ಶಿಸ್ತು ಸಮಯಪ್ರಜ್ಞೆಯೊಂದಿಗೆ ಉನ್ನತವಾದ ಗುರಿ ಇಟ್ಟುಕೊಳ್ಳಿ..
ಸಾಧಕರ ಸ್ಪೂರ್ತಿಯೊಂದಿಗೆ ಸತತ ಅಧ್ಯಯನ ಮಾಡಿ..
ವಸತಿ ಶಾಲೆಗಳು ವಿಧ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗಿವೆ..
ಪರಶುರಾಮ ದುಡಗುಂಟಿ, ಸಿಎಓ, ಜಿಪಂ ಬೆಳಗಾವಿ.
ಬೆಳಗಾವಿ : ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಅಡಿಯಲ್ಲಿ ಸುಸಜ್ಜಿತ ಸಕಲ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿ, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹಾಗೂ ಅವರ ಉಜ್ವಲ ಭವಿಷ್ಯಕ್ಕಾಗಿ ವಸತಿ ಶಾಲೆಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಮುಂದೆ ಉತ್ತಮ ಸಮಾಜ ಕಟ್ಟುವ ಪ್ರಜೆಗಳಾಗಬೇಕು ಎಂದು ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

ಮಂಗಳವಾರ ದಿನಾಂಕ 31/12/2024 ರಂದು ಸಮಾಜ ಕಲ್ಯಾಣ ಇಲಾಖೆಯ ಬೈಲಹೊಂಗಲದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬೇಟಿ ನೀಡಿದ ಅಧಿಕಾರಿಗಳು ಅಲ್ಲಿಯ ಹತ್ತನೆಯ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಸ್ತು ಹಾಗೂ ಸಮಯಪ್ರಜ್ಞೆಯಂದ ಅಧ್ಯಯನ ಮಾಡಿ, ನಾಡಿನ ಸಮಕಾಲೀನ ಹಲವಾರು ಸಾಧಕರ ಜೀವನವನ್ನು ತಿಳಿದು ಅವರ ಸ್ಪೂರ್ತಿ ಪಡೆದುಕೊಳ್ಳಿ, ಈಗಿನಿಂದಲೇ ಉನ್ನತವಾದ ಗುರಿಗಳನ್ನು ಇಟ್ಟುಕೊಂಡು ಸತತ ಪ್ರಯತ್ನ ಮಾಡಿರಿ, ಸರ್ಕಾರ ತಮ್ಮ ಶಿಕ್ಷಣಕ್ಕಾಗಿ ಸಾಕಷ್ಟು ಸೌಲಭ್ಯ ನೀಡುತ್ತಿದೆ ಅದರ ಸದುಪಯೋಗ ಪಡೆದುಕೊಂಡು ಉತ್ತಮ ಪ್ರಜೆಗಳಾಗಿ ಎಂದು ನೈತಿಕ ಪಾಠ ಮಾಡಿದ್ದಾರೆ..

ಈ ವೇಳೆ ವಸತಿ ಶಾಲೆಯ ಅಡುಗೆ ಕೊಠಡಿ, ವಿಧ್ಯಾರ್ಥಿಗಳ ಸ್ನಾನದ ಕೊಠಡಿ, ಗ್ರಂಥಾಲಯ, ಮಲಗುವ ಕೋಣೆಗಳು ಸೇರಿದಂತೆ ವಸತಿ ನಿಲಯದ ಎಲ್ಲಾ ಕಡೆಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಆ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ತಿಳಿಸಿ, ಆನ್ಲೈನ್ ತರಗತಿ ಹಾಗೂ ಬೋರ್ಡ್ ಪರೀಕ್ಷೆಯ ಕುರಿತಾಗಿ ಕೆಲ ಮಹತ್ವದ ಮಾರ್ಗಸೂಚಿ ನೀಡಿದರು.
ಪುಸ್ತಕ ಹಿಡಿದು ಮೇಷ್ಟ್ರು ಆದ ಕೆಎಎಸ್ ಅಧಿಕಾರಿ..
ಅಧಿಕಾರಿ ಪರಶುರಾಮ ದುಡಗುಂಟಿ ಅವರು ಮುಖ್ಯ ಲೆಕ್ಕಾಧಕಾರಿ ಆಗುವ ಮುಂಚೆ ತಾವು ಕೂಡಾ ಒಬ್ಬ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರ ಪರಿಣಾಮವಾಗಿ ಮತ್ತೆ ಪುಸ್ತಕ ಹಿಡಿದು ಮೇಷ್ಟ್ರು ಆಗಿ ಪಾಠ ಮಾಡಲು ಶುರು ಮಾಡಿ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯವಾಗಿ ಪಾಠ ಮಾಡಿದ್ದಾರೆ. ಜೊತೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸಾಮಾನ್ಯ ಜ್ಞಾನದ ರಸಪ್ರಶ್ನೆ ಸೇರಿದಂತೆ, ಪಠ್ಯಕ್ರಮದ ವಿಷಯವಾಗಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಉಳ್ಳಾಗಡ್ಡಿ, ಜಿಪಂ ಸಿಬ್ಬಂದಿಗಳಾದ ಶಶಿಕಾಂತ ನೇಸರಗಿ, ಸುವರ್ಣಾ ಮಹೇಂದ್ರಕರ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ರಘು ಬಿ.ಎನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..