ಬೆಳಗಾವಿಯಲ್ಲಿ ಐದು ದಿನಗಳ ಕಾಲ ಕೃಷಿ ಉತ್ಸವ ಮೇಳ..
ರೈತರ, ಯಶಸ್ವಿ ರೈತರ, ಕೃಷಿ ತಜ್ಞರ ಮಹಾಸಂಗಮದ ಉತ್ಸವ..
ಬೆಳಗಾವಿ: ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಮಾ.7 ರಿಂದ 11ರ ವರೆಗೆ 5 ದಿನಗಳ ಕಾಲ ಜಿಲ್ಲಾಡಳಿತ, ಕೃಷಿ ಇಲಾಖೆ ಸಹಯೋಗದೊಂದಿಗೆ “ಬೆಳಗಾವಿ ಕೃಷಿ ಉತ್ಸವ” ಆಯೋಜಿಸಲಾಗಿದೆ ಎಂದು ಸೆಂಟ್ರಲ್ ರೋಟರಿ ಕ್ಲಬ್ ಆಫ್ ಬೆಳಗಾವಿ ಅಧ್ಯಕ್ಷ ಮಂಜುನಾಥ ಅಳವಣಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕೃಷಿ ಉತ್ಸವ ಆಯೋಜಿಸಲಾಗಿದೆ. 160 ಮಳಿಗೆಗಳ ಸ್ಥಾಪಿಸಿ ರೈತರು ತಮ್ಮ ಜಮೀನಿನಲ್ಲಿ ಫಲವತ್ತಾದ ಬೆಳೆ ಬೆಳೆಯುವ ಬಗ್ಗೆ ನುರಿತ ತಜ್ಞರು ಮಾಹಿತಿ ನೀಡಲಿದ್ದಾರೆ. ಇನ್ನು ಕೃಷಿ ಉತ್ಸವದ ಪ್ರವೇಶ ಸಂಪೂರ್ಣ ಉಚಿತವಾಗಿದೆ.

ರೈತರಿಗಾಗಿ ಒಂದು ತರಬೇತಿ ಕೇಂದ್ರ ಸ್ಥಾಪಿಸಿ ಒಳ್ಳೆಯ ರೈತರನ್ನು ಗುರುತಿಸಿ ಅವರಿಂದಲೇ ಉತ್ಸವಕ್ಕೆ ಆಗಮಿಸಿದ ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಕೊರೊನಾ ಬಂದ ಮೇಲೆ ಯುವಕರಲ್ಲಿ ಕೃಷಿ ಬಗೆಗಿನ ಉತ್ಸಾಹ ಕುಗ್ಗಿದೆ. ಹಾಗಾಗಿ, ಯುವ ರೈತರಿಗೆ ಕೃಷಿಯ ಬಗ್ಗೆ ಮನವರಿಕೆ ಮಾಡಿಕೊಡಲು ರೋಟರಿ ಕ್ಲಬ್ ಸಹಯೋಗದಲ್ಲಿ ಕೃಷಿ ಉತ್ಸವ ಆಯೋಜಿಸಲಾಗಿದೆ, ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಸಿರಿ ಧಾನ್ಯ ಮೇಳ ಆಯೋಜಿಸಿ ಯಶಸ್ವಿಯಾಗಿದ್ದೇವೆ.
ಕೃಷಿ ಉತ್ಸವವನ್ನು ತುಂಬಾ ಅಚ್ಚುಕಟ್ಟಾಗಿ ಹಮ್ಮಿಕೊಳ್ಳುತ್ತಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಅಭಯ ಜೋಶಿ, ಶೇಖ್ ಅಲಿ, ದಿನೇಶ ಕಾಳೆ, ಅಜಯ ಹೆಡ್ಡಾ, ರಾಜೇಂದ್ರ ದೇಸಾಯಿ ಇದ್ದರು.
ವರದಿ ಪ್ರಕಾಶ ಕುರಗುಂದ..