ಬೆಳಗಾವಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟ…

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟ..

ಸ್ಪರ್ಧಾರ್ಥಿ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯ ಒದಗಿಸಲಾಗಿದೆ..

ಪಿಯು ಉಪನಿರ್ದೇಶಕ ಎಂ ಎಂ ಕಾಂಬಳೆ ಸ್ಪಷ್ಟನೆ..

ಬೆಳಗಾವಿ : ಬೆಳಗಾವಿಯ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಇದೇ ಮಂಗಳವಾರ ದಿನಾಂಕ 31/10/2023 ರಂದು, 2023/24 ನೇ ಸಾಲಿನ ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟ ನಗರದ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜು, ಶಿವಬಸವ ನಗರದಲ್ಲಿ ಜರುಗಲಿವೆ ಎಂಬ ಮಾಹಿತಿಯನ್ನು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ ಎಂ ಕಾಂಬಳೆ ತಿಳಿಸಿದ್ದಾರೆ..

ಶುಕ್ರವಾರ ನಗರದ ವಾರ್ತಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳವಾರ ದಿನಾಂಕ 31 ರಂದು, ಬೆಳಿಗ್ಗೆ 9-30 ಕ್ಕೆ ನಾಗನೂರು ಶ್ರೀ ರುದ್ರಾಕ್ಷಮಠದ ಪರಮಪೂಜ್ಯ ಶ್ರೀ ಡಾ ಅಲ್ಲಮಪ್ರಭು ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಈ ಕ್ರೀಡಾಕೂಟವನ್ನು ಉದ್ಘಾಟನೆ ಮಾಡುವರು, ಜಿಲ್ಲೆಯ ಮತ್ತೊಬ್ಬ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ ಅವರು ಮುಖ್ಯ ಅತಿಥಿ ಆಗಿದ್ದು, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ರಾಜು ಸೇಠ್ ಅವರು ಅಧ್ಯಕ್ಷತೆ ವಹಿಸುತ್ತಾರೆ, ಸರ್ಕಾರದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ, ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಗಳಾದ ಪ್ರಕಾಶ್ ಹುಕ್ಕೇರಿ ಹಾಗೂ ಸ್ಥಳೀಯ ಶಾಸಕ ಸಂಸದರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂಬ ಮಾಹಿತಿ ನೀಡಿದ್ದಾರೆ..

ಇಲ್ಲಿಯವರೆಗೆ ಸುಮಾರು 20 ಜಿಲ್ಲೆಗಳ ಅಂದಾಜು 140 ಕ್ರೀಡಾಪಟುಗಳು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದು, ಇನ್ನು ಸಮಯ ಇರುವದರಿಂದ ಬೇರೆ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಬಹುದು ಎಂದ ಅವರು, ಕ್ರೀಡಾಪಟು, ಅಧಿಕಾರಿಗಳಿಗೆ, ತೀರ್ಪುದಾರರಿಗೆ, ಊಟ, ಉಪಹಾರ, ವಸತಿ, ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದು, ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯವನ್ನು ಮಾಡಲಾಗಿದೆ ಎಂದಿದ್ದಾರೆ.

19 ವಯಸ್ಸಿನ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ ಹತ್ತು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಅರ್ಜುನ ಪ್ರಶಸ್ತಿ ವಿಜೇತರಾದ ಹಾಗೂ ಅಂತಾರಾಷ್ಟ್ರೀಯ ಬಾಕ್ಸಿಂಗ್ ನಿರ್ಣಾಯಕರಾದ ಶ್ರೀಯುತ ಮುಕುಂದ ಕಿಲ್ಲೇಕರ ಅವರು ಮುಖ್ಯ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ, ಕಾರಣ ಈ ಅದ್ಬುತ ಕ್ರೀಡಾಕೂಟಕ್ಕೆ ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು..

ಈ ಸಂದರ್ಭದಲ್ಲಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು, ಸಿದ್ದರಾಮೇಶ್ವರ ಕಾಲೇಜಿನ ಸಿಬ್ಬಂದಿಗಳು, ವಿವಿಧ ಕಾಲೇಜುಗಳ ಸಿಬ್ಬಂದಿ ಹಾಜರಿದ್ದರು..

ವರದಿ ಪ್ರಕಾಶ ಕುರಗುಂದ..