ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಿಲ್ ವಿಳಂಬದ ಮಾಹಿತಿ ಪಡೆಯುವೆ…

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಿಲ್ ವಿಳಂಬದ ಮಾಹಿತಿ ಪಡೆಯುವೆ..

ಮೇವು ಖರೀದಿಯಲ್ಲಿ ಅಕ್ರಮ ನಡೆದಿದ್ದರೆ ಕ್ರಮ ಖಚಿತ:

ಸಚಿವ ಸತೀಶ್‌ ಜಾರಕಿಹೊಳಿ..

ಬೆಳಗಾವಿ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಕಳೆದ ಆರು ತಿಂಗಳಿನಿಂದ ಸರಿಯಾಗಿ ಬಿಲ್ ಆಗದಿರುವ ಬಗ್ಗೆ ಮಾಹಿತಿ ಪಡೆಯುತ್ತೇವೆ, ಪಶು ಸಂಗೋಪನೆ ಇಲಾಖೆಯಲ್ಲಿ ಮೇವು ಖರೀದಿಯಲ್ಲಿ ಅಕ್ರಮ ನಡೆದಿದ್ದರೆ, ಈ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ಅವರಿಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸೂಚಿಸುತ್ತೇನೆಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಬುಧವಾರ ಮಹಾನಗರ ಪಾಲಿಕೆ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಸರಿಯಾಗಿ ಆಹಾರ ಬಿಲ್ ಆಗದೆ ಇರುವುದು ಮತ್ತು ಪಶು ಸಂಗೋಪನೆ ಇಲಾಖೆಯಲ್ಲಿ ಮೇವು ಖರೀದಿಗೆ ಮಂಜೂರಾದ 6 ಕೋಟಿ ರೂಪಾಯಿ ಅನುದಾನಲ್ಲಿ ಅಕ್ರಮ ನಡೆದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾಹಿತಿ ಪಡೆದು ಸಮಸ್ಯ ಇದ್ದಲ್ಲಿ ಸರಿಪಡಿಸುತ್ತೇವೆ ಎಂದಿದ್ದಾರೆ..

24×7 ಗಂಟೆ ನೀರು ಸರಬರಾಜು ನಿರ್ವಹಣೆ ಕಾಮಗಾರಿ ನಡೆಸುತ್ತಿರುವ ಎಲ್‌ ಆ್ಯಂಡ್‌ ಟಿ ಕಂಪನಿಯಿಂದ ಜನರಿಗೆ ತೊಂದರೆಯಾಗುತ್ತಿರುವುದು ನಿಜ. ಎಲ್‌ ಆ್ಯಂಡ್‌ ಟಿ ಕಂಪನಿಯವರಿಗೆ ಸಾಕಷ್ಟು ಬಾರಿ ಹೇಳಿದ್ದೇವೆ. ನೀರಿನ ಪೈಪ್‌ಲೈನ್‌ ಗಳನ್ನ ಅಳವಡಿಸಲು ಅಗೆದ ರಸ್ತೆಗಳನ್ನು ಅವರೇ ಸರಿಪಡಿಸುತ್ತಾರೆ ಎಂದರು.

ಅಭಿವೃದ್ಧಿ ಕಡೆಗಣನೆಗೆ ಸರ್ಕಾರ, ಮಂತ್ರಿಗಳು, ಶಾಸಕರಷ್ಟೇ ಹೊಣೆ ಆಗಲ್ಲ: ಯಾವುದೇ ಅಭಿವೃದ್ಧಿ ಕಾಮಗಾರಿಗಳಿರಲಿ, ಕಾಮಗಾರಿಗಳು ವಿಳಂಬವಾದರೆ ಸರ್ಕಾರ, ಮಂತ್ರಿಗಳು, ಶಾಸಕರನಷ್ಟೇ ಹೊಣೆ ಮಾಡುಲು ಆಗಲ್ಲ. ಅಧಿಕಾರಿಗಳು ಪಾತ್ರ ಪ್ರಮುಖವಾಗಿದೆ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದೆಂದು ತಿಳಿಸಿದರು.

ಸವದತ್ತಿ ಯಲ್ಲಮ್ಮನ ದೇವಸ್ಥಾನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್‌ ನಲ್ಲಿಯೇ 120 ಕೋಟಿ ರೂ. ವಿಶೇಷ ಅನುದಾನ ಮೀಸಲಿಟ್ಟಿದೆ. ಅನುದಾನ ಮಂಜೂರಾದ ಬಳಿಕ ಕಾಮಗಾರಿಗಳನ್ನು ಆರಂಭಿಸಲಾಗುವುದು, ಮುಂದಿನ ದಿನಗಳಲ್ಲಿ ಸವದತ್ತಿ ಯಲ್ಲಮ್ಮನ ದೇವಸ್ಥಾನ ಮಾದರಿ ಕ್ಷೇತ್ರವಾಗಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಪ್ಲೈ ಓವರ್ ನಿರ್ಮಾಣ ನೀಲನಕ್ಷೆ ಕಳುಹಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ದೆಹಲಿಗೆ ಹೋಗಿ ಪೈನಲ್‌ ಮಾಡಲಾಗುವುದು ಎಂದು ತಿಳಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಸಾಂಗ್ಲಿಯಲ್ಲಿ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ ಮಾಡುತ್ತಿರುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಯಲ್ಲಿ ಕನ್ನಡ ಶಿಕ್ಷಕರು ಸಿಗುತ್ತಿಲ್ಲ. ಏಕೆಂದರೆ ಕನ್ನಡ ಶಿಕ್ಷಕರನ್ನು ಉತ್ಪತ್ತಿ ಮಾಡುವುದನ್ನು ಕಳೆದ ಇಪ್ಪತ್ತು ವರ್ಷಗಳ ಹಿಂದೆಯೇ ನಿಲ್ಲಿಸಿದ್ದಾರೆ. ಅದೇ ಕಾರಣಕ್ಕಾಗಿ ಕನ್ನಡ ಶಾಲೆ ಮಕ್ಕಳು ಮರಾಠಿ ಕಲಿಯುವುದು ಅನಿವಾರ್ಯವಾಗಿದೆ. ಈ ಕುರಿತು ಸಿಎಂ ಅವರ ಗಮನಕ್ಕೆ ತರುತ್ತೇನೆಂದರು.

ಪೆಟ್ರೋಲ್ , ಡಿಸೇಲ್‌ ಬೆಲೆ ಏರಿಕೆ ಮಾಡಿದ್ದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿಯೇ ಬೆಲೆ ಕಡಿಮೆ ಇದೆ. ಸಿಲಿಂಡರ್ ಬೆಲೆ ಏರಿಕೆ ಮಾಡಿದಾಗ ಬಿಜೆಪಿಯವರು ಏಕೆ ಪ್ರಶ್ನೆ‌ ಮಾಡಲಿಲ್ಲ? ಎಂದು ಮಾಜಿ ಶಾಸಕ ಅನಿಲ್‌ ಬೆನಕೆ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಅನಿಲ್ ಬೆನಕೆಗೆ ಜನ ಕೆಲಸ ಮಾಡಲು ಐದು ವರ್ಷ ಸಮಯ ನೀಡಿದ್ದರು, ಆದರೆ ಅಧಿಕಾರದಲ್ಲಿ ಇದ್ದಾಗ ಒಮ್ಮೆಯೂ ಮನೆ ಬಿಟ್ಟು ಹೊರಗಡೆ ಬಂದಿಲ್ಲ. ರಾಜ್ಯವನ್ನು ಕಸಾಯಿ ಖಾನೆ ಮಾಡಿದ್ದೆ ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಆಸೀಪ್‌(ರಾಜು) ಸೇಠ್‌, ವಿಶ್ವಾಸ ವೈದ್ಯ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಸೇರಿದಂತೆ ಹಲವರು ಇದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ…