ಪಾಲಿಕೆಯ ತೆರಿಗೆ ಕಟ್ಟುನಿಟ್ಟಿನಿಂದ ನೂರಕ್ಕೆ ನೂರರಷ್ಟು ಸಂಗ್ರಹ ಆಗಬೇಕು…

ಪಾಲಿಕೆಯ ತೆರಿಗೆ ಕಟ್ಟುನಿಟ್ಟಿನಿಂದ ನೂರಕ್ಕೆ ನೂರರಷ್ಟು ಸಂಗ್ರಹ ಆಗಬೇಕು..

ನೇತ್ರಾವತಿ ವಿನೋದ ಭಾಗವತ, ಅಧ್ಯಕ್ಷರು ತೆರಿಗೆ ಸ್ಥಾಯಿ ಸಮಿತಿ.

ಸರಿಯಾಗಿ ಕೆಲಸ ಮಾಡದ ಕಂದಾಯ ಸಿಬ್ಬಂದಿ ಮೇಲೆ ಕಠಿಣವಾದ ಶಿಸ್ತು ಕ್ರಮ..

ರೇಷ್ಮಾ ತಾಳಿಕೋಟೆ, ಉಪ ಆಯುಕ್ತರು ಕಂದಾಯ..

ಬೆಳಗಾವಿ : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೂರಕ್ಕೆ ನೂರರಷ್ಟು ತೆರಿಗೆ ಸಂಗ್ರಹ ಆಗಬೇಕು, ಗೃಹ, ವಾಣಿಜ್ಯ ಹಾಗೂ ಇತರೆ ಕಟ್ಟಡಗಳ, ಆಸ್ತಿಗಳ ತೆರಿಗೆಯನ್ನು ಕಟ್ಟುನಿಟ್ಟಿನಿಂದ ಸಂಗ್ರಹ ಮಾಡಬೇಕೆಂದು ಪಾಲಿಕೆಯ ತೆರಿಗೆ, ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನೇತ್ರಾವತಿ ವಿನೋದ ಭಾಗವತ ಹೇಳಿದ್ದಾರೆ..

ಶುಕ್ರವಾರ ದಿನಾಂಕ 18/10/2024 ರಂದು ಮಧ್ಯಾಹ್ನ 3 ಗಂಟೆಗೆ ಪಾಲಿಕೆಯ ಸ್ಥಾಯಿ ಸಮಿತಿ ಸಭಾ ಗೃಹದಲ್ಲಿ ನಡೆದ ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಿಕೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಂದಾಯ ವಿಭಾಗ ಕಾರ್ಯ ಪ್ರವರ್ತರಾಗಬೇಕು ಎಂಬ ಸೂಚನೆ ನೀಡಿದ್ದಾರೆ..

ಮೊದಲಿಗೆ ಪಾಲಿಕೆಯ ವಿವಿಧ ಕಂದಾಯ ವಿಭಾಗಗಳಲ್ಲಿ ಮೂಲಸೌಕರ್ಯಗಳ ಪೂರೈಕೆ ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಸಿದ ಸಮಿತಿಯ ಸದಸ್ಯರು, ಅಶೋಕ್ ನಗರ, ಗೋವಾವೆಸ್, ರಿಷಿಲ್ದಾರ್ ಗಲ್ಲಿ, ಕೊಣವಾಳ ಗಲ್ಲಿಗಳಲ್ಲಿ ಸಿಸಿ ಕ್ಯಾಮೆರಾ ಕೂರಿಸಬೇಕು, ಎಲ್ಲಾ ಕಚೇರಿಗಳಲ್ಲಿ ಇನ್ವೆಟರ್ ಕೂರಿಸಬೇಕು ಎಂಬ ಮಾತಿಗೆ, ಆಡಳಿತ ಉಪ ಆಯುಕ್ತರು ಉತ್ತರಿಸಿ ಆದಷ್ಟು ಬೇಗ ಮೂಲಸೌಕರ್ಯಗಳ ವ್ಯವಸ್ಥೆ ಮಾಡುತ್ತೇವೆ ಎಂದರು.

ಆಪರೇಟರ್ ಗಳ ಕೊರತೆ ಬಗ್ಗೆ ಕೇಳಿದ ನಗರ ಸೇವಕರು, ಸಿಸ್ಟಮ್ ನೀಡುತ್ತೇವೆ ಆದರೆ ಆಪರೇಟರ್ ಗಳನ್ನು ಪೂರೈಸುವದು ಕಷ್ಟದ ಕೆಲಸ, ಕಂದಾಯ ನಿರೀಕ್ಷಕರು ಹೊಸ ಸಿಸ್ಟಮ್ ಗಳನ್ನು ಆಪರೇಟ ಮಾಡಬೇಕು ಎಂದರು..

ತೆರಿಗೆ ತುಂಬಲು ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲಾ, ದಕ್ಷಿಣ ವಿಭಾಗದಲ್ಲಿ ಖುರ್ಚುಗಳೇ ಇಲ್ಲಾ, ಅದರ ವ್ಯವಸ್ಥೆ ಆಗಬೇಕು ಎಂದರು.

ಆಸ್ತಿ ತೆರಿಗೆ ವಸೂಲಿ ಕುರಿತು, ಕಂದಾಯ ಆಯುಕ್ತರಿಂದ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸ್ಥಾಯಿ ಸಮಿತಿಯ ಸದಸ್ಯರು ಕೇಳಿದಾಗ, ಕಂದಾಯ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರು ಉತ್ತರಿಸುತ್ತಾ ಕಂದಾಯ ನಿರೀಕ್ಷಕರನ್ನು ಇತರೆ ಬೇರೆ ಕೆಲಸಗಳಿಗೆ ನಿಯೋಜನೆ ಮಾಡುವುದರಿಂದ ಹಾಗೂ ಹಬ್ಬಗಳ ಸಮಯವಿರುವದರಿಂದ ನಿರೀಕ್ಷಿಸಿದ ಮಟ್ಟದಲ್ಲಿ ತೆರಿಗೆ ಸಂಗ್ರಹ ಆಗಿಲ್ಲ ಎಂದು ಹೇಳುತ್ತಾ,

ಕಂದಾಯ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದ ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ..

ಕಂದಾಯ ನಿರೀಕ್ಷಕರು ಹಾಗೂ ಕರ ವಸೂಲಿಗಾರರು ಸರಿಯಾಗಿ ಕೆಲಸ ಮಾಡದಿದ್ದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಬೆಳಿಗ್ಗೆ ಕೆಲಸದ ವೇಳೆ ಆ ಸ್ಥಳದಿಂದ ಫೋಟೋ ಕಳಿಸದೇ ಇರುವ ಕಂದಾಯ ನಿರೀಕ್ಷಕರನ್ನು ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು, ಕಂದಾಯ ವಿಭಾಗದಲ್ಲಿ ಯಾವುದೇ ಲೋಪದೋಷ, ಅವ್ಯವಹಾರ, ಹಾಗೂ ತೆರಿಗೆ ಸಂಗ್ರಹದಲ್ಲಿ ವ್ಯತ್ಯಾಸವಾದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ, ಅದೇ ರೀತಿ ತೆರಿಗೆ ಸಂಗ್ರಹದಲ್ಲಿ ಯಾರಾದರೂ ಕಳಪೆ ಪ್ರದರ್ಶನ ತೋರಿದರೆ ಅಂತವರನ್ನು ನೇರವಾಗಿ ಕಚೇರಿ ಕೆಲಸಕ್ಕೆ ವರ್ಗಾಯಿಸಿಕೊಳ್ಳುತ್ತೇನೆ ಎಂದು ಖಡಕ್ ಸೂಚನೆ ನೀಡಿದರು.

ಇನ್ನು ಪಾಲಿಕೆಯ ವಿರೋಧ ಪಕ್ಷದ ನಾಯಕ ಮುಜಮಿಲ್ ದೋಣಿ ಅವರು ಮಾತನಾಡಿ, ಐದು ವರ್ಷಗಳಿಂದ (ಸುಮಾರು 1ಲಕ್ಷ ವರೆಗೆ) ತೆರಿಗೆ ತುಂಬದವರ ಮೇಲೆ ಏನು ಕ್ರಮ ತೆಗೆದುಕೊಂಡಿದ್ದಿರಾ? ಅವರ ಬಗ್ಗೆ ಏನಾದರೂ ಮಾಹಿತಿ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಂದಾಯ ಉಪ ಆಯುಕ್ತರು, ಜನವಸತಿ ಮನೆಗಳಿಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿಲ್ಲ ಆದರೆ ವಾಣಿಜ್ಯ ಮಳಿಗೆಗಳಿಗೆ ಪಾಲಿಕೆಯ ನಿಯಮಬದ್ಧವಾಗಿ ಕ್ರಮ ಜರುಗಿಸಿ, ಎಲ್ಲವನ್ನೂ ಸೇರಿಸಿ ವಸೂಲಿ ಮಾಡುತ್ತೇವೆ, ಹಿಂದೆ ಒಂದು ವಾಣಿಜ್ಯ ಕಟ್ಟಡದ ಬಾಕಿ ಇರುವ 47 ಲಕ್ಷ ತೆರಿಗೆ ಹಣವನ್ನು ವಸೂಲಿ ಮಾಡಿದ್ದೇವೆ ಎಂದರು..

ಮುಂದುವರೆದು ಮಾತನಾಡಿದ ಮುಜಮಿಲ್ ದೋಣಿ ಅವರು, ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮಾಧ್ಯಮದ ಮೂಲಕ ಮಾಹಿತಿ ನೀಡಿ, ಜಾಹೀರಾತು ನೀಡಿ, ಸರಿಯಾಗಿ ತಿಳಿಸಿ ವಸೂಲಿ ಮಾಡಿ, ಅದರಿಂದಲೂ ಪಾಲಿಕೆಗೆ ತುಂಬಾ ಆದಾಯ ಬರುತ್ತದೆ ಎಂದಾಗ, ಕಂದಾಯ ಉಪ ಆಯುಕ್ತರು ನಮ್ಮ ಸಿಬ್ಬಂದಿಗಳಿಗೆ ಸೂಚಿಸುತ್ತೇನೆ ಎಂದರು..

ಈ ಸ್ಥಾಯಿ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ನೇತ್ರಾವತಿ ವಿನೋದ ಭಾಗವತ, ಉಪ ಮಹಾಪೌರರಾದ ಆನಂದ ಚೌಹಾಣ್, ಆಡಳಿತ ಪಕ್ಷದ ನಾಯಕರಾದ ಗಿರೀಶ್ ದೊಂಗಡಿ, ವಿರೋಧ ಪಕ್ಷದ ನಾಯಕರಾದ ಮೂಜಮಿಲ್ ದೋಣಿ, ಸ್ಥಾಯಿ ಸಮಿತಿಯ ಸದಸ್ಯರಾದ ಹಣಮಂತ ಕೊಂಗಾಲಿ, ನೀತಿನ ಜಾಧವ, ನಂದು ಮಿರಜಕರ, ಪರಿಷತ್ ಕಾರ್ಯದರ್ಶಿ, ಕಂದಾಯ ಉಪ ಆಯುಕ್ತರು, ಕಾನೂನು ಅಧಿಕಾರಿ ಹಾಗೂ ಕಂದಾಯ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..