ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅದ್ದೂರಿ ಆಚರಣೆಗೆ ನಿರ್ಣಯ..

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅದ್ದೂರಿ ಆಚರಣೆಗೆ ನಿರ್ಣಯ..

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್..

ಅರ್ಥಪೂರ್ಣ ಆಚರಣೆಗೆ ಸಲಹೆ ಸೂಚನೆ ನೀಡಿದ ಸಮುದಾಯದ ಪ್ರಮುಖರು..

ಬೆಳಗಾವಿ : ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬರುವ ಅಕ್ಟೋಬರ್ ತಿಂಗಳಿನ, ದಿನಾಂಕ 17ರಂದು ನಡೆಯುವ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ತಿಳಿಸಿದ್ದಾರೆ.

ಗುರುವಾರ ದಿನಾಂಕ 26/09/2024 ರಂದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಇತರ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳ ಸಲಹೆ ಸೂಚನೆಗಳನ್ನು ಪಡೆದುಕೊಂಡು, ಅದರಂತೆಯೇ ಈ ಸಲದ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವ ಇಂಗೀತವನ್ನು ವ್ಯಕ್ತಪಡಿಸಿದರು..

ಮೊದಲಿಗೆ ಈ ಪೂರ್ವಭಾವಿ ಸಭೆಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಬಸವರಾಜ ಕುರಿಹುಲಿ ಅವರು, ಎಲ್ಲಾ ಅಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರನ್ನು, ವಿವಿಧ ಸಂಘಟಕರನ್ನು ಹಾಗೂ ಸಭೆಗೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು..

ನಂತರ ಜಯಂತಿಯ ಆಚರಣೆ ಕುರಿತು ತಮ್ಮ ಸಲಹೆ ಸೂಚನೆ ನೀಡುವಲ್ಲಿ ಮೊದಲಿಗೆ ಸಮುದಾಯದ ಮುಖಂಡರಾದ ರಾಜಶೇಖರ ತಳವಾರ ಅವರು ವಾಲ್ಮೀಕಿ ಜಯಂತಿ ನಡೆಯುವ ವೇದಿಕೆಗೆ (ಸಂಗೊಳ್ಳಿ ರಾಯಣ್ಣನ ಜೊತೆಯಾಗಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಆರು ಜನ ನಾಯಕ ಸಮುದಾಯದ ವೀರರ ಸ್ಮರಣೆಗಾಗಿ) “ಶೂರ ನಾಯಕ ಸೇನಾನಿಗಳ ವೇದಿಕೆ” ಎಂದು (ಆರು ಜನರ) ಹೆಸರು ಇಡಬೇಕು ಎಂದು ಮನವಿ ಮಾಡಿದ್ದು, ಈ ಮನವಿಗೆ ಸರ್ವರ ಒಪ್ಪಿಗೆ ಕೂಡಾ ದೊರಕಿತು..

ಆಹ್ವಾನ ಪತ್ರಿಕೆ ಮುದ್ರಿಸಿ, ವಿತರಣೆ ಮಾಡುವ ಕಾರ್ಯವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ನೀಡಲಾಗಿದ್ದು, ಉದ್ಘಾಟನೆ, ಮೆರವಣಿಗೆ, ಕಲಾತಂಡಗಳ ಬಗ್ಗೆ ಚರ್ಚೆ ಮೂಲಕ ನಿಗದಿ ಮಾಡಿದ್ದು, ಕಲಾತಂಡಗಳು ಕಡಿಮೆ ಇರುವ ಬಗ್ಗೆ ಆಕ್ಷೇಪಣೆ ಮಾಡಿದ ಸಮುದಾಯದ ಮುಖಂಡರಾದ ಬಾವುಕಣ್ಣ ಅವರು ಕಲಾತಂಡಗಳು ಹಾಗೂ ಕುಂಬಮೇಳಗಳು ಹೆಚ್ಚಿಗೆ ಆಗಬೇಕು ಎಂಬ ಮನವಿ ಮಾಡಿದರು..

ಈ ಚರ್ಚೆ ಸ್ವಲ್ಪ ವಿಪರೀತವಾದಾಗ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಐದು ಕಲಾತಂಡಗಳನ್ನು ವ್ಯವಸ್ಥೆ ಮಾಡಲು ಸೂಚನೆ ನೀಡುತ್ತೇವೆ, ಸಾಧ್ಯವಾದರೆ ಇನ್ನೂ ಎರಡು ವ್ಯವಸ್ಥೆ ಮಾಡಿದರಾಯಿತು, ಇನ್ನೂ ಕುಂಭಮೇಳಗಳ ಸಂಖ್ಯೆಯನ್ನು 125 ಕ್ಕೆ ಹೆಚ್ಚಿಸುತ್ತೇವೆ, ಅವು ಚೆನ್ನಾಗಿ ಮೆರವಣಿಗೆಗೆ ಶೋಭೆ ತರುವಂತೆ ಇರಬೇಕು ಎಂದಾಗ ಅದಕ್ಕೆ ಸಭೆಯ ಸಮ್ಮತಿಯೂ ದೊರಕಿತು.

ಜಯಂತಿಯ ನಿಮಿತ್ತ ನಗರದ ರಸ್ತೆಗಳಲ್ಲಿ ಸಮುದಾಯದ ನಾಯಕರ ಕಟೌಟ್ ಹಾಗೂ ಬಂಟಿಂಗಗಳನ್ನು ಹಾಕುವಲ್ಲಿ ಪಾಲಿಕೆಯು ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳಬಾರದು ಎಂದು ಸಮುದಾಯದ ಮುಖಂಡರು ಮನವಿ ಮಾಡಿದಾಗ, ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ವಿಷಯ ವರ್ಗಾವಣೆ ಮಾಡಿದಾಗ ಆದಷ್ಟು ಉಚಿತವಾಗಿ ಮಾಡುವದಾಗಿ ಪಾಲಿಕೆಯ ಆಯುಕ್ತರು ಭರವಸೆ ನೀಡಿದರು..

ಹೊರಗಡೆಯಿಂದ ಬರುವ ವಾಹನಗಳು ಪ್ರವೇಶಕ್ಕೆ ಅನುಕೂಲ ಮಾಡಿ ಕೊಡಬೇಕು ಎಂಬ ಮನವಿಗೆ ಪೊಲೀಸ್ ಇಲಾಖೆಯು ಸಮ್ಮತಿ ದೊರಕಿದ್ದು, ಮುಖ್ಯ ಕಾರ್ಯಕ್ರಮದ ಕುಮಾರ ಗಂಧರ್ವ ವೇದಿಕೆಯಲ್ಲಿ ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಬಗ್ಗೆ ಸಲಹೆ ಸೂಚನೆ ಪಡೆದು ಅದರಂತೆ ನೆರೆವೇರಿಸುವದಾಗಿ ಅಧಿಕಾರಿ ವರ್ಗದ ಒಪ್ಪಿಗೆ ದೊರಕಿದೆ.

ಪ್ರತಿಭಾವಂತ ಎಸೆಸೆಲ್ಸಿ ಹಾಗೂ ಪಿಯುಸಿ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪುರಸ್ಕಾರ ಮಾಡಬೇಕು, ಜೊತೆಗೆ ಅದರ ಸಂಖ್ಯೆ ಕೂಡಾ ಹೆಚ್ಚಿಸಬೇಕು ಎಂದಾಗ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎರಡೂ ಸೇರಿಸಿ, ಎಸೆಸೆಲ್ಸಿ 20, ಪಿಯುಸಿ 20 ಸೇರಿ ಒಟ್ಟಿಗೆ 40 ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡುವದಾಗಿ ಸಭೆಯಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಓ, ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಅಪರ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಬೆಳಗಾವಿ ಉಪವಿಭಾಗಾಧಿಕಾರಿಗಳು, ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಪ್ರಮುಖರು, ಯುವಕರು, ಭಾಗಿಯಾಗಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..