ಮಹಾತ್ಮ ಗಾಂಧೀಜಿಯವರ 154 ನೆಯ ಜನ್ಮ ದಿನಾಚರಣೆ..
ಸರಳತೆಗೆ ಸೂಕ್ತ ನಿದರ್ಶನವೆಂದರೆ ಗಾಂಧೀಜಿಯವರು..
ಎಂ ಎಲ್ ಸಿ ನಾಗರಾಜ್ ಯಾದವ್ ಹೇಳಿಕೆ..
ಗಾಂಧೀಜಿಯವರ ಸತ್ಯ ಮಾರ್ಗದಲ್ಲಿ ನಡೆಯೋಣ:
ಶಾಸಕ ಆಸೀಫ್ ಸೇಠ್ ಕರೆ

ಬೆಳಗಾವಿ, ಅ.02: ಜಗತ್ತಿಗೆ ಸತ್ಯ, ಶಾಂತಿ ಮತ್ತು ಅಹಿಂಸೆ ಬೋಧಿಸಿದ ಮಹಾತ್ಮ ಗಾಂಧೀಜಿಯವರ ಮಾರ್ಗವೇ ಸರಿಯಾದ ಮಾರ್ಗವಾಗಿದೆ. ಭಾರತೀಯರಾದ ನಾವು ಪರಸ್ಪರ ಗೌರವಿಸುವ ಮೂಲಕ ಸದಾ ಭಾರತೀಯರಾಗಿರುವುದರ ಜತೆಗೆ ಗಾಂಧೀಜಿಯವರ ಮಾರ್ಗದಲ್ಲಿಯೇ ನಡೆಯಬೇಕಿದೆ ಎಂದು ಶಾಸಕ ಅಸೀಫ್(ರಾಜು) ಸೇಠ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ, ಪದವಿಪೂರ್ವ ಶಿಕ್ಷಣ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಸೋಮವಾರ (ಅ.2) ಟಿಳಕವಾಡಿಯ ವೀರಸೌಧದಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ಗಾಂಧೀ ತತ್ವಗಳನ್ನು ಸ್ವೀಕರಿಸಬೇಕು. ಅವರ ಪುಸ್ತಕಗಳನ್ನು ಓದಿ ಅವರ ವಿಚಾರ, ಚಿಂತನೆಗಳನ್ನು ತಿಳಿದುಕೊಳ್ಳಬೇಕು. ಭವಿಷ್ಯದಲ್ಲಿ ಮಾದರಿ ವ್ಯಕ್ತಿಗಳಾಗಲು ಕಠಿಣ ಶ್ರಮವಹಿಸಿ, ನಿರಂತರ ಅಭ್ಯಾಸ ನಡೆಸಿದರೆ ಮಾತ್ರ ಪ್ರಯತ್ನದ ಪ್ರತಿಫಲ ಸಿಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗಾಂಧೀಜಿ ಮಾತ್ರವಲ್ಲದೇ ದೇಶ ಕಂಡ ಮಹಾನ್ ನಾಯಕ, ಸರಳ ಜೀವಿ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಕೂಡ ಇದೆ.
“ಜೈ ಜವಾನ್-ಜೈ ಕಿಸಾನ್” ಘೋಷಣೆ ನೀಡಿದ ಅವರ ಸರಳ ಜೀವನ ನಿರ್ವಹಣೆ ನಾವೆಲ್ಲರೂ ಪಾಠವಾಗಿ ಕಲಿಯಬೇಕು ಎಂದು ಶಾಸಕ ಆಸೀಫ್ (ರಾಜು) ಸೇಠ್ ಅವರು ತಿಳಿಸಿದರು.
ಗಾಂಧೀಜಿಯವರ ತತ್ವದಿಂದ ರಾಮರಾಜ್ಯ ಕಟ್ಟಲು ಸಾಧ್ಯ:
ಮನುಷ್ಯ ಕುಲಕ್ಕೆ ಶಾಂತಿ, ಸಹಬಾಳ್ವೆ ತೋರಿಸಿಕೊಟ್ಟಿದ್ದು ಮಹಾತ್ಮ ಗಾಂಧೀಜಿ. ಅವರ ಅಹಿಂಸಾ ತತ್ವ, ವಿಚಾರ, ಸರಳತೆ ನಡೆ ಇಡೀ ಪ್ರಪಂಚ ಮೆಚ್ಚುವಂತದ್ದು. ಗಾಂಧೀಜಿಯವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಗಾಂಧೀ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಅವರ ಆಶಯದಂತೆ ರಾಮರಾಜ್ಯ ಕಟ್ಟಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರು ತಿಳಿಸಿದರು.
ಇತರೆ ರಾಜ್ಯಗಳಲ್ಲಿರುವಂತೆ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಯನ ಕೇಂದ್ರದ ಅವಶ್ಯವಿದೆ. ಜಿಲ್ಲೆಯಲ್ಲಿ ಅಧ್ಯಯ ಕೇಂದ್ರ ಪ್ರಾರಂಭಕ್ಕೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ಅಹಿಂಸಾ ತತ್ವ ಮಂತ್ರದ ಮೂಲಕ ಸ್ವಾತಂತ್ರ್ಯ ಲಭ್ಯ:
ಹಿಂಸಾತ್ಮಕ ತತ್ವಗಳನ್ನು ತ್ಯಜಿಸಿ, ಅಹಿಂಸಾ ತತ್ವದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ನಿರಂತರ ಉಪವಾಸ ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಮೆ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತದೆ.
ಮುಂದಿನ ಪೀಳಿಗೆಗೆ ಗಾಂಧೀಜಿಯವರ ವಿಚಾರ, ಚಿಂತನೆಗಳು ತಲುಪಬೇಕಿದೆ. ಅವರ ತತ್ವ, ಆದರ್ಶಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ತಿಳಿಸಬೇಕು. ಭಾರತ ಸಂವಿಧಾನದಲ್ಲಿನ ಡಾ.ಬಿ ಆರ್.ಅಂಬೇಡ್ಕರ್ ಚಿಂತನೆಗಳು, ಬಸವಣ್ಣವರ ತತ್ವಗಳನ್ನು ನಾವೆಲ್ಲರೂ ಅರಿಯಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರು ಹೇಳಿದರು.
ಮನಸಿದ್ದರೆ ಮಾರ್ಗ:
ಜಿಪಂ ಸಿಇಓ ಹರ್ಷಲ್ ಭೂಯರ್ ಅವರು ಮಾತನಾಡಿ,
ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ಮಾತ್ರ ತಂದುಕೊಟ್ಟಿಲ್ಲ, ಮನಸಿದ್ದರೆ ಮಾರ್ಗ ಎಂಬ ಮಾತಿನಂತೆ ಅವರ ಚಿಂತನೆ, ವಿಚಾರ ಅಹಿಂಸಾ ತತ್ವ, ಮಾರ್ಗಗಳ ಮೂಲಕ ಏನು ಬೇಕಾದರೂ ಸಾಧಿಸಬಹುದು ಎಂಬ ಪಾಠ ಹೇಳಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ನಮ್ಮ ನಿತ್ಯದ ನಡೆಯಲ್ಲಿ ಬದಲಾವಣೆ ಕಂಡುಕೊಳ್ಳಬೇಕು ಎಂದು ತಿಳಿಸಿದರು.


ಮಹಾತ್ಮ ಗಾಂಧೀ ಜಯಂತಿ ಕೇವಲ ಜಯಂತಿ ಆಚರಣೆಗೆ ಸೀಮಿತವಾಗಬಾರದು. ಯಾವುದೇ ಮಹಾನ್ ಪುರುಷರನ್ನು ಜಾತಿಗೆ ಮಾತ್ರ ಸೀಮಿತವಾಗಿರಿಸದೆ, 12ನೇ ಶತಮಾನದಲ್ಲಿನ ಬಸವಣ್ಣವರ ತತ್ವಗಳನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಅವರು ಹೇಳಿದರು.
ಗಾಂಧೀ ತತ್ವಗಳು ಅನೇಕ ದೇಶಕ್ಕೆ ಮಾದರಿ:
ಇದಕ್ಕೂ ಮುಂಚೆ ವಿಶೇಷ ಉಪನ್ಯಾಸ ನೀಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೊ. ಗಂಗಾಧರಯ್ಯ ಅವರು, ಗಾಂಧೀಜಿಯವರು ತಮ್ಮ ಅಹಿಂಸಾ ತತ್ವದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದರು. ದೇಶಕ್ಕೆ ರಾಮರಾಜ್ಯದ ಕಲ್ಪನೆಯನ್ನು ಬಿತ್ತುವ ಕಾರ್ಯಕ್ಕೆ ಮುಂದಾದರು. ಗಾಂಧೀಜಿಯವರ ಸಾಮಾಜಿಕ, ಧಾರ್ಮಿಕ ನೀತಿಗಳು, ಗಾಂಧೀ ತತ್ವ ಅನೇಕ ದೇಶಗಳಿಗೆ ಮಾದರಿಯಾಗಿವೆ ಎಂದು ಹೇಳಿದರು.

ವಿದ್ಯಾರ್ಥಿಗಳು ಶಾಂತಿದೂತ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಗುರಿ ಸಾಧನೆಗೆ ಏಕಾಗ್ರತೆ ಹೆಚ್ಚಿಸಲು ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು.
ಈಗಾಗಲೇ ದೇಶದ ಅನೇಕ ಭಾಗಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಯನ ಕೇಂದ್ರಗಳಿವೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಕೂಡ ಅಧ್ಯಯನ ಕೇಂದ್ರ ಪ್ರಾರಂಭದ ಅವಶ್ಯಕತೆಯಿದೆ. ಜಿಲ್ಲೆಯ ನಾಯಕರು, ಜನ ಪ್ರತಿನಿಧಿಗಳು ಅಧ್ಯಯನ ಕೇಂದ್ರ ಪ್ರಾರಂಭಕ್ಕೆ ಪ್ರಯತ್ನಿಸಬೇಕು ಎಂದು ಮನವಿ ಮಾಡಿಕೊಂಡರು.
ದೇಶಕೆ ಬಸವ ತತ್ವಗಳನ್ನು ನೀಡಿದ ಮಹಾನ್ ನಾಯಕ, ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಕೊಡುಗೆ ಅಪಾರ, ಅವರು ಸರಳತೆ, ಪ್ರಾಮಾಣಿಕತೆಗೆ ಹೆಸರುವಾಸಿಯಾದ ವ್ಯಕ್ತಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೊ. ಗಂಗಾಧರಯ್ಯ ಅವರು ಉಪನ್ಯಾಸದಲ್ಲಿ ತಿಳಿಸಿದರು.

ನನ್ನ ಜೀವನವೇ ನನ್ನ ಸಂದೇಶ:
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಅವರು ಮಹಾತ್ಮ ಗಾಂಧೀಜಿಯವರು “ನನ್ನ ಜೀವನವೇ ಸಂದೇಶ” ಎಂಬ ಮಾತು ಹೇಳಿದ್ದಾರೆ. ಅದರಂತೆ ಅವರು ಬದುಕಿದ ರೀತಿ ಕೂಡ ವಿಶ್ವಕ್ಕೆ ಮಾದರಿಯಾಗಿದೆ. ಅವರ ವಿಚಾರಧಾರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಗಾಂಧೀಜಿ ಪ್ರಬಂಧ ಸ್ಪರ್ಧೆ-ವಿಜೇತರಿಗೆ ಬಹುಮಾನ ವಿತರಣೆ:
ಪ್ರೌಢಶಾಲಾ ವಿಭಾಗದಲ್ಲಿ ಬೈಲಹೊಂಗಲ ತಾಲೂಕಿನ ಲಿಂಗನಮಠ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಪ್ರೀತಾ ಪಿ. ಮೀಟಗಾರ ಪ್ರಥಮ ಸ್ಥಾನ, ಗೋಕಾಕ್ ತಾಲೂಕು ಕಲ್ಲೋಳ್ಳಿ ಪಿ.ಜೆ.ಎನ್ ಹೈಸ್ಕೂಲ್ ವಿದ್ಯಾರ್ಥಿ ಲಕ್ಷ್ಮೀ ಬ. ಪಾಗಾದ ದ್ವಿತೀಯ ಸ್ಥಾನ ಹಾಗೂ ಸವದತ್ತಿ ತಾಲೂಕಿನ ಮುಗಳಿಹಾಳ ಸರ್ಕಾರಿ ಪ್ರೌಢ ಶಾಲೆಯ ಸುಧಾ ಚಂದರಗಿ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.
ಪದವಿಪೂರ್ವ ವಿಭಾಗದಲ್ಲಿ ಬೈಲಹೊಂಗಲ ಎಸ್.ಜಿ.ವಿ ಪಿಯು ಕಾಲೇಜು ವಿದ್ಯಾರ್ಥಿ ಆರತಿ ತಡಕೋಡ ಪ್ರಥಮ ಸ್ಥಾನ, ಇಟಗಿ ಪಿಯು ಕಾಲೇಜಿನ ಲಕ್ಷ್ಮೀ ಬಡಿಗೇರ ದ್ವಿತೀಯ ಸ್ಥಾನ ಹಾಗೂ ಚನ್ನಮನ ಕಿತ್ತೂರು ಆರ್.ಜಿ.ಎಸ್ ಪಿಯು ಕಾಲೇಜು ವಿದ್ಯಾರ್ಥಿ ಸೋನು ಗುಂಡಗಿ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು..

ಉಪ ಮಹಾಪೌರರಾದ ರೇಷ್ಮಾ ಪಾಟೀಲ, ಡಿಸಿಪಿ ರೋಹನ್, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಅಧೀಕ್ಷಕ ಎಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಹಾಗೂ ಮಹಾನಗರ ಪಾಲಿಕೆಯ ಸದಸ್ಯರು, ಆಹಾರ ಇಲಾಖೆ ಜಂಟಿ ನಿರ್ದೇಶಕರ ಶ್ರೀಶೈಲ ಕಂಕಣವಾಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಲಕ್ಷ್ಮಣ ಬಬಲಿ, ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾದ ಸಯೀದಾ ಆಫ್ರಿನ್ ಬಾನು ಬಳ್ಳಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ, ಡಿಎಸ್.ಎಸ್ ಮುಖಂಡರಾದ ಮಲ್ಲೇಶ ಚೌಗಲಾ ಮತ್ತು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರ ಸಂಘಟನೆಯ ಪದಾಧಿಕಾರಿಗಳು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಪ್ರಕಾಶ ಕುರಗುಂದ..