ಕೇಸರಿ ದ್ವಜ ಹಿಡಿದ ಮಾತ್ರಕ್ಕೆ ಕಾಂಗ್ರೆಸ್ ಸಂಸ್ಕೃತಿ ಬದಲಾಗದು…

ಕೇಸರಿ ದ್ವಜ ಹಿಡಿದ ಮಾತ್ರಕ್ಕೆ ಕಾಂಗ್ರೆಸ್ ಸಂಸ್ಕೃತಿ ಬದಲಾಗದು..

ಹೊರಗಿನಿಂದ ಬಂದ ಇಂದಿರಾಗಾಂಧಿಯನ್ನು ಗೆಲ್ಲಿಸಿ ಪ್ರಧಾನಿ ಮಾಡಿದ್ದು ಇದೆ ಕಾಂಗ್ರೆಸ್..

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್..

ಬೆಳಗಾವಿ: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಯಾವ ರೀತಿ ಕುಸಿದು ಬೀಳುತ್ತದೆ ಎಂದು ಹೇಳದ ಸ್ಥಿತಿಯಿದೆ. ಯಾಕೆಂದರೆ ಅವರ ಶಾಸಕರೆ ಬಂಡಾಯ‌ ಏಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಕ್ಷಣದಲ್ಲಿ ಈ ಸರ್ಕಾರ ಪತನವಾಗಬಹುದು ಎಂದು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರು ರಾಜೀನಾಮೆ‌ ನೀಡಬೇಕಾಗುತ್ತದೆ ಎಂದು ಗುಬ್ಬಿ ಕಾಂಗ್ರೆಸ್ ಶಾಸಕ ಹೇಳಿದ್ದಾರೆ. ಹಾಗಾಗಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡಿದೆ. ಈಗಾಗಲೇ ಅವರಿಗೆ ಸೋಲಿನ ಭಯ ಶುರುವಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಲ್ಲಿನ ಶಾಸಕರಿಗೆ ವಿಶೇಷ ಅನುದಾನ ಕೊಡುತ್ತಿಲ್ಲ. ಹೊಸ ಕೆಲಸಗಳು ಆಗುತ್ತಿಲ್ಲ. ಹಿಂದಿನ‌ ಬಿಲ್ ತುಂಬದ ಸ್ಥಿತಿಯಿದೆ ಎಂದು ಹರಿಹಾಯ್ದರು.

ಇತ್ತಿಚೆಗೆ ಪುತ್ರನ ಪರ ರ್ಯಾಲಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಸರಿ ಶಾಲು ಹಾಕಿದ್ದಕ್ಕೆ ಪ್ರತಿಕ್ರಯಿಸಿದ ಜಗದೀಶ ಶೆಟ್ಟರ್, ಕೇಸರಿ ಧ್ವಜ ಹಾಕಿದ ತಕ್ಷಣ ಕಾಂಗ್ರೆಸ್ ಸಂಸ್ಕೃತಿ ಎಂದಿಗೂ ಬದಲಾಗೋದಿಲ್ಲ‌. ಜನ ನಿಮಗೆ ಮರಳು ಆಗೋದಿಲ್ಲ. ಇತ್ತಿಚೆಗೆ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಾಗ ಕುಮಾರಸ್ವಾಮಿ ಕೇಸರಿ ಶಾಲು ಹಾಕಿದಾಗ ಕಾಂಗ್ರೆಸ್ ನವರು ಟೀಕಿಸಿದರು. ಹಾಗಾದರೆ, ಈಗ ನೀವು ಕೇಸರಿ ಶಾಲು ಹಾಕಿಕೊಂಡಿರಲ್ಲ. ಮುಸ್ಲಿಂ‌ ತುಷ್ಠೀಕರಣ ನೀತಿ ನಿಲ್ಲಿಸಲು ನಿಮಗೆ ಆಗುತ್ತಾ ಎಂದು ಹರಿಹಾಯ್ದರು.

ಅಧಿಕೃತವಾಗಿ ಟಿಕೆಟ್ ಸಿಕ್ಕ ಬಳಿಕ ಅಭೂತಪೂರ್ವ ಸ್ವಾಗತ ಕೋರಲಾಗಿದೆ. ಯಡಿಯೂರಪ್ಪನವರು ನಿನ್ನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೆಷ ಮತ್ತು ನಮಗೆ ಶಕ್ತಿ ತಂದಿದೆ. ರಾಷ್ಟ್ರೀಯ, ರಾಜ್ಯ ನಾಯಕರ ಇಚ್ಛೆಯಿಂದ ಬೆಳಗಾವಿಯಿಂದ ಸ್ಪರ್ಧಿಸುತ್ತಿದ್ದೇನೆ. ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡಿದ್ದೇನೆ. ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಈ ಭಾಗದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇನೆ.

ಕೋವಿಡ್, ಪ್ರವಾಹದ ಸಂದರ್ಭದಲ್ಲೂ ಈ ಭಾಗದ ಜನರ ಪರವಾಗಿ ನಿಂತು ಕೆಲಸ ಮಾಡಿದ್ದೇನೆ. ಹೀಗೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದೇನೆ. ಸ್ಪೀಕರ್ ಆಗಿದ್ದಾಗ ನಾನು ಸೂಚಿಸಿದ ಸ್ಥಳದಲ್ಲೆ ಸುವರ್ಣವಿಧಾನಸೌಧ ನಿರ್ಮಾಣವಾಗಿತ್ತು. ಆ ಬಳಿಕ ನಾನು ಮುಖ್ಯಮಂತ್ರಿ ಆಗಿದ್ದಾಗ ಅದನ್ನು ಉದ್ಘಾಟಿಸಿರುವುದು ನನ್ನ ಸೌಭಾಗ್ಯ. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಗಮಿಸಿದ್ದರು ಎಂದರು.

ನಿನ್ನೆ ಎಲ್ಲರ ಜೊತೆಗೆ ಮಾತಾಡಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಒಗ್ಗಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಮಾಡಬೇಕು ಎನ್ನುವುದು ಎಲ್ಲರ ಆಸೆಯಾಗಿದೆ. ನಾನು ಹೊರಗಿನವಲ್ಲ. ಹುಬ್ಬಳ್ಳಿ ಜನ್ಮಭೂಮಿ, ಬೆಳಗಾವಿ ಕರ್ಮಭೂಮಿ. ಇಲ್ಲಿಯೇ ಮನೆ ಕೂಡ ಮಾಡುತ್ತೇನೆ. ದಿ. ಸುರೇಶ ಅಂಗಡಿ ಅವರ ಸಾಧನೆಗಳು ನನ್ನ ಕಣ್ಮುಂದಿವೆ. ಅಂಗಡಿಯವರು ಪ್ರತಿ ಹಂತದಲ್ಲೂ ನನ್ನ ಜೊತೆ ಚರ್ಚಿಸುತ್ತಿದ್ದರು. ಮಂಗಲ ಅಂಗಡಿ ಅವರು ಕೆಲವೇ ವರ್ಷ ಸಂಸದರಾಗಿದ್ದರೂ ವಿಶನ್ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಅವರು ಅಭಿವೃದ್ಧಿ, ವಿಚಾರಗಳನ್ನು ಮುಂದುವರಿಸುತ್ತೇನೆ ಎಂದು ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿ ಮೂಲದ ಅಜಯ್ ಮಾಕನ್ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರನ್ನಾಗಿ ಕಾಂಗ್ರೆಸ್ ಮಾಡಿದೆ, ರಾಹುಲ್ ಗಾಂಧಿ ವಯನಾಡ್ ನಿಂದ ಮತ್ತೆ ನಿಲ್ಲುತ್ತಿದ್ದಾರೆ. ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಗೆದ್ದಿದ್ದರು. ಅದೇ ರೀತಿ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಗೆಲುವು ಸಾಧಿಸಿದ್ದರು. ಹಾಗಾಗಿ, ಹೊರಗಿನಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಟೀಕಿಸುವುದು ಸರಿಯಲ್ಲ. ಅದು ಅಪ್ರಸ್ತುತ.

ರಾಷ್ಟ್ರೀಯತೆ, ಕರ್ನಾಟಕ, ಬೆಳಗಾವಿ ಅಭಿವೃದ್ಧಿ ಅಷ್ಟೇ ಚರ್ಚೆ ಆಗಬೇಕು ಎಂದು ಜಗದೀಶ ಶೆಟ್ಟರ್ ಸಮರ್ಥಿಸಿಕೊಂಡರು.

ಬಿಜೆಪಿ ಸರ್ಕಾರದಲ್ಲಿ ಗೋಹತ್ಯೆ ನಿಷೇಧ, ಮತಾಂತರ ಕಾಯ್ದೆಗಳನ್ನು ಜಾರಿಗೆ ತಂದಿದ್ದೇವು. ಈ ಸರ್ಕಾರ ಬಂದ ಬಳಿಕ ಸಚಿವ ಪ್ರಿಯಾಂಕಾ ಗಾಂಧಿ ಅವರು ಈ ಎರಡೂ ಕಾನೂನು ವಾಪಸ್ಸು ತೆಗೆದುಕೊಳ್ಳುತ್ತೇವೆ ಎಂದಿದ್ದರು. ಇದಕ್ಕೆ ನಿಮ್ಮ ಸ್ಪಷ್ಟಿಕರಣ ಕೊಡುವಂತೆ ಇದೇ ವೇಳೆ ಜಗದೀಶ ಶೆಟ್ಟರ್ ಆಗ್ರಹಿಸಿದರು.

ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ವಿಧಾನ ಮಾಜಿ ಶಾಸಕ ಸಂಜಯ ಪಾಟೀಲ, ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ್ ಸೇರಿ ಮತ್ತಿತರರು ಇದ್ದರು..