ಬಹುತೇಕ ಹಿಂದೂಗಳೇ ಸಂಭ್ರಮಿಸಿ, ಆಚರಿಸುವ ಮೊಹರಂ ಹಬ್ಬ..!!!

ಬಹುತೇಕ ಹಿಂದೂಗಳೇ ಸಂಭ್ರಮಿಸಿ, ಆಚರಿಸುವ ಮೊಹರಂ ಹಬ್ಬ..

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ನುಗ್ಗಾನಟ್ಟಿ ಎಂಬ ಗ್ರಾಮದಲ್ಲಿ ಸುಮಾರು ದಶಕಗಳಿಂದ ಭಾವೈಕ್ಯತೆಯ ಸಂಕೇತವಾಗಿ, ಅತ್ಯಂತ ಶ್ರದ್ಧಾ, ಭಕ್ತಿಪೂರ್ವಕವಾಗಿ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿರುವದು ವಾಡಿಕೆಯಾಗಿದೆ..

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ, ಮುಸ್ಲಿಂ ಸಮುದಾಯದ ಈ ಮೊಹರಂ ಹಬ್ಬವನ್ನು ಅತ್ಯಂತ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವ ಗ್ರಾಮಸ್ಥರು, ಆ ದೇವರಲ್ಲಿ ತಮ್ಮ ಇಷ್ಟಾರ್ಥವನ್ನೆಲ್ಲಾ (ಬೇಡಿಕೆ) ಕೇಳಿಕೊಳ್ಳುವ ಹಾಗೂ ಆ ಇಷ್ಟಾರ್ಥಗಳು ಇಡೇರಿದಾಗ ಕೃತಜ್ಞತಾ ಪೂರ್ವಕವಾಗಿ ದೇವರಿಗೆ ಹರಕೆ ತೀರಿಸುವ ಸಂಪ್ರದಾಯವಿದ್ದು, ಪ್ರತಿ ಭಕ್ತರ ಸಂಕಟ ದೂರ ಮಾಡುವ ಶಕ್ತಿ ಈ ದೇವನಿಗಿದೆ ಎಂಬುದು ಗ್ರಾಮಸ್ಥರ ನಂಬಿಕೆ..

ಸವದತ್ತಿ ತಾಲೂಕಿನ ನುಗ್ಗಾನಟ್ಟಿ ಎಂಬ ಈ ಗ್ರಾಮದ ಮೊಹರಂ ಆಚರಣೆಯ ಮತ್ತೊಂದು ವಿಶೇಷವೆಂದರೆ, ಈ ಗ್ರಾಮದಲ್ಲಿ ಒಂದೇ ಮುಸ್ಲಿಂ ಮನೆತನವಿದ್ದು, ಪೂಜೆ ಒಂದನ್ನು ಬಿಟ್ಟು, ಹಬ್ಬದ ಉಳಿದ ಎಲ್ಲಾ ಕಾರ್ಯಗಳನ್ನು ಹಿಂದೂಗಳೇ ನೆರವೇರಿಸುವರು, ದೋಲಿ ಹೋರುವದು, ದೇವರ ಮೂರ್ತಿಫಲಕಗಳನ್ನು ಹೋರುವದು, ಕೆಂಡವನ್ನು ದಾಟುವುದು, ಹೀಗೆ ಎಲ್ಲ ಧಾರ್ಮಿಕ ಕಾರ್ಯಗಳನ್ನು ಹಿಂದೂ ಸಮುದಾಯದವರೆ ಮಾಡುವದು ಇಲ್ಲಿಯ ವಿಶೇಷ..

ಈ ಗ್ರಾಮದಲ್ಲಿ ಬಹುತೇಕ ಹಿಂದೂಗಳೇ ಇರುವದರಿಂದ ಇದೊಂದು ಭಾವೈಕೆತೆಯಿಂದ ಕೂಡಿದ ಹಿಂದೂ ಹಬ್ಬವೇ ಎಂಬ ವಾತಾವರಣ ನಿರ್ಮಾಣವಾಗುತ್ತದೆ..

ತಮ್ಮ ರಾಜಕೀಯ ಹಾಗೂ ಇನ್ನಿತರ ಲಾಭಕ್ಕಾಗಿ, ಧರ್ಮ, ಜಾತಿ, ಭಾಷೆ, ಗಡಿ, ವಿಚಾರದಲ್ಲಿ ಕಲಹ ತಂದು ವೈಮನಸ್ಸು ಮೂಡಿಸುವ ಜನರ ಮಧ್ಯ,,, ಮುಸ್ಲಿಂ ಹಬ್ಬವನ್ನು ಮನೆಯ ಹಬ್ಬದಂತೆ, ಆತ್ಮೀಯತೆಯಿಂದ ಅಣ್ಣತಮ್ಮಂದಿರಂತೆ ಆಚರಣೆ ಮಾಡುವ ಈ ಗ್ರಾಮದ ಜನರ ನಡೆ, ಇಡೀ ನಾಡಿಗೆ ಮಾದರಿಯಾಗಿದೆ…

ವರದಿ ಪ್ರಕಾಶ ಕುರಗುಂದ..