ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಉಪಪ್ರಾಚಾರ್ಯ ಲೋಕಾಯುಕ್ತ ಬಲೆಗೆ…

ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಉಪಪ್ರಾಚಾರ್ಯ ಲೋಕಾಯುಕ್ತ ಬಲೆಗೆ..

ಬೆಳಗಾವಿಯ ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲೂ ಭ್ರಷ್ಟಾಚಾರ..

ಕಾಲೇಜಿನ ಉಪಪ್ರಾಚರ್ಯ ಕೆ ಬಿ ಹಿರೇಮಠ ಲಂಚ ಪಡೆಯುವಾಗ ಬಂಧನ..

ಬೆಳಗಾವಿ : ಗಳಿಕೆ ರಜೆ ನಗದೀಕರಣ ಮಾಡಲು ಠರಾವು ಪ್ರತಿ ನೀಡಿದ್ದಕ್ಕಾಗಿ ಲಂಚ ಪಡೆಯುತ್ತಿದ್ದ ಬೆಳಗಾವಿಯ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಐಎಸ್ ಬೆಳಗಾವಿಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಹಾಗೂ ಪ್ರೌಢ ಶಾಲಾ ವಿಭಾಗದ ಉಪಪ್ರಾಚಾರ್ಯ ಕೆ. ಬಿ. ಹಿರೇಮಠ ಬೆಳಗಾವಿ ರವರ ಬಂಧನ.

ಪಿರ‍್ಯಾದಿದಾರರಾದ ರವೀಂದ್ರ ರಾಜಾರಾಮ ಮದಾಳೆ ಮುಖ್ಯೋಪಾಧ್ಯಾಯರು ಶ್ರೀ ಬಸವೇಶ್ವರ ಪ್ರೌಢ ಶಾಲೆ ನಾಗರನೂರ ತಾಃ ಬೈಲಹೊಂಗಲ ಅವರ ಗಳಿಕೆ ರಜೆ ನಗದೀಕರಣ ಮಾಡುವದಕ್ಕೆ ಆಡಳಿತ ಮಂಡಳಿಯಿಂದ ಠರಾವು ಪ್ರತಿಯನ್ನು ನೀಡಿದ್ದಕ್ಕಾಗಿ ಗಳಿಕೆ ರಜೆಯ ಹಣದ ನಗದೀಕರಣ ಮೊತ್ತದ ಶೇ. 25% ರಂತೆ ಒಟ್ಟು 13150/- ರೂಪಾಯಿಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಲಂಚ ಕೊಡಲು ಮನಸ್ಸಿಲ್ಲದೇ ಫರ‍್ಯಾದಿದಾರರು ಆಪಾದಿತ ಅಧಿಕಾರಿಯ ಲಂಚ ಬೇಡಿಕೆಯ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ಪ್ರಕರಣ ಸಂಖ್ಯೆ 01/2024 ಕಲಂ 7(ಬಿ) ಪಿಸಿ ಕಾಯ್ದೆ 1988 (ತಿದ್ದುಪಡಿ- 2018) ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಆಪಾದಿತ ಅಧಿಕಾರಿಯು ನಿನ್ನೆ ದಿನಾಂಕಃ 23/01/2024 ರಂದು ತನ್ನ ಶ್ರಿ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಬೆಳಗಾವಿಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ, ಪ್ರೌಢ ಶಾಲಾ ವಿಭಾಗದ ಕಾರ್ಯಾಲಯದಲ್ಲಿ ಫಿರ್ಯಾದಿಯಿಂದ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಯಶಸ್ವಿಯಾಗಿ ಬಲೆಗೆ ಕೆಡವಿದ್ದು, ಸದರಿ ಉಪಪ್ರಾಚಾರ್ಯ ಕೆ. ಬಿ. ಹಿರೇಮಠರವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಲಾಗಿರುತ್ತದೆ.

ಸದರಿ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಹನುಮಂತರಾಯ ಐಪಿಎಸ್ ಹಾಗೂ ಬಿ. ಎಸ್. ಪಾಟೀಲ ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಲೋಕಾಯುಕ್ತ ಬೆಳಗಾವಿ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಆರ್. ಎಲ್. ಧರ್ಮಟ್ಟಿ ಪೊಲೀಸ್ ಇನ್ಸ್ಪೆಕ್ಟರ್, ಅಜೀಜ್ ಕಲಾದಗಿ ಪೊಲೀಸ್ ಇನ್ಸಪೆಕ್ಟರ, ಅನ್ನಪೂರ್ಣ ಹುಲಗೂರ ಪೊಲೀಸ್ ಇನ್ಸಪೆಕ್ಟರ, ಲೋಕಾಯುಕ್ತ ಬೆಳಗಾವಿ ಹಾಗೂ ಸಿಬ್ಬಂದಿಗಳಾದ ರವಿ ಮಾವರಕರ, ಗಿರಿಶ್ ಪಾಟೀಲ, ವಿಠಲ ಬಸಕ್ರಿ, ಸಂತೋಷ ಬೆಡಗ, ಹಾಗೂ ತಂಡದವರಿಂದ ಕೈಗೊಳ್ಳಲಾಗಿರುತ್ತದೆ.

ವರದಿ ಪ್ರಕಾಶ ಕುರಗುಂದ..