ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ 117 ನೇ ಜನ್ಮ ದಿನಾಚರಣೆ..

ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ 117 ನೇ ಜನ್ಮ ದಿನಾಚರಣೆ…

ಸಮಾನತೆಗೆ ಸ್ಪಷ್ಟ ರೂಪ ಕೊಟ್ವವರು ಡಾ. ಬಾಬು ಜಗಜೀವನರಾಮ್: ಪ್ರೊ. ಡಾ. ಹನುಮಂತಪ್ಪ ಸಂಜೀವಣ್ಣವರ

ಬೆಳಗಾವಿ, ಏ.05: ದೇಶದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿ, ಶೋಷಿತ ಸಮುದಾಯದ ಏಳಿಗೆಗೆ ಶ್ರಮಿಸುವುದರ ಮೂಲಕ ಸಮಾನತೆಯ ಸಂದೇಶಕ್ಕೆ ಒಂದು ಸ್ಪಷ್ಟ ರೂಪ ಕೊಟ್ಟ ನಾಯಕರು ಡಾ. ಬಾಬು ಜಗಜೀವನರಾಮ್ ಅವರು ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಹನುಮಂತಪ್ಪ ಸಂಜೀವಣ್ಣವರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸಂಗಮೇಶ್ವರ ನಗರದ ಡಾ. ಬಾಬು ಜಗಜೀವನರಾಮ್ ಉದ್ಯಾನವನದಲ್ಲಿ ಶುಕ್ರವಾರ ನಡೆದ ಡಾ. ಬಾಬು ಜಗಜೀವನರಾಮ್ 117 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಬಾಬು ಜಗಜೀವನರಾಮ್, ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅದೇ ರೀತಿಯಲ್ಲಿ ಕನಕದಾಸರು, ಮಹಾತ್ಮಾ ಗಾಂಧೀಜಿ ಸಹ ಸಾಕಷ್ಟು ಶೋಷಣೆಗೆ ಒಳಗಾಗಿ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಜಗಜೀವನ್ ರಾಮ್ ತಾಯಿ ವಾಸಂತಿ ದೇವಿಯವರ ಆರೈಕೆಯಲ್ಲಿ ಬೆಳೆದರು. ಅವರು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಕುಡಿಯುವ ನೀರಿನ ಪ್ರತ್ಯೇಕ ಮಡಕೆಯಿಂದಾಗಿ ಮೊದಲ ಬಾರಿಗೆ ಅಸ್ಪೃಶ್ಯತೆಯ ಅಪಮಾನ ಜಗಜೀವನರಾಮ್ ಅವರನ್ನು ಬಹುವಾಗಿ ಕಾಡಿತು. ಇದರಿಂದ ಸಿಟ್ಟಿಗೆದ್ದ ಅವರು ಎರಡು ಬಾರಿ ಆ ಮಡಕೆಗಳನ್ನು ಒಡೆದುಹಾಕಿ ತಮ್ಮ ಕೋಪವನ್ನು ಪ್ರದರ್ಶಿಸಿದರು. ಈ ಜಾತಿ ಪದ್ಧತಿಯ ಅಪಮಾನದ ಗಾಯ ಮಾತ್ರ ಬಾಬು ಜಗಜೀವನರಾಮ್ ಅವರ ಮನದಲ್ಲಿ ಮನೆ ಮಾಡಿತು.

ಮುಂದೆ ದೊಡ್ಡ ನಾಯಕರಾಗಿ ರೂಪುಗೊಂಡ ಜಗಜೀವನ ರಾಮ್ ಅವರು ಗಾಂಧೀಜಿಯವರು ಆರಂಭಿಸಿದ್ದ ಅಸ್ಪೃಶ್ಯತೆಯ ವಿರುದ್ದದ ಹೋರಾಟದಲ್ಲಿ ಪಾಲ್ಗೊಂಡರು. ಅಂದಿನ ಪ್ರಥಮ ಹಂಗಾಮಿ ಸರ್ಕಾರ ರಚನೆಯಾದಾಗ ಅವರಿಗೆ ಕಾರ್ಮಿಕ ಖಾತೆಯನ್ನು ನೀಡಲಾಗಿತ್ತು. ಮುಂದೆ ಅವರು ತಮ್ಮ ರಾಜಕೀಯ ಪಯಣದಲ್ಲಿ ಹಿಂದುರುಗಿ ನೋಡಿದ್ದೇ ಇಲ್ಲ. ಹಲವಾರು ಖಾತೆಗಳ ಸಚಿವ ಸ್ಥಾನಗಳನ್ನು ನಿರ್ವಹಿಸಿದರು.

“ಹಸಿರುಕ್ರಾಂತಿ ಹರಿಕಾರ” ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು. ಬಾಬು ಜಗಜೀವನ ರಾಮ್ ಅವರು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಡಾ. ಹನುಮಂತಪ್ಪ ಸಂಜೀವಣ್ಣವರ ಅವರು ಉಪನ್ಯಾಸದಲ್ಲಿ ತಿಳಿಸಿದರು.

ಸಂವಿಧಾನ ಪೀಠಿಕೆ ಭೋದನೆ:

ವೇದಿಕೆ ಕಾರ್ಯಕ್ರಮ ಪ್ರಾರಂಭಕ್ಕೂ ಮುಂಚೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸಿದರು.
ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಸಂವಿಧಾನ ಪೀಠಿಕೆ ಭೋಧಿಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ:

ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ,
ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಬ್ದುಲ್ ರಶೀದ್ ಮಿರಜನ್ನವರ, ಮುಖಂಡರಾದ ಮಲ್ಲೇಶ ಚೌಗಲಾ, ಯಲ್ಲಪ್ಪ ಹುದಲಿ, ಕರೆಪ್ಪ ಗುಡೆನ್ನವರ, ದುರ್ಗೇಶ ಮೇತ್ರಿ, ವಿವೇಕ ಕರ್ಪೇ ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.