ವಾರ್ಡ ಸಂಖ್ಯೆ 32ರ ಹನುಮಾನ ನಗರದ ನಿವಾಸಿಗಳ ಸಮಸ್ಯೆ ಆಲಿಸಿದ ಆಯುಕ್ತರು.
ಲೋಕೋಪಯೋಗಿ ಅಧಿಕಾರಿಗಳ ಕಾರ್ಯದ ವಿರುದ್ಧ ಸಾರ್ವಜನಿಕರ ಆಕ್ಷೇಪ..
ಪಾಲಿಕೆ ಆಸ್ತಿ ಕಾಪಾಡುವ ನಿಟ್ಟಿನಲ್ಲಿ ವ್ಯವಸ್ಥಿತ ಯೋಜನೆ ಹಾಕಿಕೊಂಡಿದ್ದೇವೆ.
ಪಾಲಿಕೆ ಆಯುಕ್ತರು.
ಬೆಳಗಾವಿ : ನಗರದ ಸುಶಿಕ್ಷಿತ ಜನವಸತಿ ಇರುವ ವಾರ್ಡ ಸಂಖ್ಯೆ 32ರ ಹನುಮಾನ ನಗರದಲ್ಲಿ ಹಲವು ದಿನಗಳಿಂದ ಕೆಲ ಸಮಸ್ಯೆಗಳು ಉಂಟಾಗಿದ್ದು, ನಗರ ಸೇವಕರಾದ ಸಂದೀಪ್ ಜಿರಗ್ಯಾಳ ಅವರ ನೇತೃತ್ವದಲ್ಲಿ ಇಂದು ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಪಾಲಿಕೆಯ ಆಯುಕ್ತರ ಮುಂದೆ ಹೇಳಿಕೊಂಡಿದ್ದಾರೆ.
ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ಪಾಲಿಕೆ ಆಯುಕ್ತರಾದ ಸುಭ ಅವರು, ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ವಿವರಿಸಿ, ಅದರ ಕುರಿತಾಗಿ ಅಗತ್ಯ ಕ್ರಮಗಳನ್ನು ಆದಷ್ಟು ಬೇಗ ತೆಗೆದುಕೊಳ್ಳಿ ಎಂಬ ಸೂಚನೆ ನೀಡಿದ್ದು, ಸಮಸ್ಯೆ ನಿವಾರಣೆಗೆ ಅನುಸರಿಸಬೇಕಾದ ಕೆಲ ಮಾರ್ಗದರ್ಶನ ನೀಡಿದ್ದಾರೆ.

ಇದೇ ವೇಳೆ ಸುದ್ದಿವಾಹಿನಿ ಯೊಂದಿಗೆ ಮಾತನಾಡಿದ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು, ಲೋಕೋಪಯೋಗಿ ಇಲಾಖೆಯಿಂದ ನಿರ್ಮಿತವಾದ ಹೊಸ ಗಟಾರುಗಳ ಬಗ್ಗೆ ಸಾರ್ವಜನಿಕರು ಬಹಳ ಆಕ್ಷೇಪಣೆ ಮಾಡಿದ್ದು, ಇದು ಕೆಲ ಪ್ರಭಾವಿ ಉದ್ದಿಮೆದಾರರಿಗೆ ಅನುಕೂಲ ಮಾಡಲೆಂದು, ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಗಟಾರುಗಳ ನಿರ್ಮಾಣ ಮಾಡಿದ್ದು, ಪಾಲಿಕೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ನಿರ್ಮಿತವಾದ ಹೊಸ ಗಟಾರುಗಳ ಪರಿಶೀಲಿಸಿದ ಆಯುಕ್ತರು, ಅವೈಜ್ಞಾನಿಕವಾಗಿ, ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಕೆಲಸ ಮಾಡಿದ್ದರೆ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ, ಪಾಲಿಕೆಯ ಖಾಲಿ ಇರುವ ಆಸ್ತಿಗಳನ್ನು ಯಾರು ಅತಿಕ್ರಮಣ ಮಾಡದಂತೆ ಮುಂಜಾಗ್ರತೆ ವಹಿಸುತ್ತೇವೆ, ನಾಲಾಗಳ ಅತಿಕ್ರಮಣ, ಮಾರ್ಗ ಬದಲಾವಣೆಗಳು ಆದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.

ಪಾಲಿಕೆಯ ಆಸ್ತಿಗಳು ಎಲ್ಲಿಯಾದರೂ ಒತ್ತುವರಿ ಆಗಿರುವ ಸಂಶಯವಿದ್ದರೆ, ಸಾರ್ವಜನಿಕರು ಪಾಲಿಕೆಯ ಸಹಾಯವಾಣಿಗೆ ಸಂಪರ್ಕಿಸಿ ಸಹಕರಿಸಬಹುದು, ಪಾಲಿಕೆಯ ಆಸ್ತಿಗೆ ಸರಹದ್ದು ಹಾಕಲಿಕ್ಕೆ ಈ ಸಲದ ಬಜೆಟ್ಟಿನಲ್ಲಿ ಹಣ ಮಿಸಲಿಟ್ಟಿದ್ದೇವೆ, ನಾವು ಪಾಲಿಕೆಯ ಆಸ್ತಿಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ, ಹಾಗೇನಾದರೂ ಖಾಸಗಿ ವ್ಯಕ್ತಿಗಳಿಂದ ಅತಿಕ್ರಮಣ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಹನುಮಾನ ನಗರದ ನಗರ ಸೇವಕರ, ಪಾಲಿಕೆಯ ಆಯುಕ್ತರ ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು ಆಗಮಿಸಿ, ಸಮಸ್ಯೆಗಳನ್ನು ಆಲಿಸಿ, ಪರಿಹಾರೋಪಾಯಗಳ ಕುರಿತಾದ ಚರ್ಚೆ ನಡೆಸಿದ್ದರ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ.