ವರಮಹಾಲಕ್ಷ್ಮಿ ಹಬ್ಬದ ದಿನದಂದು, ಮಹಾಲಕ್ಷ್ಮಿದೇವಿ ಕೃಪೆಗೆ ಪಾತ್ರರಾದ ಸಾವಿರಾರು ಭಕ್ತರು..

ವರಮಹಾಲಕ್ಷ್ಮಿ ಹಬ್ಬದ ದಿನದಂದು, ಮಹಾಲಕ್ಷ್ಮಿದೇವಿ ಕೃಪೆಗೆ ಪಾತ್ರರಾದ ಸಾವಿರಾರು ಭಕ್ತರು..

ದೇವಿ ನಮ್ಮ ಜೊತೆ ಇದ್ದು, ನಮ್ಮನ್ನು ಕಾಯುವಳು ಎಂಬುದು ಈ ನಾಡಿನ ಮಹಿಳೆಯರ ದೃಢ ನಂಬಿಕೆ..

ಬೆಳಗಾವಿ : ಪವಿತ್ರ ಶ್ರಾವಣ ತಿಂಗಳ ಮೊದಲನೆಯ ಶುಕ್ರವಾರದ ಲಕ್ಷ್ಮಿ ಆರಾಧನೆಯ ಜೊತೆಗೆ, ವರಮಹಾಲಕ್ಷ್ಮಿ ಹಬ್ಬವೂ ಕೂಡಿ ಕೊಂಡಿರುವದರಿಂದ, ಇಡೀ ರಾಜ್ಯದ ತುಂಬೆಲ್ಲ ಮಹಿಳಾ ಮಣಿಗಳ ಪೂಜೆ, ಆರಾಧನೆ, ಶ್ರದ್ಧಾ ಭಕ್ತಿಯ ಆಚರಣೆಗಳ ನೋಟವೇ ಕಂಗೊಳಿಸುತ್ತಿತ್ತು..

ಶುಕ್ರವಾರ ಹಬ್ಬವೆಂದರೆ, ಅದರ ಹಿಂದಿನ ಎರಡು ದಿನ ಪೇಟೆಯಲ್ಲಿ ಕಾಲಿಡಲು ಜಾಗವಿಲ್ಲದಷ್ಟು, ಮಹಿಳೆಯರು ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದು, ಹೂವು, ಹಣ್ಣು, ಬಾಳೆ ಎಲೆ, ಕಾಯಿ, ಕರ್ಪೂರ, ಗಂಧ, ಎಣ್ಣೆ, ಬತ್ತಿ, ಸೀರೆ, ಆಭರಣ, ಅಲಂಕಾರಕ ವಸ್ತುಗಳು, ನೈವೇದ್ಯ ತಯಾರಿಕಾ ಸಾಮಗ್ರಿ, ಹೀಗೆ ಹತ್ತು ಹಲವಾರು ಪೂಜಾ ಸಲಕರಣೆಗಳನ್ನು ಬೆಲೆ ದುಬಾರಿ ಇದ್ದರೂ ಖರೀದಿಸಿ ಹಬ್ಬದ ತಯಾರಿ ಮಾಡಿದ ದೃಶ್ಯ ಸಾಮಾನ್ಯವಾಗಿತ್ತು..

ಇಂದು ಶುಕ್ರವಾರ ಪ್ರತಿ ಮನೆಯಲ್ಲಿಯೂ, ಪ್ರತಿ ಮಹಿಳೆಯರು, ತಮ್ಮ ಶ್ರದ್ಧಾ ಭಕ್ತಿಯಿಂದ, ದೇವಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥಗಳನ್ನೆಲ್ಲಾ ದೇವಿಗೆ ಒಪ್ಪಿಸುವರು, ಸಂಸ್ಕಾರ, ಪದ್ಧತಿ, ಸಂಪ್ರದಾಯ, ಆಚಾರ ವಿಚಾರ, ಒಂದು ಕಡೆಯಾದರೆ, ಆ ದೇವಿ ತಮ್ಮ ಜೊತೆ ಇದ್ದು ತಮ್ಮನ್ನು ಕಾಪಾಡುವಳು ಎಂಬ ಗಾಢವಾದ ನಂಬಿಕೆ ನಮ್ಮ ನೆಲದ ಮುಗ್ಧ ಮಹಿಳೆಯರ ಮನಸ್ಸಿನಲ್ಲಿರುತ್ತದೆ..

ಆದುದರಿಂದ ಈ ನಾಡಿನ ಪ್ರತಿ ಹೆಣ್ಣು ಮಕ್ಕಳ ಮನದಲ್ಲಿ ಆ ದೇವಿಯ ಆರಾಧನೆ ಇರುತ್ತದೆ, ಅದೇ ರೀತಿ ನಮ್ಮ ಕುಂದಾನಗರಿ ಬೆಳಗಾವಿಯಲ್ಲಿಯೂ ಕೂಡಾ, ಪ್ರತಿ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ಲಕ್ಷ್ಮೀದೇವಿಯ ಜಪತಪ ನಡೆದು, ಪೂಜೆ, ಪುನಸ್ಕಾರಗಳು ಜರುಗಿದ್ದು ವಿಶೇಷವಾಗಿತ್ತು,,

ಬೆಳಗಾವಿಯ ಬಸವನ ಮತ್ತು ಅನಂತಶಯನ ಗಲ್ಲಿಯ ಪಕ್ಕದಲ್ಲಿ ಇರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿಯೂ ಕೂಡಾ ಬೆಳಿಗ್ಗೆ 5 ಗಂಟೆಯಿಂದಲೇ ದೇವಿಗೆ ಪೂಜೆ, ಪುನಸ್ಕಾರ, ಅಭಿಷೇಕ, ಆರಾಧನೆ ನಡೆದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಆರಾಧಿಸಿ, ಪ್ರಾರ್ಥಿಸಿ, ಲಕ್ಷ್ಮಿಮಾತೆಯ ಕೃಪೆಗೆ ಪಾತ್ರರಾದರೆಂಬ ಸನ್ನಿವೇಶ ಸೃಷ್ಟಿಯಾಗಿತ್ತು..

ಮುಂಜಾನೆಯಿಂದ ರಾತ್ರಿಯವರೆಗೂ ನಿರಂತರವಾಗಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ಭಕ್ತಿಯಿಂದ ದೇವಿಯನ್ನು ನೆನೆದು, ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿ ಪೂರ್ವಕವಾಗಿ, ಸಾರ್ಥಕವಾಗಿ ಆಚರಣೆ ಮಾಡಿದ, ಈ ಸಕಲ ಭಕ್ತ ಸಮೂಹದ ಮೇಲೆ ಆ ತಾಯಿ ಮಹಾಲಕ್ಷ್ಮಿಯ ಕೃಪೆ ಇರಲಿ ಎಂಬುದೇ ಎಲ್ಲರ ಆಶಯ…

ವರದಿ ಪ್ರಕಾಶ ಕುರಗುಂದ..