ಶಿವಣ್ಣ ಬೇಗ ಗುಣಮುಖವಾಗಿ ಬರಲೆಂದು ಬೆಳಗಾವಿಯಲ್ಲಿ ವಿಶೇಷ ಪೂಜೆ..
ಮಂಗಳವಾರ ಸಂಕಷ್ಟಹರ ಗಣಪತಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಬೆಳಗಾವಿ ಅಭಿಮಾನಿಗಳು..
ಬೆಳಗಾವಿ : ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ, ವರನಟ ಡಾ ರಾಜಕುಮಾರ ಅವರ ಜೇಷ್ಠ ಸುಪುತ್ರರಾದ ಡಾ ಶಿವರಾಜಕುಮಾರ ಅವರು ಅನಾರೋಗ್ಯದ ನಿಮಿತ್ತ, ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದು, ಇಂದು ಅಂದರೆ ಮಂಗಳವಾರ ದಿನಾಂಕ 24/12/2024ರಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಆದಷ್ಟು ಬೇಗ ಅವರು ಗುಣಮುಖರಾಗಿ ಬರಲಿ ಎಂದು, ಅಖಿಲ ಕರ್ನಾಟಕ ಡಾ ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ..

ಬೆಳಗ್ಗೆನೇ ನಗರದ ಚನ್ನಮ್ಮ ವೃತ್ತದಲ್ಲಿರುವ ವಿಘ್ನ ವಿನಾಯಕನ ಮಂದಿರದಲ್ಲಿ ವಿಶೇಷ ಪೂಜಾ, ಆರತಿಯನ್ನು ನೆರವೇರಿದ ಅಭಿಮಾನಿಗಳು, ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿ, ಆದಷ್ಟು ಬೇಗ ಗುಣಮುಖರಾಗಿ ನಮ್ಮ ಕರುನಾಡಿಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಮಂಗಳವಾರ ವಿಶೇಷವಾಗಿ ಗಣಪತಿಯ ಆರಾಧನೆಯ ವಾರವಾಗಿದ್ದು, ದೇವಸ್ಥಾನದಲ್ಲಿ ನೆರೆದ ಭಕ್ತಾದಿಗಳು ಕೂಡಾ ಶಿವಣ್ಣನ ಆರೋಗ್ಯದ ಗುಣಮುಖಕ್ಕಾಗಿ ಸಂಕಷ್ಟಹರನಲ್ಲಿ ಬೇಡಿಕೊಂಡಿದ್ದಾರೆ..

1986ರಲ್ಲಿ ಆನಂದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಡ್ಯಾಶಿಂಗ್ ಎಂಟ್ರಿ ನೀಡಿದ ಶಿವಣ್ಣ ಸತತ ಮೂರು ಹಿಟ್ (ಸಿಲ್ವರ್ ಜ್ಯುಬಿಲಿ) ಚಿತ್ರಗಳನ್ನು ನೀಡುವ ಮೂಲಕ ಹ್ಯಾಟ್ರಿಕ್ ಹೀರೋ ಆಗಿ ಕರುನಾಡಿನ ಮನೆಮಗ ಆದದ್ದು ಇತಿಹಾಸ, ಡಾ ರಾಜ್ ರನ್ನು ಹೊರತು ಪಡಿಸಿ, ಮೊದಲ ಚಿತ್ರದಿಂದ ಇಲ್ಲಿಯವರೆಗೆ ಕೇವಲ ನಾಯಕನಟನಾಗಿಯೇ ಮುಂದುವರೆದಿದ್ದು ನಟ ಶಿವರಾಜಕುಮಾರೇ ಅವರೇ ಅನಿಸುತ್ತದೆ.
ಕನ್ನಡದ ಇತರ ಬಹುತೇಕ ಎಲ್ಲಾ ನಟರೊಂದಿಗೆ ಹಾಗೂ ತಮಿಳು ತೆಲುಗು ಮಲೆಯಾಳಂ ಚಿತ್ರರಂಗದ ದಿಗ್ಗಜ ನಟರೊಂದಿಗೆ ನಟಿಸಿ, ಎಲ್ಲರೊಂದಿಗೆ ಆತ್ಮೀಯತೆ ಸ್ನೇಹದಿಂದ ಬೆರೆತ ಅಜಾತ ಶತ್ರುವೆಂದೇ ಕರೆಸಿಕೊಂಡಿರುವ ಶಿವಣ್ಣ, 1986ರಿಂದ ಇಲ್ಲಿಯವರೆಗೆ ತಮ್ಮ ಸಿನಿಪಯಣದಲ್ಲಿ ವಿರಾಮ ಪಡೆದ ಉದಾಹರಣೆ ಇಲ್ಲಾ..

ಮೊದಲ ಚಿತ್ರ ಆನಂದ ಹಿಟ್ ಆದಾಗಿನಿಂದ ಮೊನ್ನೆ ನವೆಂಬರನಲ್ಲಿ ಬಿಡುಗಡೆಯಾದ ಬೈರತಿ ರಣಗಲ್ ಚಿತ್ರದ ವರೆಗೂ ಶಿವಣ್ಣ130 ಚಿತ್ರ ಮಾಡಿದರೂ, ಹಿಂದೆ ತಿರುಗಿ ನೊಡದಷ್ಟು ಬಿಜಿ ಆಗಿರುವ ನಟರಾಗಿದ್ದು ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ, ತಮ್ಮ ಸಿನಿಪಯಣದ 38 ವರ್ಷಗಳಲ್ಲಿ, ತಮಗೆ 60 ವರ್ಷ ದಾಟಿದ್ದರೂ, ಇನ್ನು 20ರ ಯುವಕನಂತೆ ಲವಲವಿಕೆಯಿಂದ ನಟನೆ ಮಾಡುವ, ಹಾಗೂ ಕೊಟ್ಟ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ, ಎನರ್ಜಿ ಪ್ಯಾಕ್ ಎಂತಲೇ ಕರೆಸಿಕೊಳ್ಳುವ ಶಿವಣ್ಣ ಎಲ್ಲಾ ವಯೋಮಾನದ ನಿರ್ದೇಶಕರಿಗೆ ಹಾಗೂ ತಮ್ಮ ಚಿತ್ರಗಳಿಗೆ ನೆಚ್ಚಿನ ನಾಯಕ ನಟರಾಗಿದ್ದರು..
ಹೀಗೆ ನಿರಂತರ, ವಿರಾಮವಿಲ್ಲದೆ ಕಲಾಸೇವೆ ಮಾಡುತ್ತಿರುವ ಕಲಾಜೀವಿಗೆ ಆರೋಗ್ಯದ ವಿಷಯದಲ್ಲಿ ಏರುಪೇರಾಗುವುದು ಸ್ವಾಭಾವಿಕವೇ, ಅದೇ ಕಾರಣಕ್ಕೆ ಇಂದು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರುನಾಡ ಕಣ್ಮಣಿ ಶಿವಣ್ಣನಿಗೆ ಒಳ್ಳೆಯದಾಗಲಿ ಎಂದು ಇಂದು ಬೆಳಗಾವಿಯಲ್ಲಿ ಅಖಿಲ ಕರ್ನಾಟಕ ಡಾ ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟ, ಡಾ ಶಿವರಾಜಕುಮಾರ್ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ ಬೆಳಗಾವಿ ಇವರ ವತಿಯಿಂದ ವಿಶೇಷ ಪೂಜಾ ಆರಾಧನೆ ಜರುಗಿದೆ..

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ ರಾಜ್ ಅಭಿಮಾನಿ ಸಂಘಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಶೇಖರ್ ಕಾಲೆರಿ, ಪರಶುರಾಮ ದುಡಗುಂಟಿ, ಈರಣ್ಣ ಅನಾಗೊಳ್ಕರ್, ರವಿ ತಳ್ಳಿಮನಿ, ಜೂನಿಯರ್ ಶಿವರಾಜಕುಮಾರ, ಸಂತೋಷ ಚಿಕ್ಕಲದಿನ್ನಿ, ಶಿವಾನಂದ ಸುಣಗಾರ, ಮಹೇಶ ಹೊಸೂರ್, ಪರಶುರಾಮ ಪಾಟೀಲ್, ಪೂಜಾ ಪಾಟೀಲ್, ಪ್ರೀತಿ ದೇವರಮನೆ, ಅಕ್ಷತಾ ದೇವರಮನೆ, ಸ್ಮಿತಾ ಚೌಗುಳೆ, ಮಹೇಶ ಬಸರಿಮರದ, ರಮೇಶ್, ಶಿವಾಜಿ, ರಮೇಶ, ಯಲ್ಲಪ್ಪ, ವಿಠ್ಠಲ್ ಅಂಕಲಗಿ, ಶ್ರೀಶೈಲ ಮತ್ತಿತರ ಅಭಿಮಾನಿ ವರ್ಗ ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..