ರಾಜ್ಯ ಫುಟ್ಬಾಲ್ ತಂಡಕ್ಕೆ ಶ್ರೇಯಸ್ ಪಾಟೀಲ್ ಆಯ್ಕೆ..
ಅಗಸಗೆ ಗ್ರಾಮಕ್ಕೆ ಮೆರಗು ತಂದ ಫುಟ್ಬಾಲ್ ಆಟಗಾರ….
ಬೆಳಗಾವಿ: ತಾಲೂಕಿನ ಅಗಸಗೆ ಗ್ರಾಮದ ಬಾಲ ಪ್ರತಿಭೆ ಶ್ರೇಯಸ ನಿಂಗಪ್ಪ ಪಾಟೀಲ ಅವರು 14 ವರ್ಷದ ಒಳಗಿನ ಬಾಲಕರ ರಾಜ್ಯ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಆಡಲು ಬೆಂಗಳೂರಿನಿಂದ ತೆರಳಲಿದ್ದಾರೆ.
ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಆಯೋಜಿಸಿರುವ ಸಬ್ ಜೂನಿಯರ್ ನ್ಯಾಷನಲ್ ಚಾಂಪಿಯನ್ಶಿಪ್ ಪಂದ್ಯಾವಳಿಗೆ 14 ವರ್ಷದ ಒಳಗಿನ ಬಾಲಕರ ಕರ್ನಾಟಕ ತಂಡಕ್ಕೆ ಶ್ರೇಯಸ್ ಆಯ್ಕೆಯಾಗಿದ್ದಾರೆ.

ಮೂಲತಃ ಅಗಸಗೆ ಗ್ರಾಮದವರಾದ ಇವರ ತಂದೆ ನಿಂಗಪ್ಪ ಪಾಟೀಲ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಶ್ರೇಯಸ್ ಬೆಂಗಳೂರಿನಲ್ಲಿಯೇ ತಮ್ಮ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣದ ಜೊತೆಗೆ ಫುಟ್ಬಾಲ್ ನಲ್ಲಿ ಉತ್ತಮ ಆಟ ಆಡುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೇಯಸ್ ಈ ಹಿಂದೆಯೂ ಹಲವಾರು ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಫುಟ್ಬಾಲ್ ಅಕಾಡೆಮಿ ಯೂಥ್ ಲೀಗ್ ನಲ್ಲಿ 18 ಗೋಲ್ ಮಾಡಿದ್ದಾರೆ. ಶ್ಲೋಕ ಟೂರ್ನಮೆಂಟ್ ನಲ್ಲಿ 14, ಮರಡೋನಾ ಟೂರ್ನಮೆಂಟ್ ನಲ್ಲಿ 6 ಗೋಲ್ ಬಾರಿಸುವ ಮೂಲಕ ತಂಡದಲ್ಲಿ ಉತ್ತಮ ಆಟಗಾರರಾಗಿ ಹೊರಹೊಮ್ಮಿ ರಾಷ್ಟ್ರೀಯ ಮಟ್ಟದಲ್ಲಿ ಆಡಲು ಆಯ್ಕೆ ಯಾಗಿದ್ದಾರೆ.
ಶ್ರೇಯಸ್ ಅವರ ಈ ಸಾಧನೆಗೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲಗೌಡ್ ಪಾಟೀಲ, ಕಾಂಗ್ರೆಸ್ ಸೇವಾದಳದ ರಾಜ್ಯ ಜಂಟಿ ಕಾರ್ಯದರ್ಶಿ ಶಿವಪುತ್ರ ಮೇತ್ರಿ, ಸೇಫ್ ವಾರ್ಡ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ಹಾಗೂ ಗ್ರಾಮಸ್ಥರು ಅಭಿನಂದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗಸ ಗೆ ಗ್ರಾಮದ ಪ್ರತಿಭೆ ಮೆರೆಯಲಿ ಎಂದು ಶುಭ ಹಾರೈಸಿದ್ದಾರೆ.
ವರದಿ: ಸಂತೋಷ ಮೇತ್ರಿ, ಅಗಸಗೆ, ಸಮಾಜಮುಖಿ ಸುದ್ದಿ..