ಸುರಿವ ಮಳೆಯಲ್ಲೂ ಕುಡಿವ ನೀರಿಗೆ ಹಾ..ಹಾ..ಕಾರ..
ತೀರದ ಅಂಬೇಡ್ಕರ್ ಗಲ್ಲಿ ಜನರ ನೀರಿನ ದಾಹ..
ಅಗಸಗೆ ಗ್ರಾಪಂ ಪಿಡಿಒ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ..
ಬೆಳಗಾವಿ : ತಾಲೂಕಿನ ಅಗಸಗೆ ಗ್ರಾಮದ ಅಂಬೇಡ್ಕರ್ ಗಲ್ಲಿ ಜನರಿಗೆ ನೀರಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ, ಮಳೆಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಹಾ..ಹಾ..ಕಾರ ಎದ್ದಿದ್ದು, ಕೇವಲ ಗ್ರಾಮ ಪಂಚಾಯತಿ ದಾಖಲೆಗಳಲ್ಲಿ ಮಾತ್ರ ಆ ಅಭಿವೃದ್ಧಿ ಕಾಮಗಾರಿ ನೋಡುವಂತಾಗಿದೆ.
ಸಾವಿರಾರೂ ರೂಪಾಯಿ ವೆಚ್ಚ ಮಾಡಿದರೂ ಸರಿಯಾಗಿ ಕಾಮಗಾರಿ ನಡೆಯುತ್ತಿಲ್ಲ ಕಳಪೆ ಗುಣಮಟ್ಟದ ಕಾಮಗಾರಿಯಿಂದ ಪೈಪ್ ಲೈನ್ ಕಿತ್ತು ಹೋಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.

ತೀರದ ಅಂಬೇಡ್ಕರ್ ಗಲ್ಲಿ ಜನರ ನೀರಿನ ದಾಹ..
ಅಗಸಗೆಯ ಅಂಬೇಡ್ಕರ್ ಗಲ್ಲಿಗೆ ಜೆಜೆಎಮ್ ನೀರು ಹೊರತು ಪಡಿಸಿ ಬೇರಾವುದೇ ಕುಡಿಯುವ ನೀರು ಬರುವುದಿಲ್ಲ, ಜೆಜೆಎಮ್ ನೀರು ಬರದೇ ಇದ್ದಾಗ ಅಗಸಗೆಯ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಪರಿಶಿಷ್ಟ ಜಾತಿ ಅನುದಾನದಲ್ಲಿ ಕೊರೆಸಿರುವ ಬೋರ್ ವೆಲನಿಂದ ನೀರು ಬಿಡುವಂತೆ ಕಳೆದ ಎರಡು ವರ್ಷಗಳ ಹಿಂದೆ ಪಿಡಿಒಗೆ ಮನವಿ ಮಾಡಲಾಗಿತ್ತು.
ಮನವಿಗೆ ಸ್ಪಂದಿಸಿದ್ದ ಪಿಡಿಒ ಎನ್.ಎ.ಮುಜಾವರ ಅಂಬೇಡ್ಕರ್ ಗಲ್ಲಿಗೆ ಎಸ್ಸಿಪಿ ಅನುದಾನದಲ್ಲಿ ಸುಮಾರು 60 ಸಾವಿರ ರೂಪಾಯಿ ವೆಚ್ಚದಲ್ಲಿ 22 ಏಪ್ರಿಲ್ 2023 ರಂದು ನೀರಿನ ಹೊಸ ಪೈಪ್ ಲೈನ್ ಹಾಕಿಸಿದ್ದರು.
ಆದರೆ ಪೈಪ್ ಲೈನ್ ಹಾಕಿ ಒಂದೂವರೆ ವರ್ಷ ಕಳೆದರೂ ಇಂದಿಗೂ ಕೂಡ ಆ ಪೈಪ್ ಲೈನ್ ನಿಂದ ಒಂದು ಹನಿ ನೀರೂ ಅಂಬೇಡ್ಕರ್ ಗಲ್ಲಿಗೆ ಬಂದಿಲ್ಲ, ನೀರು ಬಿಡದಿದ್ದರೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಪೈಪ್ ಹಾಕಿದ್ದಾದರೂ ಯಾಕೆ? ಅನಾವಶ್ಯಕವಾಗಿ ಎಸ್ಸಿಪಿ/ಟಿಎಸ್ಪಿ ಹಣ ದುರ್ಬಳಕೆ ಮಾಡುವುದರ ಹಿಂದಿನ ಗುಟ್ಟಾದರೂ ಏನು? ಕೇವಲ ಗುತ್ತಿಗೆದಾರರ ಅಧಿಕಾರಿಗಳ ಕಮ್ಮಿಷನ್ ಗಾಗಿ ಇಂತಹ ಕಾಮಗಾರಿ ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆ ಈಗ ಗ್ರಾಮಸ್ಥರನ್ನು ಕಾಡುತ್ತಿವೆ.
ಪಿಡಿಒ-ಇಂಜಿನಿಯರ್, ಜನಪ್ರತಿನಿಧಿಗಳ ನಿರ್ಲಕ್ಷ್ಯ..
ಕಳೆದ 2023ರ ಏಪ್ರಿಲ್ ತಿಂಗಳಲ್ಲಿ ಪಿಡಿಒ ಎನ್.ಎ ಮುಜಾವರ್ ಅಂಬೇಡ್ಕರ್ ಗಲ್ಲಿಗೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮಾಡಿಸಿ ಹಣವೇನೋ ಖರ್ಚು ಮಾಡಿದ್ದಾರೆ, ಆದರೆ ಆ ಕಾಮಗಾರಿ ಎಲ್ಲಿಗೆ ಬಂತು? ಅಂಬೇಡ್ಕರ್ ಗಲ್ಲಿಗೆ ನೀರು ಸರಬರಾಜು ಆಗುತ್ತಿದೆಯೇ? ಎಂದು ವೀಕ್ಷಿಸಿಲ್ಲ. ಕಾಮಗಾರಿಯ ಗುಣಮಟ್ಟ ಪರೀಕ್ಷಿಸಬೇಕಾದ ಇಂಜಿನಿಯರ್ ಕೂಡ ಈ ಕಡೆ ಸುಳಿದಿಲ್ಲ. ಇನ್ನು ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದೆಲ್ಲವನ್ನು ಗಮನಿಸಿದರೆ ಸಾರ್ವಜನಿಕರ ಸಮಸ್ಯೆಗಳಿಗೆ ಪಿಡಿಒ ಎನ್. ಎ ಮುಜಾವರ, ಸಂಬಂಧ ಪಟ್ಟ ಇಂಜಿನಿಯರ್ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು,
ಕೆಲಸ ಮಾಡದೇ ಬಿಲ್ಲು ತೆಗೆದರೂ ಗ್ರಾಮಸ್ಥರು ಅಚ್ಚರಿ ಪಡಬೇಕಾಗಿಲ್ಲ.
ನೀರು ತರುವಾಗ ಅನಾಹುತ ಸಂಭವಿಸಿದರೆ ಪಿಡಿಒ ನೇರ ಹೊಣೆ..
ಜೆಜೆಎಮ್ ನೀರು ಗ್ರಾಮಕ್ಕೆ ಸರಾಗವಾಗಿ ಬರುವುದಿಲ್ಲ. ಹೀಗಾಗಿ ಅಂಬೇಡ್ಕರ್ ಗಲ್ಲಿಯ ಸುಮಾರು 70 ಕುಟುಂಬಗಳು ಹಂದಿಗನೂರ-ಬೆಳಗಾವಿ ರಾಜ್ಯ ಹೆದ್ದಾರಿ ದಾಟಿ ನೀರು ತರಬೇಕು. ಈ ರಸ್ತೆ ಮೇಲೆ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ನೀರು ತರುವಾಗ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಪಿಡಿಒ ಎನ್.ಎ ಮುಜಾವರ ಅವರೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ಆರೋಪಿಸಿದ್ದಾರೆ.
ಒಂದು ವೇಳೆ ಪಿಡಿಒ ಎನ್.ಎ ಮುಜಾವರ ಹಾಗೂ ಅಗಸಗೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸದಿದ್ದರೆ ಪಂಚಾಯತಿ ಎದುರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸಂತೋಷ ಮೇತ್ರಿ, ಅಗಸಗೆ..