ಸಿಎಂ ಅವರ ಮಾದ್ಯಮ ಸಲಹೆಗಾರರಾದ, ವಿ.ಪ್ರಭಾಕರ್ ಅಭಿನಂದನಾ ಸಮಾರಂಭ

ಪತ್ರಕರ್ತರು ವೃತ್ತಿ ಘನತೆ ಎತ್ತಿ ಹಿಡಿಯಬೇಕು: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ, : ಪತ್ರಿಕಾರಂಗವು ಸಮಾಜ ತಿದ್ದುವ ಪಾತ್ರ ನಿರ್ವಹಿಸುತ್ತಿದೆ. ಸಮಾಜದಲ್ಲಿ ತೊಂದರೆ, ಸಮಸ್ಯೆಗಳಿದ್ದಲ್ಲಿ ಅಂತಹ ಕಡೆ ಬೆಳಕು ಚೆಲ್ಲುವ ಕೆಲಸಕ್ಕೆ ಮಾಧ್ಯಮ ಮುಂದಾಗಬೇಕು. ಪತ್ರಕರ್ತರು ತಮ್ಮ ವರದಿಗಳಿಂದ ವೃತ್ತಿ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕಿವಿಮಾತು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಭವನದಲ್ಲಿ ಭವನದಲ್ಲಿ ಶನಿವಾರ (ನ.11) ನಡೆದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಎಲೆಕ್ಟ್ರಾನಿಜ್ ಹಾಗೂ ಡಿಜಿಟಲ್ ಮಾಧ್ಯಮಗಳು ಸುದ್ದಿ ಭರಾಟೆ ಹೆಚ್ಚಾಗಿದ್ದು, ಮೂಲ ಸುದ್ದಿಯ ಸ್ವರೂಪವೇ ಬದಲಾಗಿ ಕೆಲವೊಮ್ಮೆ ಬೇರೆಯದೇ ಅರ್ಥ ಮೂಡಿಸುತ್ತಿದೆ. ಆದ್ದರಿಂದ ಮೂಲ ಸುದ್ದಿ ಅಥವಾ ಹೇಳಿಕೆಗಳು ಯಥಾವತ್ತಾಗಿ ವರದಿಯಾಗಬೇಕು ಎಂದು ಹೇಳಿದರು.

ಪತ್ರಿಕಾ ಭವನ ನಿರ್ಮಾಣಕ್ಕೆ ಭರವಸೆ:

ಪತ್ರಕರ್ತರು ತಮ್ಮ ಕುಟುಂಬ ಮಕ್ಕಳ ವಿದ್ಯಾಭ್ಯಾಸಗಳತ್ತ ಗಮನಹರಿಸಬೇಕು. ಬೆಳಗಾವಿ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಜತೆಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಸ್ಥಳ ಗೊಂದಲವಿರುವ ಕಾರಣ ವಿಳಂಬವಾಗಿದೆ. ಸ್ಥಳ ನಿಗದಿಯಾದ ತಕ್ಷಣವೇ ಭವನ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಇದಕ್ಕೂ ಮುಂಚೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ಪ್ರಭಾಕರ್ ಅವರು ಮಾತನಾಡಿ ಬೆಳಗಾವಿ ಜಿಲ್ಲೆ ಅತೀ ವಿಶೇಷವಾದ ಜಿಲ್ಲೆಯಾಗಿದೆ. ಇಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ವಿಷಯ. ಈ ಅಭಿನಂದನಾ ಕಾರ್ಯಕ್ರಮವನ್ನು ಎಲ್ಲ ಪತ್ರಕರ್ತ ಮಿತ್ರರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ:

ಈ ದಿನದಲ್ಲಿ ವಿಶೇಷವಾಗಿ ಪತ್ರಿಕಾ ವಿತರಕರನ್ನು ಸ್ಮರಿಸುತ್ತೇನೆ. ದಿನ ಬೆಳಿಗ್ಗೆ ಚಳಿ, ಮಳೆ, ಗಾಳಿ ಯಾವುದೇ ಲೆಕ್ಕಿಸದೆ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಕೆಲಸ ಅವರು ಪ್ರಾಮಾಣಿಕ, ನಿಷ್ಠೆಯಿಂದ ಮಾಡುತ್ತಾರೆ. ಹಾಗಾಗಿ ಈ ಬಾರಿ ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸುಮಾರು 76 ವರ್ಷದ ಜವರಪ್ಪ ಎಂಬ ಪತ್ರಿಕಾ ವಿತರಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿ ಗೌರವಿಸಿದ್ದಾರೆ.

ಪತ್ರಕರ್ತರಿಗೆ ನಿವೇಶನ ಮೀಸಲಿಡುವುದು ಹಾಗೂ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳ ಪ್ರತಿನಿಧಿಯಾಗಿ ಸರಕಾರದ ಮಟ್ಟದಲ್ಲಿ ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುತ್ತೇನೆ ಎಂದು ಕೆ. ಪ್ರಭಾಕರ ಅವರು ತಿಳಿಸಿದರು.

ನಿವೇಶನ ಮಂಜೂರಾತಿಗೆ ಸದ್ಯದಲ್ಲೇ ಚರ್ಚೆ:

ನಿವೃತ್ತ ಪತ್ರಕರ್ತರ ಮಾಶಾಸನ 10 ರಿಂದ 12 ಸಾವಿರ ಹೆಚ್ಚಳ ಮಾಡಲಾಗಿದೆ. ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಬಡಾವಣೆಯಾದ ಕಣಬರ್ಗಿಯಲ್ಲಿ ನಿವೇಶನ ಮಂಜೂರು ಮಾಡಲು ಸದ್ಯದಲ್ಲೇ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದರು.

ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯ ಹಸ್ತ:

ತೊಂದರೆಯಲ್ಲಿರುವ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಆರ್ಥಿಕ ನೆರವು ನೀಡಲಾಗುವುದು. ಹಳ್ಳಿಯಿಂದ ಬಂದಿರುವ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನ, ಅನಾರೋಗ್ಯದಿಂದ ಇರುವ ಪತ್ರಕರ್ತರಿಗೆ ಸಹಾಯ ಮಾಡಲಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ಕುರಂದವಾಡೆ ಅವರು ಆಶಯ ನುಡಿಗಳನ್ನಾಡಿದರು.

ಪತ್ರಿಕೋದ್ಯಮದಲ್ಲಿ ನೈತಿಕತೆ ಮುಖ್ಯ:

ಈ ವೇಳೆ ಮಾತನಾಡಿದ ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು
ಪತ್ರಕರ್ತರು ಯಾವುದೇ ಸಮುದಾಯ ಹಾಗೂ ಪಕ್ಷದ ಪರವಾಗಿ ವರದಿಗಳನ್ನು ಮಾಡದೆ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಸತ್ಯ, ನ್ಯಾಯ, ನೀತಿ ಮೂಲಕ ಪಾರದರ್ಶಕವಾಗಿ ವರದಿ ಮಾಡಬೇಕು ಎಂದು ತಿಳಿಸಿದರು.

ಸೈಕಲ್ ವಿತರಣೆ:

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಜಿಲ್ಲೆಯಿಂದ ಆಗಮಿಸಿದ ವಿವಿಧ ತಾಲೂಕಾ ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆ ಮಾಡಿದರು.