ಮಗನನ್ನು ಕಳೆದುಕೊಂಡು ಒಂಟಿಯಾದ ಅಜ್ಜಿಯ ಕಷ್ಟಕ್ಕೆ ಕರಗಿದ ಪಾಲಿಕೆ ಅಧಿಕಾರಿ..
ಕಡುಬಡವ ಅಜ್ಜಿಗೆ ಕಿರು ಸಹಾಯ ಮಾಡಿ ಮಾನವೀಯತೆ ಮೆರೆದ ಪಾಲಿಕೆಯ ಉಪ ಆಯುಕ್ತ..
ಬೆಳಗಾವಿ : ಒಂದೊಂದು ಸಂದರ್ಭದಲ್ಲಿ ಒಬ್ಬೊಬ್ಬರ ಜೀವನವನ್ನು ನೋಡಿದಾಗ ಆ ದೇವರು ಎಷ್ಟು ಕ್ರೂರಿ ಇರಬಹುದು ಎಂದು ಅನಿಸುತ್ತದೆ, ಆದರೆ ಕಷ್ಟದಲ್ಲಿ ಇರುವವರನ್ನು ಕಂಡು ಮರುಗಿ, ಮಾನವೀಯತೆಯಿಂದ ಮಮಕಾರ ತೋರಿಸುವ ಕೆಲವು ಜನರು ನಮ್ಮ ಬಳಿ ಇರುವದನ್ನು ಕಂಡಾಗ, ಆ ದೇವರೆ ಇಂತ ಸಹಾಯಕರ ರೂಪದಲ್ಲಿ ಬಂದಿರುವನೇನೋ ಎಂದು ಅನಿಸುತ್ತದೆ, ಅಂತಹ ಒಂದು ಕಿರು ಸಹಾಯವನ್ನು ನಮ್ಮ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಉದಯಕುಮಾರ ತಳವಾರ ಅವರು ಮಾಡಿದ್ದು, ಇದು ಹೃದಯಸ್ಪರ್ಶಿ ಸಂಗತಿಯಾಗಿದೆ..
ನಗರದ ಗೊಂದಳಿ ಗಲ್ಲಿಯ 81 ವರ್ಷದ ಅಜ್ಜಿಗೆ 54 ವರ್ಷದ ಕಿರಣ ಕಿತವಾಡಕಾರ ಎಂಬ ಮಗನಿದ್ದು, ಆತ ತನ್ನ ಅನಾರೋಗ್ಯದ ಕಾರಣದಿಂದ ಕಳೆದ ಮೂರು ದಿನಗಳ ಹಿಂದೆಯೇ ಮೃತನಾಗಿದ್ದು, ವಯಸ್ಸಾದ ಅಜ್ಜಿಗೆ ಮರಣವಾದ ಒಂದು ದಿನದ ನಂತರವೇ ತಿಳಿದಿದ್ದು, ವಯಸ್ಸಾದ, ಆಶಕ್ತಳಾದ ಅಜ್ಜಿಗೆ ಮಗನ ಅಂತ್ಯಕ್ರಿಯೆಯನ್ನೂ ಮಾಡಲಾಗದ ಅಮಾನವೀಯ ಸ್ಥಿತಿ ನಿರ್ಮಾಣವಾಗಿತ್ತು, ನಂತರ ಸಾಮಾಜಿಕ ಕಾರ್ಯಕರ್ತರಾದ ಗಂಗಾಧರ ಪಾಟೀಲ್ ಹಾಗೂ ಅವರ ತಂಡದಿಂದ ನಿನ್ನೆ ಸದಾಶಿವ ನಗರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು..

ಈ ಹೃದಯ ಹಿಂಡುವ ಸುದ್ದಿಯನ್ನು ಇಂದು ನಮ್ಮ “ಸಮಾಜಮುಖಿ ವೆಬ್ ನಿವ್ಸ್” ಅಲ್ಲಿ ಹಾಕಿದಾಗ ನಗರದ ಹಲವಾರು ಕರುಣಾಮಯಿ ಜನರು ಮನಮಿಡಿಯುವ ಸ್ಪಂದನೆಯನ್ನು ನೀಡಿದ್ದರು, ಅದೇ ರೀತಿಯಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ (ಆಡಳಿತ) ಉದಯಕುಮಾರ ತಳವಾರ ಅವರು ಆ ಸುದ್ದಿಯನ್ನು ನೋಡಿದ ತಕ್ಷಣವೇ ನನಗೆ ಫೋನ್ ಮಾಡಿ, ನಾನು ಆ ವಯಸ್ಸಾದ, ಒಂಟಿಯಾದ ಅಜ್ಜಿಗೆ ಸಹಾಯ ಮಾಡಬೇಕು, ನೀನು ಕಚೇರಿಯ ಕಡೆಗೆ ಬಾ ಎಂದು ಕರೆಸಿ, ತಾವೇ ನನ್ನ ಜೊತೆ ಪಕ್ಕದ (ಮೋರ್ ಮಾಲ್) ದಿನಸಿ ಅಂಗಡಿಗೆ ಬಂದು, ಸುಮಾರು ಒಂದು ತಿಂಗಳಿಗೆ ಆಗುವಷ್ಟು ಗೃಹಬಳಕೆಯ ಸಾಮಗ್ರಿಗಳನ್ನು ಕೊಡಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಅಜ್ಜಿಗೆ ಮಕ್ಕಳ ಸ್ಥಾನದಲ್ಲಿ ನಾವು ನಿಂತು, ನಮ್ಮ ಕೈಲಿ ಆದ ಚಿಕ್ಕ ಸಹಾಯವನ್ನು ಮಾಡೋಣ, ಆದರೆ ದಯವಿಟ್ಟು ಇದನ್ನು ಸುದ್ದಿ ಮಾಡಬೇಡ, ನನ್ನ ಫೋಟೋ ಕೂಡಾ ತಗೆಯಬೇಡ ಹಾಗೂ ಎಲ್ಲಿಯೂ ಹಾಕಬೇಡ ಎಂದಿದ್ದರು, ಆದರೆ ಒಬ್ಬ ಉನ್ನತ ಸ್ಥಾನದ ಅಧಿಕಾರಿ, ಒಬ್ಬರ ಕಷ್ಟಕ್ಕೆ ಕರುಗಿ, ಕರುಣೆ ತೋರಿ, ಆ ಕಡುಬಡವ ಅಜ್ಜಿಗೆ ಕೈಲಾದಷ್ಟು ಸಹಾಯ ಮಾಡುವ ಒಳ್ಳೆಯ ಕಾರ್ಯ ಮಾಡುತ್ತಿರುವಾಗ, ಅವರ ಒಳ್ಳೆಯ ಕಾರ್ಯವನ್ನು ಮುಚ್ಚಿಡುವದಕ್ಕೆ ನನ್ನ ಮನಸ್ಸು ಒಪ್ಪದೇ, ಅವರಿಗೆ ತಿಳಿಯದಂತೆ ಅವರ ಒಂದು ಫೋಟೋ ತಗೆದು, ಜೊತೆಗೆ ಅವರ ಹೆಸರನ್ನೂ ಕೂಡಾ ಈ ಸುದ್ದಿಯಲ್ಲಿ ಹಾಕಿ ಪ್ರಕಟಿಸುತ್ತಿದ್ದೇನೆ.

“ವಸುದೈವ ಕುಟುಂಬಕಂ”, ಈ ಇಡೀ ಜಗತ್ತೇ ಒಂದು ಕುಟುಂಬ ಎಂಬಂತೆ, ನಾವೆಲ್ಲರೂ ಮನುಜರು, ಮನುಷ್ಯತ್ವಕ್ಕೆ ತೊಂದರೆ ಆದಾಗ ಸ್ಪಂದಿಸುವದು ನಮ್ಮ ನೈತಿಕ ಹೊಣೆ, “ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ” ಎನ್ನುವ ರೀತಿಯಲ್ಲಿ ಇಂದು ಬಡ ಅಜ್ಜಿಯ ಕಷ್ಟಕ್ಕೆ ಕರುಗಿ, ಒಂದು ಕಿರು ಸಹಾಯ ಮಾಡಿದ ಬೆಳಗಾವಿ ಪಾಲಿಕೆಯ ಅಧಿಕಾರಿಯ ಕಾರ್ಯ ಮಾದರಿ ಹಾಗೂ ಶ್ಲಾಘನೀಯವಾಗಿದೆ..
ವರದಿ ಪ್ರಕಾಶ್ ಬಿ ಕೆ..