ಹಳೇ ವಂಟಮೂರಿಯಲ್ಲಿ ಮತ ಚಲಾಯಿಸಿದ ಸಚಿವ ಸತೀಶ್ ಜಾರಕಿಹೊಳಿ..
ಬೆಳಗಾವಿಯಲ್ಲಿ 71,11%, ಚಿಕ್ಕೋಡಿಯಲ್ಲಿ 78,41% ಮತದಾನ..
ಬೆಳಗಾವಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆದಿದ್ದು, ಎರಡೂ ಕ್ಷೇತ್ರದಲ್ಲಿ ಉತ್ತಮ ಮತದಾನಕ್ಕೆ ಹರ್ಷ ವ್ಯಕ್ತಪಡಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ತಾವು ಹಾಗೂ ತಮ್ಮ ಪುತ್ರ ರಾಹುಲ್ ಜಾರಕಿಹೊಳಿ ಅವರು ಇಂದು ಮುಂಜಾನೆಯೇ ಮತಚಲಾಯಿಸಿ, ಮತಗಟ್ಟೆಯಿಂದ ಹೊರ ಬಂದ ಅವರು ಮತ ಹಾಕಿರುವ ಕುರುಹಾಗಿ ತಮ್ಮ ಬೆರಳಿಗೆ ಹಾಕಲಾಗಿರುವ ಶಾಹಿಯ ಗುರುತನ್ನು ತೋರಿಸಿ ಸಂತಸ ಪಟ್ಟರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಹಳೇ ವಂಟಮೂರಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 95 ರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕುನ್ನು ಚಲಾಯಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಉತ್ತಮ ಅಲೆಯಿದೆ. ಕ್ಷೇತ್ರದಲ್ಲಿ ಜಯ ದಾಖಲಿಸುವ ಮೂಲಕ ಕಾಂಗ್ರೆಸ್ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದರು.
ನಮ್ಮ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ: ಕಾಂಗ್ರೆಸ್ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯುರಿವೆ. ಆದ್ದರಿಂದ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಜಯಬೇರಿ ಭಾರಿಸುವುದರಲ್ಲಿ ಸಂಶಯವಿಲ್ಲ. ಮುಖ್ಯವಾಗಿ ಚಿಕ್ಕೋಡಿಯಲ್ಲಂತೂ ಮೋದಿ ಅಲೆ ಇಲ್ಲವೇ ಇಲ್ಲ. ಇಲ್ಲೆ ಏನೆ ಇದ್ದರೂ ಅಭ್ಯರ್ಥಿ ಪರ ಸಾಮರ್ಥ, ಅವರ ಕೆಲಸ ಹಾಗೂ ಪ್ಲಸ್ – ಮೈನಸ್ ಕ್ಯಾಲ್ಕೂಲೇಷನ್ ಆಗುತ್ತೆ ಹೊರತು ಇಲ್ಲಿ ಯಾವುದೇ ಮೋದಿ ಗಾಳಿ ಇಲ್ಲ ಎಂದರು.
ಇನ್ನು ಪ್ರಜ್ವಲ್ಲ್ ರೇವಣ್ಣ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜ್ವಲ್ಲ್ ರೇವಣ್ಣ ಪ್ರಕರಣ ಕೋರ್ಟ್ ನಲ್ಲಿದೆ. ಈಗಾಗಲೇ ಎಸ್ಐಟಿ ರಚಿಸಲಾಗಿದೆ. ಈ ಕೇಸ್ ಸಂಬಂಧಿಸಿದಂತೆ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ ಈಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹಸ್ತಕ್ಷೇಪ ಇಲ್ಲ. ಆರೋಪಿಸಿದರೆ ಸಾಲದು ಆರೋಪ ಸಾಬೀತಾಗಬೇಕೆಂದು ಪ್ರತಿಕ್ರಿಯಿಸಿದರು.
ವರದಿ ಪ್ರಕಾಶ್ ಕುರಗುಂದ..