ ಸಂಪ್ರದಾಯ ಮತ್ತು ಆಚರಣೆಯಿಂದ ನಮ್ಮ ಸ್ವಂತಿಕೆಯ ಲಿಂಗಾಯತ ಆಚರಣೆಗಳು, ರೂಢಿ ಸಂಪ್ರದಾಯಗಳು ಕಳೆದು ಹೋಗಿವೆ, ಅವೈಜ್ಞಾನಿಕ ವೈದ್ಧಿಕ ಆಚರಣೆಯಿಂದ ನಾವು ಹೊರಬರಬೇಕಾಗಿದೆ ಎಂದರು..

ಅದಕ್ಕಾಗಿಯೇ ದಿನಾಂಕ 5 ಮತ್ತು 6 ರಂದು ಈ ಚಿಂತನಾ ಶಿಬಿರ ಏರ್ಪಡಿಸಿದ್ದು, ಇಲ್ಲಿ ಲಿಂಗಾಯತ ಸಮುದಾಯದ, ಸಂಪ್ರದಾಯದ, ಪದ್ಧತಿಯ, ಆಚರಣೆಯನ್ನು ಜಾರಿಗೆ ತರುವ ಸುಮಾರು 40 ಕ್ಕೂ ಹೆಚ್ಚು ಕ್ರಿಯಾ ಮೂರ್ತಿಗಳು ಭಾಗಿಯಾಗಿದ್ದು, ಅವರೆಲ್ಲರೂ ತಮ್ಮ ಚಿಂತನ ಮಂಥನದಿಂದ ಸಮಾಜದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದ್ದಾರೆ ಎಂದರು..

ಇನ್ನು ಕಾರ್ಯಕ್ರಮದ ಕೇಂದ್ರಬಿಂದುವಾದ ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಈ ಶಿಬಿರದ ಬಗ್ಗೆ ಮಾತನಾಡಿ, ಲಿಂಗಾಯತ ಧರ್ಮ ಎಂಬುದು ನೂರಾರು ವರ್ಷಗಳಿಂದ ತನ್ನದೇ ಆದ ವಿಧಿ ವಿಧಾನ, ಆಚಾರ ವಿಚಾರ, ರೂಢಿ ಪದ್ಧತಿಗಳನ್ನು ಅನುಸರಿಸಿಕೊಂಡು ಬಂದಿದ್ದು, ಜೀವನದ ಪ್ರತಿ ವಿಧಿ, ವಿಧಾನಗಳಲ್ಲಿ ತನ್ನದೇ ಆದ ವಿಶೇಷ ಪದ್ಧತಿಯನ್ನು ಅನುಸರಿಸಿತ್ತು…

ಆದರೆ ಇದೆಲ್ಲದರ ಮಧ್ಯದಲ್ಲಿ ಈ ವೈದಿಕ ಸಂಸ್ಕೃತಿಯ ಆಚರಣೆಯು ಬಲವಂತವಾಗಿ ಉಳಿದ ಸಮಾಜದಂತೆ, ಲಿಂಗಾಯತ ಸಮುದಾಯದ ಮೇಲೂ ತನ್ನ ಪ್ರಭಾವ ಬೀರಿ, ಜೀವನದ ಪ್ರತಿ ಹಂತದಲ್ಲಿಯೂ ವೈದಿಕ ಆಚರಣೆಗಳು ರೂಢಿಗತವಾದವು, ಇದರಿಂದ ಲಿಂಗಾಯತರಿಗೆ ನಮ್ಮತನ ಎನ್ನುವದು ಮಾಯವಾಗಿ, ಏನೂ ಕಳೆದುಕೊಂಡಿರುವ ನೋವು ಕಾಣುತ್ತಿತ್ತು..

ಆದರೆ ಜಾಗತಿಕ ಲಿಂಗಾಯತ ಸಂಘಟನೆ ಬೆಳಗಾವಿಯ ಪದಾಧಿಕಾರಿಗಳು ಇಂದು ಅತ್ಯಂತ ಮಹತ್ವದ ಕಾರ್ಯ ಮಾಡುತ್ತಿದ್ದು, ನಮ್ಮನ್ನು ಆವರಿಸಿದ, ನಮ್ಮನ್ನು ಅಂಧಾಚರಣೆಗೆ ದೂಡಿದ, ವೈದಿಕ ಸಂಪ್ರದಾಯ, ಸಂಸ್ಕಾರಗಳಿಂದ ಮುಕ್ತಿ ನೀಡಲು ಸದಾ ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿದೆ ಎಂದರು..

ಅದರ ಒಂದು ಭಾಗವಾಗಿ ಈ ಎರಡೂ ದಿನದ ಚಿಂತನಾ ಶಿಬಿರ ಅತೀ ಮಹತ್ವದ್ದಾಗಿದ್ದು, ಈ ಶಿಬಿರದಲ್ಲಿ ಲಿಂಗಾಯತ ಸಮುದಾಯದ ಅತೀ ಮಹತ್ವದ ಆಚರಣೆಗಳನ್ನು ನೆರವೇರಿಸಿಕೊಂಡು ಬಂದ, ಲಿಂಗಾಯತ ಸಮುದಾಯದ ಮಹಾ ಮಣಿಗಳು (ಕ್ರಿಯಾ ಮೂರ್ತಿಗಳು) ಭಾಗಿಯಾಗಿದ್ದು, ಇವರೆಲ್ಲರ ಪ್ರಯತ್ನಗಳಿಂದ ನಮ್ಮ ಲಿಂಗಾಯತ ಆಚರಣೆ, ನಿಜ ಆಚರಣೆ, ನಮ್ಮ ಬದುಕಿನಲ್ಲಿ ಬೆರೆಯುವ ಕಾಲ ದೂರ ಇಲ್ಲ ಎಂಬ ವಿಶ್ವಾಸ ವ್ಯಕ್ತಡಿಸಿದರು..

ಇನ್ನು ಈ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಮಹಾಸ್ವಾಮಿಗಳ ಸಾನಿಧ್ಯವಿದ್ದು, ಲಿಂಗಾಯತ ಮಹಾ ಸಂಘಟನೆಯ ಪದಾಧಿಕಾರಿಗಳು, ವಿಚಾರವಾದಿಗಳು, ಸಮುದಾಯದ ಪ್ರಮುಖರು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..