ಬರ ಇರಲಿ, ನೆರೆ ಇರಲಿ, ನಮ್ಮ ಜನರ ಬಂಗಾರ ಖರೀದಿಯಲ್ಲಿ ಕೊರತೆ ಇಲ್ಲಾ…

ಬರ ಇರಲಿ, ನೆರೆ ಇರಲಿ, ನಮ್ಮ ಜನರ ಬಂಗಾರ ಖರೀದಿಯಲ್ಲಿ ಕೊರತೆ ಇಲ್ಲಾ…

ಯಾರೇಳಿದ್ದು ನಮ್ಮದು ಅಭಿವೃದ್ದಿ ಹೊಂದುತ್ತಿರುವ ದೇಶ ಎಂದು ???

ಕೆಲವೊಂದು ಕುಟುಂಬದ ಆಭರಣ, ಆಸ್ತಿ ಲೆಕ್ಕ ಹಾಕಿದರೆ, ಜಗತ್ತಲ್ಲೇ ಶ್ರೀಮಂತ ದೇಶ ನಮ್ಮದು..

ಈ ಸಂಪತ್ತಿನ ಕ್ರೂಡೀಕರಣಕ್ಕೆ ಅಂಕುಶ ಬಿದ್ದಾಗಲೇ ಭಾರತ ಬೆಳಗುವುದು..

ಬೆಳಗಾವಿ : ನಮ್ಮ ದೇಶ ಮತ್ತು ನಾಡಿನಲ್ಲಿ ಎಲ್ಲಾ ಸ್ತರದ ಜನಗಳು ನೆಲಸಿ ತಮ್ಮ ಜೀವನ ವೈವಿಧ್ಯಮಯ ರೀತಿಯಲ್ಲಿ ಸಾಗಿಸುತ್ತಿದ್ದಾರೆ, ಅದರಲ್ಲಿ ಹೆಚ್ಚಾಗಿ ಮಧ್ಯಮ ಹಾಗೂ ಬಡ ಕುಟುಂಬದ ಜನರೇ ಹೆಚ್ಚಾಗಿ ಬದುಕುತ್ತಿದ್ದಾರೆ, ಬಹುತೇಕ ಕುಟುಂಬಗಳಿಗೆ ಇನ್ನು ಮೂಲ ಸೌಲಭ್ಯಗಳೇ ಇರುವದಿಲ್ಲ,

ಒಬ್ಬ ಭಾರತೀಯ ಉದ್ಯಮಿಯ ಮಗನಿಗೆ ಮದುವೆಯ ಕಾಣಿಕೆಯಾಗಿ 300ಕೋಟಿ ರೂಪಾಯಿಯ ವಿಮಾನ, 180 ಕೋಟಿ ಬೆಲೆಯ ಐಷಾರಾಮಿ ಹಡಗು, 150ಕೋಟಿಯ ಹೆಲಿಕ್ಯಾಪ್ಟರ್, 100 ಹಾಗೂ 80 ಕೋಟಿಗಳ ವಿದೇಶಿ ಬಂಗಲೆಗಳು ಕಾಣಿಕೆಯಾಗಿ ಬಂದಿವೆಯೆಂಬ ಊಹೆಗಳು ಒಂದು ಕಡೆ ಇದ್ದು, ಅಂತಹ ಕೆಲ ಭಾರತೀಯರು ನಮ್ಮಲ್ಲಿದ್ದು, ಮತ್ತೊಂದು ಕಡೆ ಒಂದು ಹೊತ್ತಿನ ಅನ್ನಕ್ಕೂ ಪರದಾಡುವ, ಮನೆ ಮಠ ಇಲ್ಲದೇ ಬೀದಿಯಲ್ಲಿ ವಾಸವಿರುವ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯದಿಂದ ವಂಚಿತರಾಗಿ ಬದುವಕ ಹಲವು ಭಾರತೀಯರು ಮತ್ತೊಂದೆಡೆ ಇದ್ದದ್ದು ನಮ್ಮ ಭವ್ಯಭಾರತದ ವಸ್ತುಸ್ಥಿತಿಯಾಗಿದೆ..

ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ನಿನ್ನೆ ಅಕ್ಷಯ ತೃತೀಯಾ ಹಬ್ಬವಿದ್ದು, ಬೆಳಗಾವಿ ಯಾವುದೇ ಪ್ರತಿಷ್ಠಿತ ಬಂಗಾರದ ಅಂಗಡಿಗಳಲ್ಲಿ ನೋಡಿದರೂ ಜನಸಾಗರವೇ ತುಂಬಿತ್ತು, ರಾಜ್ಯಕ್ಕೆ ಮಳೆ ಬಾರದೇ ಬರಗಾಲ ಬಂದಿದೆ, ಬೆಲೆಗಳು ಹೆಚ್ಚಾಗಿ ಜೀವನ ದುಬಾರಿಯಾಗಿದೆ, ಸರಿಯಾದ ಉದ್ಯೋಗ, ಆದಾಯ ಇಲ್ಲ, ರೈತರು ನೂರಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ದಿನಾ ಕೇಳುತ್ತೇವೆ ಬರೆಯುತ್ತೇವೆ. ಆದರೆ ಬೆಲೆ ಎಷ್ಟೇ ಹೆಚ್ಚಿದ್ದರೂ ಇಷ್ಟೊಂದು ಬಂಗಾರ ಖರೀದಿಯ ಹುಚ್ಚು ಇರುವ, ಶಕ್ತಿಶಾಲಿ, ಜಾಣ ಶ್ರೀಮಂತ ಜನಗಳು ನಮ್ಮಲ್ಲಿ ತುಂಬಾ ಇದ್ದಾರೆ ಎಂದು ನಿನ್ನೆಯಷ್ಟೇ ತಿಳಿಯಿತು…

ಬೆಳಗಾವಿಯ ಕಲ್ಯಾಣ, ಜೋಸ್ ಅಲೂಕಾ, ಭೀಮಾ, ಮಲಬಾರ್, ಪೋತದಾರ, ತನಿಷ್ಕ್, ಶ್ರೀ ಲಕ್ಷ್ಮಿ ಗೋಲ್ಡ್ , ಇನ್ನು ಹಲವಾರು ಪ್ರತಿಷ್ಠಿತ ಬಂಗಾರದ ಮಳಿಗೆಗಳಲ್ಲಿ ಹಾಗೂ ಚಿಕ್ಕಪುಟ್ಟ ಅಂಗಡಿಗಳಲ್ಲಿ ಜನರು ಬಂಗಾರ ಖರೀದಿಗೆ ಮುಗಿಬಿದ್ದದು ನೋಡಿದರೆ, ನಮ್ಮ ನಾಡಿನ ಸಂಪತ್ತಿಗೇನು ಕಮ್ಮಿಯಿಲ್ಲ, ಇಲ್ಲಿ ಹಲವು ಮಹನೀಯರು ತಮಗೆ ಬೇಕಾದಕ್ಕಿಂತ ಹೆಚ್ಚೇ ಮಾಡಿಕೊಂಡಿದ್ದಾರೆ, ನಮ್ಮದು ಹೊರನೋಟಕ್ಕೆ ಕಾಣದ ಶ್ರೀಮಂತ ನಾಡು, ಸಂಪತ್ತಿನ ದೇಶ ಎಂಬ ತೆರೆಮರೆಯ ಸತ್ಯ ಗೋಚರಿಸುತ್ತದೆ..

ಆದರೆ ಸಂಪತ್ತು ಕೆಲವರಲ್ಲಿ ಮಾತ್ರ ಕ್ರೂಡೀಕರಣ ಆಗುವ ವ್ಯವಸ್ಥೆಯಿಂದ ದೇಶ, ನಾಡು ಯಾವತ್ತೂ ಪ್ರಗತಿ ಹೊಂದುವುದಿಲ್ಲ, ಅಧಿಕಾರ, ಪ್ರಭಾವ, ಪಿತ್ರಾರ್ಜಿತ ವ್ಯವಹಾರ ಹೊಂದಿರುವ ಕೆಲ ದೇಶವಾಸಿಗಳು ಉಳಿದ ಭಾರತೀಯರನ್ನು ಪರೋಕ್ಷವಾಗಿ ತುಳಿದು ಸಂಪತ್ತು ಮಾಡುವದನ್ನು ಬಿಟ್ಟು, ತಾವೂ ಬೆಳೆದು, ಉಳಿದ ದೇಶದ ಜನರನ್ನು ಬೆಳೆಸುವ ಕೆಲಸ ಮಾಡಿದಾಗ ನಮ್ಮ ದೇಶ ನಿಜ ಅರ್ಥದಲ್ಲಿ ಅಭಿವೃದ್ದಿ ಆಗುತ್ತದೆ, ದೇಶದ ಎಲ್ಲಾ ಜನರ ಬೆಳವಣಿಗೆಯೇ ದೇಶದ ನಿಜವಾದ ಪ್ರಗತಿ..

ಇಲ್ಲವಾದರೆ, ಯಾವುದೇ ಮೂಲಭೂತ ಸೌಲಭ್ಯವಿಲ್ಲದ, ನೆಮ್ಮದಿಯ ಜೀವನವಿಲ್ಲದ, ತಮ್ಮ ಅವಶ್ಯತೆಯ ಪೂರೈಕೆಯಲ್ಲಿ ಕೊರತೆ ಕಂಡುಬಂದ ಹಲವಾರು ಜನರು ತಮ್ಮ ಬದುಕಿಗಾಗಿ, ಅವಶ್ಯಕತೆಗಾಗಿ ಕೆಟ್ಟ ಮಾರ್ಗವನ್ನು ತುಳಿಯಬಹುದು, ಆಗ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕೆಡಬಹುದು, ಆ ರೀತಿಯ ಪರಿಸ್ಥಿತಿ ಬಾರದೇ ಎಲ್ಲಾ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ, ಅದೇ ರೀತಿ ಅಕ್ಷಯ ತೃತೀಯ ಹಬ್ಬಕ್ಕೆ ಚಿನ್ನ ಖರಿದಿಸಿದ ಎಲ್ಲ ಜಾಣ ಅನುಕೂಲಸ್ಥರಿಗೆ ಅಭಿನಂದನೆ ಸಲ್ಲಿಸುತ್ತಾ,

ಶ್ರೀಮಂತರು ಹಾಗೂ ಸರ್ಕಾರಗಳು ಉಳಿದ ಬಡಜನರ ಜೀವನ ಮಟ್ಟ ಸುಧಾರಣೆಯತ್ತ ಕೂಡಾ ಸ್ವಲ್ಪ ಗಮನ ಹರಿಸಬೇಕು, ಯಾಕೆಂದರೆ “ಬದುಕು, ಬದುಕಲು ಬಿಡು” ಎಂಬ ಸಂಸ್ಕೃತಿಯಲ್ಲಿ ನಾವೆಲ್ಲ ಬದುಕುತ್ತಿದ್ದೇವೆ…

ವರದಿ ಪ್ರಕಾಶ ಬಸಪ್ಪ ಕುರಗುಂದ..