ಜನಸಾಮಾನ್ಯರ ಜೀವನ ನರಕ ಮಾಡುತ್ತಿರುವ ಮಟ್ಕಾ ದಂಧೆ.
ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಅವರಿದ್ದಾಗಿನ ಪೊಲೀಸ್ ಪವರ್ ಈಗೇಕೆ ಮಾಯವಾಗಿದೆ?
ಬೆಳಗಾವಿ ಶಾಸಕ, ಸಚಿವರಿಗೆ ಜನರ ಸಂಕಷ್ಟ ಕಾಣಿಸದಾಯಿತೇ??
ಬೆಳಗಾವಿ : ಒಂದು ಪ್ರಾಥಮಿಕ ಶಾಲೆಯ ಮಗು ತನ್ನ ಪುಟ್ಟ ಬಾಡಿಗೆ ಮನೆಯಲ್ಲಿ, ಕೆಲಸಕ್ಕೆ ಹೋದ ತನ್ನ ತಂದೆಯ ದಾರಿ ಕಾಯುತ್ತಾ, ಇಂದು ಸಂಜೆ ನನ್ನ ಅಪ್ಪ ಕೆಲಸ ಮಾಡಿ ಹಣ ತರುವನು, ಅದರಿಂದ ನಾಳೆ ಶಾಲೆಗೆ ಡ್ರಾಯಿಂಗ್ ಬುಕ್ ತಗೆದುಕೊಂಡು ಹೋಗುವೆ, ಆಗ ಟೀಚರ್ ನನ್ನ ಡ್ರಾಯಿಂಗ್ ಬುಕ್ ತಂದಿಲ್ಲ ಎಂದು ಬೆಂಚ ಮೇಲೆ ನಿಲ್ಲಿಸುವುದಿಲ್ಲ, ಎಂಬ ಕನಸು ಕಾಣುತ್ತಿದ್ದರೆ, ಇತ್ತ ಒಬ್ಬ ಗೃಹಿಣಿ ತನ್ನ ಗಂಡ ಇವತ್ತಾದರೂ ದುಡಿದ ಹಣ ತಂದರೆ, ಮನೆಗೆ ಹಾಲು ತರಕಾರಿಗಳನ್ನು ತರಬಹುದೆಂದು ಕಾದು ಕುಳಿತಿರುವಾಗ..
ದುಡಿದು ಸಂಜೆ ಮನೆಗೆ ಬರುವ ಮನುಷ್ಯ, ತನ್ನ ಅತೀ ಆಸೆಗಾಗಿಯೋ, ಯಾರದೋ ಹೇಳಿಕೆಗೋ, ಅಥವಾ ತಾನೇ ಜಾಣನಂತೆಯೋ ವಿಚಾರ ಮಾಡಿ, ತಾನು ದುಡಿದ ಹಣವನ್ನು ಮಟ್ಕಾ ಜೂಜಿಗೆ ಹಚ್ಚಿ, ಅದು ಬರದೆ ಹಣ ಕಳೆದುಕೊಂಡು, ಬರಿಗೈಲಿ ಸೋತುಮುಖ ಹಾಕಿಕೊಂಡು ಮನೆಗೆ ಬಂದಾಗ, ಮನೆಯಲ್ಲಿ ಕಾದು ಕುಳಿತ ಆ ಪುಟ್ಟ ಮಗು, ಹಾಗೂ ಗೃಹಿಣಿಯ ಮನಸ್ಸು ಏನಾಗುತ್ತದೆ ಎಂದು ಮನುಷ್ಯರಾಗಿ ವಿಚಾರ ಮಾಡಬೇಕಾಗಿದೆ..
ಜೀವನಕ್ಕೆ ದುಡ್ಡೇ ಎಲ್ಲಾ ಅಲ್ಲಾ, ಜನರ ಜೀವನ ಹಾಳು ಮಾಡಿ, ಅವರನ್ನು ನಿಸ್ಪ್ರಯೋಜಕರನ್ನಾಗಿ ಮಾಡಿ, ಸಮಾಜವನ್ನು ದುರ್ಬಲ ಮಾಡುವ ಈ ಜೂಜಾಟಗಳನ್ನು ಆಡಿಸಿ ದುಡ್ಡು ಮಾಡುವದು ಯಾವ ನ್ಯಾಯ? ಇದರಿಂದ ಒಳ್ಳೆಯದಾಗುತ್ತದೆಯೇ? ಪಾಪ ಪುಣ್ಯ ಲೆಕ್ಕದ ಈ ಕಲಿಯುಗದಲ್ಲಿ, ಯಾವುದು ಶಾಶ್ವತ ಯಾವುದು ಕ್ಷಣಿಕ ಎಂಬುದು ತಿಳಿಯದ ಜೀವನ ನಮ್ಮದಾಗಿದೆ..
ಅದೇನೇ ಇರಲಿ, ಬೆಳಗಾವಿ ನಗರ ಹಾಗೂ ಜಿಲ್ಲೆಯ ಕೆಲವೆಡೆ ಮಟ್ಕಾ ದಂಧೆಯು ರಾಜಾರೋಷವಾಗಿ ನಡೆಯುತ್ತಿದ್ದು, ಇದು ಬಡ ಮತ್ತು ಮಧ್ಯಮ ವರ್ಗದ ಜನರ ಜೀವನದ ಮೇಲೆ ಅತೀ ಪ್ರತಿಕೂಲ ಪರಿಣಾಮ ಬೀರುತ್ತಿದೆ, ಗಂಡಸರು ದಿನವೆಲ್ಲಾ ಇದರ ದಾಸರದರೆ, ಕೆಲ ಹೆಂಗಸರು ಸಹ ತಮ್ಮ ನೆಚ್ಚಿನ ಸೀರಿಯಲ್ ಬಿಟ್ಟು ಈ ಮಟ್ಕಾದ ದಾರಿ ಕಾಯುತ್ತಿದ್ದಾರೆ ಎಂಬುದು ವಿಪರ್ಯಾಸ, ಇದರಿಂದ ಇಂದು ಕ್ರಿಯಾಶೀಲ, ಸುಂದರ, ಅಭಿವೃದ್ಧಿಯ, ಆರೋಗ್ಯಯುತವಾದ ಸಮಾಜದ ನಿರ್ಮಾಣದ ಬದಲಾಗಿ, ದುಶ್ಚಟದ ರೋಗಪೀಡಿತ ಸಮಾಜ ನಿರ್ಮಾಣವಾಗುವ ಸಂಶಯ ಮೂಡತೊಡಗಿದೆ..

ಈ ಹಿಂದೆ ಬೆಳಗಾವಿಯ ನಗರ ಪೊಲೀಸ್ ಆಯುಕ್ತರಾಗಿ ಬೋರಲಿಂಗಯ್ಯ ಸರ್ ಅವರ ಅವಧಿಯಲ್ಲಿ ನಗರದ ಯಾವುದೇ ಭಾಗದಲ್ಲಿ ಈ ಮಟ್ಕಾ ವ್ಯವಹಾರ ಇರಲಿಲ್ಲ, ಎಂತಹ ಪ್ರಭಾವಿ ಇದ್ದರೂ ಎಲ್ಲಾ ಕಡೆಗೆ ಖಾಕಿ ಖದರ್ ತೋರಿಸಿ, ದುಷ್ಟರನ್ನು ಮೂಲೆಗೊತ್ತಿ, ಉತ್ತಮ ಸಮಾಜ ನಿರ್ಮಿಸಿದ ವೃತ್ತಿಪರತೆ ತೋರಿದ್ದು, ಅವರ ಆದೇಶದಂತೆ ಬೆಳಗಾವಿ ಪೊಲೀಸರು ಕಾರ್ಯಪ್ರವೃತ್ತರಾಗಿ ಸಿಂಹಗಳಂತೆ ಸಾಮರ್ಥ್ಯದಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಯಾಕೋ, ಏನೋ, ಈಗ ಸ್ವಲ್ಪ ಮಂಕಾದಂತೆ ಕಾಣುತ್ತಿದೆ.
ಇನ್ನು ಗಾಂಧಿ ಭಾರತ, ಕಾಂಗ್ರೆಸ್ ಶತಮಾನೋತ್ಸವ ಮಾಡುತ್ತಾ ಬೆಳಗಾವಿಯಲ್ಲಿ ಕೋಟಿಗಟ್ಟಲೆ ಖರ್ಚು ಮಾಡುವ ರಾಜ್ಯದ ಹಾಗೂ ಬೆಳಗಾವಿ ಶಾಸಕ, ಸಚಿವರುಗಳಿಗೆ ಜನಸಾಮಾನ್ಯರ ಜೀವನದ ಬಗ್ಗೆ ಕಾಳಜಿ ಇಲ್ಲವೇನೋ ಎಂಬ ಸಂಶಯ ಕಾಡುತ್ತಿದೆ, ಜನರ ಮನೆ ಹಾಳು ಮಾಡುವ ಈ ಜೂಜಾಟವನ್ನು ಇಡೀ ಜಿಲ್ಲೆಯಾದ್ಯಂತ ನಿಲ್ಲಿಸಿ, ಜನರು ನೆಮ್ಮದಿಯಿಂದ ಜೀವನ ಮಾಡುವ ವಾತಾವರಣ ನಿರ್ಮಿಸಿ, ಉತ್ತಮ ಜೀವನ ನಡೆಸಲು ಜನಪ್ರತಿನಿಧಿಗಳು ದಾರಿಮಾಡಿಕೊಡಬೇಕು, ಆ ಮೂಲಕ ಮತದಾರರ ಮನಸ್ಸಿನಲ್ಲಿ ಮತ್ತೆ ತಾವು ನೆಚ್ಚಿನ ಜನನಾಯಕರಾಗಿ ಮುಂದುವರೆಯಬೇಕು ಎಂಬುದು ಸಾರ್ವಜನಿಕರ ಕಳಕಳಿಯಾಗಿದೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..