ಹೊರಗುತ್ತಿಗೆ ನೌಕರರಿಗೆ ತೊಂದರೆ ಆಗಬಾರದು..
ಇ.ಎಸ್.ಐ/ಇ.ಪಿ.ಎಫ್ ನಿಯಮಾನುಸಾರ ಪಾವತಿಯಾಗಲಿ:
ಜಿಪಂ ಸಿಇಒ ರಾಹುಲ್ ಶಿಂಧೆ
ಬೆಳಗಾವಿ: ಹೊರಗುತ್ತಿಗೆ ನೌಕರರನ್ನು ಸುಮ್ಮನೆ ಕಿರುಕುಳ ನೀಡದೇ ಕೆಲಸ ತೆಗೆದುಕೊಳ್ಳಬೇಕು. ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ನಗರದ ಹಳೆ ಜಿಪಂ ಸಭಾಭವನದಲ್ಲಿ (ಮಾ.12) ಮಂಗಳವಾರ ಜಿಲ್ಲಾ ಪಂಚಾಯತ್ ಲಿಂಕ್ ಡಾಕ್ಯೂಮೆಂಟ್ ಯೋಜನೆಗೆ ಸಂಬಂಧಿಸಿದ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹೊಸದಾಗಿ ಮಾನವ ಸಂಪನ್ಮೂಲ ಏಜೆನ್ಸಿಗಳನ್ನು ಟೆಂಡರ್ ಕರೆದಾಗ ಹಿಂದೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಗಣನೆಗೆ ತೆಗೆದುಕೊಳ್ಳಬೇಕು, ಸಿಬ್ಬಂದಿಯನ್ನು ತೆಗೆದು ಹಾಕಲು ಏಜೆನ್ಸಿಗಳಿಗೆ ಅವಕಾಶ ನೀಡಕೂಡದು. ಇ.ಎಸ್.ಐ/ಇ.ಪಿ.ಎಫ್ ನಿಯಮಾನುಸಾರ ಪಾವತಿಸಿರುವುದನ್ನು ಪರಿಶೀಲಿಸಬೇಕು, ನಿಯಮ ಮೀರಿದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸೂಚಿಸಿದರು.

ಬೆಳಗಾವಿ ವಿಭಾಗದ 4, ಚಿಕ್ಕೋಡಿ ವಿಭಾಗದ 3 ಆಯುಷ್ ಆಸ್ಪತ್ರೆ ಹಾಗೂ ಔಷಧಾಲಯಗಳ ಕಟ್ಟಡಗಳು ಪೂರ್ಣಗೊಂಡಿದ್ದು, ಅದರ ವೆಚ್ಚವನ್ನು ಸಂಬಂಧಿಸಿದ ಅಧಿಕಾರಿಗಳು ಭರಿಸಬೇಕು. ಸರಕಾರಿ ಆಸ್ಪತ್ರೆ ಹಾಗೂ ಆಯುಷ್ ಇಲಾಖೆಗಳ ಮೆಡಿಸಿನ್ ಗಳ ಕುರಿತು ಕಡ್ಡಾಯವಾಗಿ ಸ್ಟಾಕ್, ಸ್ವೀಕೃತಿ ಮತ್ತು ಸರಬರಾಜಿನ ಬಗ್ಗೆ ರಜಿಸ್ಟರ್ ನಿರ್ವಹಿಸಬೇಕು ಎಂದು ತಿಳಿಸಿದರು.
ಆರ್ಥಿಕ ವರ್ಷ ಮುಕ್ತಾಯ ಹಂತದಲ್ಲಿದ್ದು, ಜಿಪಂ ಲಿಂಕ್ ಡಾಕ್ಯುಮೆಂಟ್ ಯೋಜನೆಗಳಿಗೆ ಸಂಬಂಧಿಸಿದ ಹಣವನ್ನು ಲ್ಯಾಪ್ಸ್ ಆಗದಂತೆ ಕ್ರಮವಹಿಸಬೇಕು, ಒಂದು ವೇಳೆ ಖರ್ಚು ಭರಿಸದೇ ಉಳಿದಿರುವ ಹಣವನ್ನು ಸರಕಾರಕ್ಕೆ ಸರೆಂಡರ್ ಮಾಡಲು ಕ್ರಮ ವಹಿಸಬೇಕು.
ಸಮಸ್ಯೆಗಳು ಇದ್ದರೆ ನೇರವಾಗಿ ಜಿಲ್ಲಾ ಪಂಚಾಯತಿಯ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ ಯೋಜನಾ ನಿರ್ದೇಶಕರು ಗಂಗಾಧರ ದಿವಟರ್, ಮುಖ್ಯ ಲೆಕ್ಕಾಧಿಕಾರಿಗಳು ಪರಶುರಾಮ ದುಡಗುಂಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಶಿವನಗೌಡ ಎಸ್ ಪಾಟೀಲ, ಎಇಇ ಆನಂದ ಎಸ್ ಬಣಗಾರ, ಎಇಇ ಬಸವರಾಜ ಕತ್ತಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರು ರಾಜೀವ್ ಎಸ್ ಕುಲೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹೇಶ್ ಕೋಣಿ, ಜಿಲ್ಲಾ ಆಯುಷ್ ಅಧಿಕಾರಿ ಶ್ರೀಕಾಂತ ಭೀ, ಸುಣಧೋಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ್ ವಾಯ್ ಕುರಿಹುಲಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಪ್ರಿಯಾ ಕಡೆಂಚೂರ ಮೊದಲಾದವರು ಉಪಸ್ಥಿತರಿದ್ದರು.
ವರದಿ ಪ್ರಕಾಶ ಕುರಗುಂದ..