ಸ್ವ ಕ್ಷೇತ್ರದಲ್ಲೆ ಹೆಬ್ಬಾಳ್ಕರಗೆ ಕೈ ಕೊಟ್ಟು, ಜೊಲ್ಲೆ ಕಿವಿಗೆ ಹೂ ಇಟ್ಟ ಮತದಾರರು…

ಸ್ವ ಕ್ಷೇತ್ರದಲ್ಲೆ ಹೆಬ್ಬಾಳ್ಕರಗೆ ಕೈ ಕೊಟ್ಟು, ಜೊಲ್ಲೆ ಕಿವಿಗೆ ಹೂ ಇಟ್ಟ ಮತದಾರರು..

ಬೆಳಗಾವಿ: ಮಂಗಳವಾರ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳಾದ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಸೋತ ಇಬ್ಬರೂ ಅಭ್ಯರ್ಥಿಗಳನ್ನು ಸ್ವ ಕ್ಷೇತ್ರದ ಮತದಾರರೇ ತಿರಸ್ಕರಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮೃಣಾಲ ಹೆಬ್ಬಾಳಕರ ತನ್ನ ತಾಯಿ ಪ್ರತಿನಿಧಿಸುತ್ತಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೇ ಅತೀ ಕಡಿಮೆ ಮತಗಳನ್ನು ಪಡೆದಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ದಾಖಲೆಯ….. ಮತಗಳನ್ನು ಪಡೆದುಕೊಂಡು ತಮ್ಮ ಎದುರಾಳಿ ನಾಗೇಶ್ ಮುನ್ನೋಳಕರ ಅವರನ್ನು ಹೀನಾಯವಾಗಿ ಸೋಲಿಸಿದ್ದರು. ಬಳಿಕ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅವರು ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಸಚಿವೆ ಕೂಡ ಆಗಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ಹಿಡಿತ ಸಾಧಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹಾಲಿ ಮಂತ್ರಿಯೂ ಆಗಿರುವುದರಿಂದ ತನ್ನ ಮಗನಿಗೆ‌ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೇಟ್ ನೀಡಬೇಕೆಂದು ಪಟ್ಟು ಹಿಡಿದು ಯಶಸ್ವಿಯೂ ಆದರು. ದುರಾದೃಷ್ಟವಶಾತ್ ಲಕ್ಷ್ಮೀ ಹೆಬ್ಬಾಳಕರ ತಾನು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿಯೇ ಬಿಜೆಪಿ 47017 ಲೀಡ್ ಕಾಯ್ದುಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆಲುವಿನತ್ತ ಸಾಗಿದರು.

👉ಲಕ್ಷ್ಮೀಗೆ ಕೈ ಕೊಟ್ಟ ಗೃಹ ಲಕ್ಷ್ಮೀಯರು..

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯಿಂದ ಲಕ್ಷ್ಮೀ ಹೆಬ್ಬಾಳಕರ ಮಹಿಳೆಯರ ಪಾಲಿನ ಅದೃಷ್ಟ ಲಕ್ಷ್ಮೀ ಆಗಿದ್ದರು. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೇ ತಮ್ಮ ಖಾತೆಗೆ ಪ್ರತಿ ತಿಂಗಳು ರೂ.2000 ಜಮೆ ಮಾಡುತಿದ್ದಾರೆ ಎಂಬ ಮಾತು ಚಾಲ್ತಿಯಲ್ಲಿತ್ತು. ಇದು ಲೋಕಸಭಾ ಚುನಾವಣೆಯಲ್ಲಿ ತನಗೆ ವರವಾಗುವುದೆಂಬ ಆಶಾ ಲೋಕದಲ್ಲಿ ಹೆಬ್ಬಾಳಕರ ತೇಲಾಡಿದ್ದರು. ಚುನಾವಣೆ ಯಲ್ಲಿ ಮಹಿಳಾ ಮತದಾರರು ಕೂಡ ಹೆಬ್ಬಾಳಕರ ಅವರಿಗೆ ಕೈ ಕೊಟ್ಟರು. ಜಗದೀಶ್ ಶೆಟ್ಟರ್ ಅವರು 1.77 ಲಕ್ಷಗಳ ಭಾರಿ ಅಂತರದಿಂದ ಮೃಣಾಲ್‌ ಹೆಬ್ಬಾಳಕರ ಅವರನ್ನು ಸೋಲಿಸಿ ಮಕಾಡೆ ಮಲಗಿಸಿದರು.

👉ಜೊಲ್ಲೆ ಕಿವಿಗೆ ಹೂ ಇಟ್ಟ ಸ್ವ ಕ್ಷೇತ್ರದ ಮತದಾರರು..

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಎರಡನೆ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಹಾಲಿ ಸಂಸದ ಅಣ್ಣಾಸಾಹೆಬ ಜೊಲ್ಲೆಗೂ ಕೂಡ ಸ್ವ ಕ್ಷೇತ್ರದ ಮತದಾರರು ಕೈ ಕೊಟ್ಟು, ಕಿವಿಗೆ ಹೂ ಇಟ್ಟಿದ್ದಾರೆ. ಇದರಿಂದ ತನ್ನ ಹೆಂಡತಿ ಪ್ರತಿನಿಧಿಸುತ್ತಿದ್ದ ನಿಪ್ಪಾಣಿ ವಿಧಾನಸಭೆ ಮತದಾರರು ಭಾರಿ ಏಟು ಕೊಟ್ಟಿದ್ದಾರೆ. ಹಾಲಿ ಸಂಸದರು ಹಾಗೂ ಲಿಂಗಾಯಿತ ಎಂಬ ಜಾತಿ ಲೆಕ್ಕಾಚಾರದಲ್ಲಿ ತಾನು ಎರಡನೇ ಬಾರಿ ಗೆಲ್ಲುವುದು ಖಚಿತ ಎಂದು ಕೊಂಡಿದ್ದ ಸಂಸದ ಜೊಲ್ಲೆ ಅವರಿಗೆ ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು 106050 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಸಂಸದ ಅಣ್ಣಾಸಾಹೇಬ ಜೊಲ್ಲೆಗಿಂತ 30 ಸಾವಿರ ಮತಗಳ ಲೀಡ್ ಕಾಯ್ದುಕೊಂಡು ಜೊಲ್ಲೆಗೆ ಭಾರೀ ಆಘಾತ ನೀಡಿದರು.

👉ಮರುಕಳಿಸಿತು ಸಚಿವ ಜಾರಕಿಹೊಳಿ ಮಾತು..

ಕಳೆದ ಎರಡು ವರ್ಷಗಳ ಹಿಂದೆ‌ ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಅಪಾರ ಪ್ರಮಾಣದಲ್ಲಿ ನೆರೆದ ಜನಸ್ತೋಮ ನೋಡಿ ” ಎ ಸಿರ್ಪ್ ಟ್ರೆಲರ್ ಹೈ, ಪಿಕ್ಚರ್ ಅಬಿ ಬಾಕಿ ಹೈ” ಎನ್ನುವ ಬಾಲಿವುಡ್ ಡೈಲಾಗ್ ಹಾಗೆ ಜೊಲ್ಲೆ ಕುಟುಂಬ ಸೋಲಿಸುವ ಸುಳಿವು ನೀಡಿದ್ದರು. ಈಗ ಮಗಳು ಪ್ರಿಯಂಕಾ ಒಂದು ಲಕ್ಷದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ನಿಪ್ಪಾಣಿ ಮತ ಕ್ಷೇತ್ರದಲ್ಲಿ ಅತೀ ಹೆಚ್ಚು ಮತ ಪಡೆದಿರುವುದರಿಂದ ಜಾರಕಿಹೊಳಿ ಅಭಿಮಾನಿಗಳ ಬಾಯಲ್ಲಿ ಈಗ ಇದೇ ಡೈಲಾಗ್ ಹರಿದಾಡುತ್ತಿದೆ.

ಒಟ್ಟಿನಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಎರಡೂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಸ್ವ ಕ್ಷೇತ್ರದ ಮತದಾರರು ಕೈ ಕೊಟ್ಟು, ಕಿವಿಗೆ ಹೂ ಇಟ್ಟಿದ್ದಾರೆ.

ಸಂತೋಷ ಮೇತ್ರಿ, ಅಗಸಗೆ..