ಪಾಳು ಬಿದ್ದ ಸಂತಿಬಸ್ತವಾಡ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕಟ್ಟಡ..
ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೇ ಗ್ರಾಮಸ್ಥರ ಪರದಾಟ..
ಮೂಲಭೂತ ಸೌಲಭ್ಯ ನೀಡದ ಜನಪ್ರತಿನಿಧಿಗಳ, ಅಧಿಕಾರಿಗಳ ಮೇಲೆ ಗ್ರಾಮಸ್ಥರ ಮುನಿಸು..
ಬೆಳಗಾವಿ : ತಾಲೂಕಿನ ಸಂತಿಬಸ್ತವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಕಟ್ಟಡವು ಪೂರ್ತಿ ಬಿಳುವ ಸ್ಥಿತಿಯಲ್ಲಿ ಇದ್ದು, ಕಿಟಕಿ ಬಾಗಿಲುಗಳು ಗೆದ್ದಲು ಹೂಳಗಳು ಹತ್ತಿ ಮುರಿದು ಹೋಗಿರುತ್ತವೆ.
ಮೇಲ್ಚಾವಣಿಯು ಸೋರುತ್ತಿದ್ದು, ಶೌಚಾಲಯವು ಹಾಳಾಗಿ ಹೋಗಿದೆ. ಮಳೆಗಾಲದಲ್ಲಿ ಈ ಕಟ್ಟಡವು ಕುಸಿದು ಬಿಳಬಹುದು ಎಂದು ಈ ಕಟ್ಟಡವನ್ನು ಖಾಲಿ ಮಾಡಿ ಗ್ರಾಮದ ಹೊರಗಡೆ ಲಭ್ಯವಿರುವ ಒಂದು ಬಾಡಿಗೆ ಮನೆಯಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಕಛೇರಿಯನ್ನು ಪ್ರಾರಂಭಿಸಿದ್ದಾರೆ, ಆರೋಗ್ಯ ಕಾರ್ಯಕರ್ತೆಯರು ಬೆಳಿಗ್ಗೆ ಬಂದು ಸಾಯಂಕಾಲ ಹೋಗುತ್ತಿದ್ದಾರೆ, ಮೊದಲಿನ ಹಾಗೆ ಗ್ರಾಮದಲ್ಲಿಯೆ ವಾಸ್ತವ್ಯ ಇರುವುದಿಲ್ಲ.

ಗ್ರಾಮದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿವೆ, ಆಶಾ ಕಾರ್ಯಕರ್ತೆಯರು, ಪುರುಷ ಆರೋಗ್ಯ ಕಾರ್ಯ ಕರ್ತರು ಸಭೆಗಳನ್ನು ಮಾಡಲು ಸ್ಥಳ ಇಲ್ಲದಾಗಿದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆರೋಗ್ಯ ತಪಾಸಣೆ ಮಾಡಿಸಲು ಬಹಳ ತೊಂದರೆ ಆಗುತ್ತಿದ್ದು, ಪೋಷಣ ಅಭಿಯಾನ ಕಾರ್ಯಕ್ರಮ ಮಾಡಲು ಆಗುತ್ತಿಲ್ಲ.
ಮೊದಲು ಗರ್ಭಿಣಿಯರ ಹೆರಿಗೆಯನ್ನು ಈ ಕೇಂದ್ರದಲ್ಲಿಯೇ ಮಾಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಇಲ್ಲಿ ಹೆರಿಗೆಗಳು ಆಗುತ್ತಿಲ್ಲ, ಕಾರಣ ಆರೋಗ್ಯ ಕಾರ್ಯ ಕರ್ತೆಯರು ಹೆರಿಗೆ ಮಾಡಿಸಲು ವ್ಯವಸ್ಥೆ ಇರುವುದಿಲ್ಲ, ರಾತ್ರಿ ಸಮಯದಲ್ಲಿ ಆರೋಗ್ಯ ಕಾರ್ಯ ಕರ್ತೆಯು ಇಲ್ಲಿ ಇರುವುದಿಲ್ಲ. ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದು ಮತ್ತು ತಪಾಸಣೆ ಮಾಡಲು ಆಗುತ್ತಿಲ್ಲ. ಈ ಕಟ್ಟಡದ ಕೊರತೆಯಿಂದ ಜನರಿಗೆ ಆರೋಗ್ಯ ಸೇವೆಯು ಸರಿಯಾಗಿ ಸಿಗುತ್ತಿಲ್ಲ.
ಸಂತಿಬಸ್ತವಾಡ ಗ್ರಾಮ ದತ್ತು ಪಡೆದಂತಹ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿಬ್ಬಂದಿ ಕೂಡಾ ಈ ಕಟ್ಟಡ ರಿಪೇರಿ ಮಾಡಿಕೊಡುವುದಾಗಿ ಹೇಳಿದ್ದರು. ಅದರ ಎಸ್ಟಿಮೇಟನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಅವರು ಒಂದು ವರ್ಷ ಕಳೆದರೂ ಇದರ ರಿಪೇರಿ ಮಾಡಿಸಿರುವುದಿಲ್ಲ. ಈ ಕಡೆಗೆ ಮುಖವನ್ನು ತೋರಿಸಿರುವುದಿಲ್ಲ. ಈ ಭಾಗದ ಶಾಸಕರು ಮತ್ತು ಸಚಿವರಾದ ಲಕ್ಷ್ಮೀ ಹೆಬ್ಹಾಳ್ಕರ ಅವರಿಗೆ ಮತ್ತು ಸಂಬಂಧಪಟ್ಟ ಸರಕಾರದ ಇಲಾಖೆಗಳಿಗೆ, ಸಚಿವರುಗಳಿಗೆ, ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ಗ್ರಾಮ ಪಂಚಾಯತ ವತಿಯಿಂದ ಅರ್ಜಿಯ ಮೂಲಕ ವಿನಂತಿಸಿಕೊಂಡರು ಸಹಿತ ಇದುವರೆಗೆ ಈ ಕಟ್ಟಡವು ರಿಪೇರಿ ಆಗಿಲ್ಲ. ಹೊಸ ಕಟ್ಟಡದ ಮಂಜೂರು ಕೂಡ ಆಗಿಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಕ್ಷೇತ್ರದಲ್ಲಿರುವ ಈ ಗ್ರಾಮದ ಮಹಿಳೆಯರು ಮತ್ತು ಮಕ್ಕಳ ಸ್ಥಿತಿ ಶೋಚನೀಯ ಆಗಿರುತ್ತದೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಸಂತಿಬಸ್ತವಾಡ ಗ್ರಾಮದ ಆರೋಗ್ಯ ಕೇಂದ್ರದ ಹೊಸ ಕಟ್ಟಡ ಕಟ್ಟಿಸಿಕೊಡಬೇಕೆಂದು ಗ್ರಾಮಸ್ಥರು ಈ ಮೂಲಕ ಆಗ್ರಹಿಸುತ್ತಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..