ತಾವೇ ನೀಡಿದ ಗಡುವನ್ನು (ಕಾಲಾವಧಿ) ತಪ್ಪಿದ ಬೆಳಗಾವಿ ತಾಪಂ ಇಓ..
ಭ್ರಷ್ಟಚಾರದ ತನಿಖೆಗೆ ಸಮಯವಿಲ್ಲ, ಬಿಲ್ ಮಾಡಿ ಅನುದಾನ ಪಡೆಯುವುದೇ ಮಹಾ ಕರ್ತವ್ಯವಾಗಿದೆ..
ಸಮಸ್ಯೆಗಳಿಗೆ ಸ್ಪಂದನೆ ನೀಡದೇ, ಇಹಿಹೀ ಎಂದು ನಗುತ್ತಾ ಮಾಡೋಣ ನೋಡೋಣ ಎನ್ನುವ ಹಸನ್ಮುಖಿ ಅಧಿಕಾರಿ..
ಬೆಳಗಾವಿ : ಜಿಲ್ಲೆಯ ಬಹುಮುಖ್ಯ ತಾಲೂಕು ಪಂಚಾಯತಿ ಎಂದು ಕರೆಸಿಕೊಳ್ಳುವ ಬೆಳಗಾವಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯು ಯಾಕೋ ರಬ್ಬರ್ ಸ್ಟ್ಯಾಂಪ್ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದ್ದು, ತಾವೇ ನೀಡಿದ ಗಡುವಿಗೆ (ಸಮಯಕ್ಕೆ) ತಪ್ಪಿದ್ದು, ಮತ್ತೆ ಕೆಲ ದಿವಸ ಕಾಲಾವಕಾಶ ಕೇಳುವ ಮೂಲಕ ತಮ್ಮ ಅಶಿಸ್ತಿನ ವರ್ತನೆ ತೋರುತ್ತಿದ್ದಾರೆ.
ಬೆಳಗಾವಿಯ ತಾಲೂಕಿನ ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘಟನೆಯು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ಪಿಡಿಒಗಳ ಮೇಲೆ ಭ್ರಷ್ಟಾಚಾರ ಇರುವ ಕುರಿತಾಗಿ ಆರೋಪಿಸಿ, ಅದನ್ನು ತನಿಖೆ ಮಾಡಲು 2024ರ ಏಪ್ರಿಲಿನಲ್ಲೇ ದೂರು ಅರ್ಜಿ ನೀಡಿದ್ದರು. ದೂರು ನೀಡಿ ಒಂದು ವರ್ಷ ಸಮಿಪಿಸಿದರೂ ಅದಕ್ಕೆ ಸರಿಯಾದ ಸ್ಪಂದನೆ ನೀಡದೇ, ತನಿಖೆ ಮಾಡದೇ, ಹೋದಾಗಲೆಲ್ಲ ಇಹಿಹೀ ಎಂದು ನಗುತ್ತಾ, ನಾಳೆ ಬನ್ನಿ, ನಾಲ್ಕು ದಿನ ಬಿಟ್ಟು ಬನ್ನಿ ಎಂದು ಹೇಳಿ ಕಳಿಸುತ್ತಿದ್ದರು.
ಇದನ್ನು ಕಂಡು ಬೇಸತ್ತ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರ ನೇತೃತ್ವದಲ್ಲಿ ಸಂಘಟನೆಯ ಹತ್ತಾರು ಕಾರ್ಯಕರ್ತರು ಸೇರಿಕೊಂಡು ದಿನಾಂಕ 07/03/2025 ರಂದು ಬೆಳಗಾವಿ ತಾಲೂಕು ಪಂಚಾಯತಿ ಕಛೇರಿ ಎದುರಿಗೆ ತಮಟೆ ಬಾರಿಸುವ ಮೂಲಕ, ನ್ಯಾಯ ಸಿಗುವರೆಗೂ ಇಲ್ಲಿಂದ ಕದಲುವುದಿಲ್ಲ ಎಂಬ ದಿಟ್ಟ ಪ್ರತಿಭಟನೆಯನ್ನು ಮಾಡಿದ್ದರು.
ಬೆಳಿಗ್ಗೆ 10-30 ರಿಂದ ಮದ್ಯಾಹ್ನ 2-30ರ ವರೆಗೆ ನಡೆದ ತಮಟೆ ಪ್ರತಿಭಟನೆಗೆ ಮಣಿದು, ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕ ಹಾಗೂ ಕಚೇರಿಯ ಇನ್ನಿತರ ಸಿಬ್ಬಂದಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಆರೋಪ ಹೊತ್ತ ಪಿಡಿಒಗಳ ಮೇಲೆ ಇನ್ನು ಹದಿನೈದು ದಿನಗಳ ಒಳಗಾಗಿ ಸೂಕ್ತ ತನಿಖೆ ಮಾಡಿ, ವರದಿ ಒಪ್ಪಿಸುತ್ತೇವೆ ಎಂಬ ಆದೇಶ ಪತ್ರಕ್ಕೆ ಸಹಿ ಮಾಡಿ, ಮಾದ್ಯಮದ ಮುಂದೆ ಅದೇ ರೀತಿ ಪ್ರತಿಕ್ರಿಯೆ ನೀಡಿದ್ದರು.
ಹದಿನೈದು ದಿನ ಕಳೆದು ಈಗ ಇಪ್ಪತ್ತು ದಿನ ಆದರೂ ತನಿಖಾ ವರದಿ ಬಗ್ಗೆ ಕೇಳಿದಾಗ, ಮತ್ತೆ ಅದೇರೀತಿ ಇಹಿಹೀ ಎಂದು ನಗುತ್ತಾ ಇನ್ನು ನಾಲ್ಕು ದಿನ ಕಾಯಬೇಕು ಎಂಬ ಬೇಜವಾಬ್ದಾರಿ ಉತ್ತರ ನೀಡುವ ಇಂತಹ ಅಧಿಕಾರಿಯಿಂದ ಉತ್ತಮ ಆಡಳಿತ ನಿರೀಕ್ಷಿಸಬಹುದೆ? ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆಯ ಭ್ರಷ್ಟಚಾರದ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಇವರಿಗೆ ಸಮಯವಿಲ್ಲ, ಬಿಲ್ಗಳನ್ನು ಸಿದ್ಧಪಡಿಸಿ ಅನುದಾನ ಪಡೆಯುವುದೇ ಮಹಾ ಕೆಲಸವೆಂದು ಮಾರ್ಚ ತಿಂಗಳ ಮಹಾಕಾರ್ಯವನ್ನು ಹೇಳುತ್ತಾರೆ.
ಭ್ರಷ್ಟಾಚಾರದ ಆರೋಪದಲ್ಲಿ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಆಗಿದೆ ಎಂದು ಕಳೆದ ಒಂದು ವರ್ಷದಿಂದ ಎಷ್ಟೇ ಮನವಿ ಮಾಡಿದರೂ, ಪ್ರತಿಭಟನೆ ನಡೆಸಿದರೂ ಸರಿಯಾದ ತನಿಖೆ ಮಾಡಿ, ವರದಿ ನೀಡದೇ ಇರುವ ಇಂತಹ ಅಧಿಕಾರಿಗಳು ಹಾಗೂ ಕಚೇರಿಗಳಿಂದ ಜನತೆಗೆ ಏನು ಪ್ರಯೋಜನ? ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಇಂತಹ ಅಧಿಕಾರಿಗಳಿಗೆ ಸಾರ್ವಜನಿಕ ಸೇವೆ ಯಾಕೆ? ಜನಪರವಾದ ಕಾರ್ಯ ಮಾಡುವದನ್ನು ಮರೆತು ಮತ್ಯಾವುದರಲ್ಲಿ ಇವರು ಬೀಜಿ ಇರುವರು? ಇಂತಹ ಆಮೆಗತಿಯ ಅಧಿಕಾರಿಗಳ ಬಗ್ಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳ ನಡೆ ಏನು? ಇಲಾಖೆಯ ಯೋಜನೆಗಳು ಪಾರದರ್ಶಕವಾಗಿ ಜನರಿಗೆ ತಲುಪಿ, ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿ ಯಾವಾಗ ಆಗುವವೋ ಎಂಬ ಸಂಶಯ ಸಾರ್ವಜನಿಕರಲ್ಲಿ ಕಾಡುತ್ತಿವೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..