ಬೆಳಗಾವಿಯಲ್ಲಿ ‘ಅಸ್ಮಿತೆ’ ವ್ಯಾಪಾರಮೇಳ-2024..
ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟವು..
ಡಿಸೆಂಬರ್ 26 ರಿಂದ ಜನವರಿ 04ರವರೆಗೆ ಪ್ರದರ್ಶನ..
ಬೆಳಗಾವಿ: 25: ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮುಖ್ಯ ಉದ್ದೇಶದೊಂದಿಗೆ ಹಲವಾರು ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಈ ಮೇಳವನ್ನು ಡಿಸೆಂಬರ್ 26 ರಿಂದ ಜನವರಿ 4 ರವರೆಗೆ ಆಯೋಜಿಸಲಾಗಿದೆ.

ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳು ಮಾರಾಟ ಮಾಡುತ್ತಿರುವುದರಿಂದ ಹೆಚ್ಚು ಹೆಚ್ಚು ಸಾರ್ವಜನಿಕರು ಈ ಮೇಳದ ಸದುಪಯೋಗವನ್ನು ಪಡೆದುಕೊಂಡು ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚಿನ ವಹಿವಾಟಿನೊಂದಿಗೆ ಅವರ ಆರ್ಥಿಕ ಸಬಲತೆಗೆ ಕೈ ಜೋಡಿಸಲಿದ್ದಾರೆ ಎಂಬ ನಿರೀಕ್ಷೆ ಹೊಂದಲಾಗಿದೆ.
ಮಹಿಳೆಯರ ಉತ್ಪನ್ನಗಳ ಮಾರಾಟಕ್ಕೆ ಹಳ್ಳಿ ಸಂತೆ, ತಾಲ್ಲೂಕು ಮಟ್ಟದಲ್ಲಿ ಮಾಸಿಕ ಸಂತೆ, ಜಿಲ್ಲಾ ವಸ್ತು ಪ್ರದರ್ಶನ ಮಾರಾಟ ಮೇಳ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವ ಮೇಳಗಳನ್ನು ಆಯೋಜಿಸುವ ಮೂಲಕ ಮಾರುಕಟ್ಟೆ ಒದಗಿಸಲಾಗುತ್ತಿದೆ.
ಬೆಳಗಾವಿಯಲ್ಲಿ ಕಳೆದ 3 ವರ್ಷದಿಂದ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಪ್ರತಿ ದಿನ ಸಂಜೆ 6.30 ರಿಂದ 9.00 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಒಟ್ಟು 150 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 10 ಆಹಾರ ಮೇಳದ ಮಳಿಗೆಗಳು ಮತ್ತು 50 ಖಾದಿ ಉತ್ಪನ್ನಗಳ ಮಳಿಗೆಗಳನ್ನು ಒಳಗೊಂಡಿದೆ.
ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಡಿಸೆಂಬರ್ 26ರ ಬೆಳಗ್ಗೆ 10.30 ಯಿಂದ ರಾತ್ರಿ 9.30 ರವರೆಗೆ ಪ್ರದರ್ಶನವಿರಲಿದೆ.

ಪ್ರದರ್ಶನಗೊಳ್ಳುವ ಆಕರ್ಷಕ ವಸ್ತುಗಳು
ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧ ಅಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್‌ಗಳು, ಮಸಾಲಾ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಯುತ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು.
ಬಾಯಲ್ಲಿ ನೀರೂರಿಸುವ ಆಹಾರ
ಆಹಾರ ಮಳಿಗೆಗಳಲ್ಲಿ ಉತ್ತರ ಕರ್ನಾಟಕದ ಗಿರ್ಮಿಟ್/ಮಂಡಕ್ಕಿ, ಮೆಣಸಿನಕಾಯಿ ಬಜ್ಜಿ, ಜೋಳದ ಖಡಕ್ ರೊಟ್ಟಿ, ಹೋಳಿಗೆ, ಮಂಗಳೂರ ನೀರ್ ದೋಸೆ ಮತ್ತು ಮಾಂಸಹಾರಿ ಆಹಾರಗಳಾದ ಬ್ಯಾಂಬು ಬಿರಿಯಾನಿ ಮುಂತಾದವುಗಳು ಲಭ್ಯವಿರಲಿದೆ.
ವರದಿ ಪ್ರಕಾಶ ಬಸಪ್ಪ ಕುರಗುಂದ..