7ನೇ ವೇತನ ಆಯೋಗದ ಸೌಲಭ್ಯ ಹಾಗೂ ಇತರ ಬೇಡಿಕೆ ಈಡೇರಿಕೆಗಾಗಿ ರಾಜ್ಯಾದ್ಯಂತ ಮುಷ್ಕರ..
ಸಾಮೂಹಿಕ ರಜೆ ಹಾಕಿ ಪಾಲಿಕೆ ನೌಕರರ ಪ್ರತಿಭಟನೆ..
ಬೆಳಗಾವಿ : ಏಳನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರಕಾರಿ ನೌಕರರಿಗೆ ವಿಸ್ತರಿಸಿದಂತೆ ಸ್ಥಳೀಯ ಸಂಸ್ಥೆಯಾದ ಮಹಾನಗರ ಪಾಲಿಕೆಯ ಅಧಿಕಾರಿ, ನೌಕರರಿಗೆ ಸರಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಯ ನೌಕರರ ಸಂಘದ ಪದಾಧಿಕಾರಿಗಳು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ, ಕರಡು ಅಧಿಸೂಚನೆಯನ್ನು ಪ್ರಕಟಿಸಬೇಕು. ರಾಜ್ಯ ಸರಕಾರಿ ನೌಕರರಿಗೆ ಜಾರಿ ಮಾಡಿರುವ ಕೆಜಿಐಡಿ, ಜಿಪಿಎಫ್ ಸೌಲಭ್ಯವನ್ನು ಮಹಾನಗರ ಪಾಲಿಕೆಯ ಅಧಿಕಾರಿ ಹಾಗೂ ನೌಕರರಿಗೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಸರಕಾರಿ ನೌಕರರಿಗೆ ಜಾರಿಗೊಳಿಸಿರುವ ಆರೋಗ್ಯ ಸೌಲಭ್ಯದ ಜ್ಯೋತಿ, ಆರೋಗ್ಯ ಸಂಜೀವಿನಿಯನ್ನು ಪಾಲಿಕೆಯ ಅಧಿಕಾರಿಗಳಿಗೂ ಅನ್ವಯವಾಗಬೇಕು ಹಾಗೂ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುವ ಹಿರಿಯ ನೌಕರರಿಗೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆ ಸಂದರ್ಭದಲ್ಲಿ ಮಲಿಕ ಗುಂಡಪ್ಪನವರ, ಸುರೇಶ ದ್ಯಾವಣ್ಣವರ, ಸಂತೋಷ್ ಕಾಂಬಳೆ, ಸುಶಾಂತ, ನಾಗೇಶ್ ಕಲ್ಪತ್ರಿ, ಹನಮಂತ ಕಲಾದಗಿ, ಸೂರ್ಯವಂಶಿ, ಪರಶುರಾಮ ಕಾಂಬಳೆ, ಮಾಜಿ ಕೊತ್ವಾಲ್, ಜಾಧವ, ಮೇತ್ರಿ, ಶುಭಂ, ಗುಂಡಪ್ಪ, ಸಾತಕ್ಕ ತಳವಾರ, ಕಲ್ಪನಾ, ಶೈಲಾ, ಸೇರಿದಂತೆ ಪಾಲಿಕೆಯ ನೂರಾರು ಸಿಬ್ಬಂದಿಗಳು ಉಪಸ್ಥಿತರಿದ್ದರು.