ಬೆಳಗಾವಿಯ ಕಾವು ಕಟ್ಟೆಯ ಕರ್ಮಕಾಂಡ..

ಬೆಳಗಾವಿಯ ಕಾವು ಕಟ್ಟೆಯ ಕರ್ಮಕಾಂಡ..

ನಗರ ಸೇವಕರ ಅಧಿಕಾರ ದುರ್ಬಳಕೆಗೆ ತಕ್ಕಶಾಸ್ತಿ..

ಪಾಲಿಕೆಯ ಇಬ್ಬರು ಬಿಜೆಪಿ ನಗರ ಸೇವಕರ ಸದಸ್ಯತ್ವ ರದ್ದು.

ಬೆಳಗಾವಿ : ಮಹಾನಗರ ಪಾಲಿಕೆಯ ಆಡಳಿತ ಪಕ್ಷವಾದ ಬಿಜೆಪಿಯ ಇಬ್ಬರು ನಗರ ಸೇವಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದಡಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಾದ ಎನ್ ಬಿ ಶೇಟ್ಟೆನ್ನವರ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ನಗರದ ಗೋವಾವೇಸ್ ವೃತ್ತದಲ್ಲಿ ಇರುವ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿತವಾದ ತಿನಿಸುಕಟ್ಟೆ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ಕುಟುಂಬ ಸದಸ್ಯರಿಗೆ ಮಳಿಗೆಗಳನ್ನು ಹರಾಜು ಪಡೆದುಕೊಂಡಿರುವ ಆರೋಪದ ಮೇಲೆ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ಇಬ್ಬರು ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಲಾಗಿದೆ.

ಪಾಲಿಕೆಯ ಬಿಜೆಪಿ ಸದಸ್ಯರಾದ ಮಂಗೇಶ ಪವಾರ್ ಮತ್ತು ಜಯಂತ ಜಾಧವ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ಸೆಕ್ಷನ್ 26(1)(ಸಿ) ಉಲ್ಲಂಘಿಸಿದ್ದಾರೆ, ಆದಕಾರಣ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೋರಿ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ ಅವರು 2023ರ ನವೆಂಬರ್ 9ರಂದು ದೂರು ನೀಡಿದ್ದರು.

ದೂರಿನ ವಿಚಾರಣೆ ನಡೆಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು, ಈ ವಿಷಯ ಪರಿಶೀಲನೆ ಮಾಡಿ 6/1/2024ರಂದು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ವರದಿ ನೀಡಿದ್ದರು, ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಜಯಂತ ಜಾಧವ ಮತ್ತು ಮಂಗೇಶ ಪವಾರ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ.