ರಾಷ್ಟ್ರನಾಯಕರ ಜಯಂತಿಯ ಪೂಜಾ ಕಾರ್ಯಕ್ಕೆ ಗೈರಾದ ಬೆಳಗಾವಿಯ ಮೇಯರ್ ಹಾಗೂ ಉಪ ಮೇಯರ್..

ರಾಷ್ಟ್ರನಾಯಕರ ಜಯಂತಿಯ ಪೂಜಾ ಕಾರ್ಯಕ್ಕೆ ಗೈರಾದ ಬೆಳಗಾವಿಯ ಮೇಯರ್ ಹಾಗೂ ಉಪ ಮೇಯರ್..

ಕೂದಲೆಳೆಯ ಅಂತರದಲ್ಲಿದ್ದರೂ ಆಗಮಿಸದಿದ್ದಕ್ಕೆ ಎಸ್ಸಿ ಎಸ್ಟಿ ಮುಖಂಡರ ಅಸಮಾಧಾನ..

ವಿಷಯ ತಿಳಿದ ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಮಹಾಪೌರ ಹಾಗೂ ಉಪಮಹಾಪೌರು..

ವಾರ್ತಾ ಇಲಾಖೆಯ ಅಧಿಕಾರಿಯಾದರೂ ಕನಿಷ್ಠ ಕಾಳಜಿ ತೋರಿ ತಿಳಿಸಬಹುದಿತ್ತು.

ಬೆಳಗಾವಿ : ರಾಷ್ಟ್ರ ನಾಯಕ, ಹಸಿರು ಕ್ರಾಂತಿಯ ಹರಿಕಾರ ಹಾಗೂ ದೇಶದ ಮಾಜಿ ಉಪಪ್ರಧಾನಿಗಳಾದ ಡಾ ಬಾಬು ಜಗಜೀವನರಾಮ್ ಅವರು ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ತಮ್ಮ ಕಾಲಾವಧಿಯಲ್ಲಿ ನೀಡಿದ ಕೊಡುಗೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ಅಂತಹ ಮಹನೀಯರ ಜನ್ಮ ದಿನಾಚರಣೆಯ ಪೂಜಾ ಕಾರ್ಯಕ್ಕೆ ಕೂದಲೆಳೆಯ ಅಂತರದಲ್ಲಿದ್ದರೂ ನಗರದ ಪ್ರಥಮ ಹಾಗೂ ದ್ವಿತೀಯ ಪ್ರಜೆಗಳಾದ ಮೇಯರ್ ಹಾಗೂ ಡೆಪ್ಯುಟಿ ಮೇಯರ್ ಗೈರಾಗಿದ್ದರು.

ಶನಿವಾರ ದಿನಾಂಕ 05/04/2025 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸುಮಾರು 10-30ಕ್ಕೆ, ಜಯಂತಿಯ ಅಂಗವಾಗಿ ಡಾ ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗಿದ್ದು, ಬಹುತೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದು, ಪೂಜಾ ಸ್ಥಳದಿಂದ ಎರಡು ನಿಮಿಷಗಳ ದೂರದ, ಪಕ್ಕದ ವಾರ್ತಾ ಭವನದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಗರದ ಮಹಾಪೌರ ಹಾಗೂ ಉಪ ಮಹಾಪೌರರು ಜಯಂತಿಯ ಪೂಜಾ ಹಾಗೂ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಬಾರದೇ ಇದ್ದಿದ್ದು ಸಮುದಾಯದ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು.

ಭಾವಚಿತ್ರದ ಭವ್ಯ ಮೆರವಣಿಗೆ ಮುಗಿದ ನಂತರ ಸಂಗಮೇಶ್ವರದ ಡಾ ಬಾಬು ಜಗಜೀವನರಾಮ್ ಉದ್ಯಾನವನದಲ್ಲಿ ಶಾಸಕ ಆಶಿಫ್ (ರಾಜು) ಸೇಠ್, ಮಲ್ಲೇಶ್ ಚೌಗಲೆ, ಬಾಬು ಎಂಬ ಸಮುದಾಯದ ಪ್ರಮುಖರು ಈ ವಿಷಯದ ಕುರಿತಾಗಿ ಮಾತನಾಡಿ ತಮ್ಮ ಅಸಮಾಧಾನ ಹೇಳಿಕೊಂಡಿದ್ದು, ಜ್ಯಾತ್ಯಾತೀತವಾಗಿ ದೇಶಕ್ಕೆ ಮಾದರಿಯಾದ ಕೊಡುಗೆಗಳನ್ನು ನೀಡಿದ ಮಹಾ ಚೇತನದ ಜಯಂತಿಯಂದೇ ಪಾಲಿಕೆಯ ಕೌನ್ಸಿಲ್ ಸಭೆ ಇಡಬಾರದಿತ್ತು, ತಿಳಿಯದೇ ಇಟ್ಟಿದ್ದರೂ ಕೂಡಾ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಾಲಿಕೆ ಹಾಗೂ ಸಮಾಜಕಲ್ಯಾಣ ಇಲಾಖೆಯಿಂದ ಆಯೋಜನೆಗೊಂಡ ಜಿಲ್ಲಾ ಮಟ್ಟದ ಈ ಜಯಂತಿಯ ಪೂಜಾ ಕಾರ್ಯಕ್ಕೆ ಮಹಾಪೌರ ಹಾಗೂ ಉಪಮಹಾಪೌರರು ಆಗಮಿಸಬೇಕಿತ್ತು, ಅವರ ನಡೆ ತಪ್ಪು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಜಯಂತಿಯ ಪೂಜಾ ಕಾರ್ಯ ನಡೆಯುವ ಜಿಲ್ಲಾಧಿಕಾರಿ ಕಚೇರಿಯ ಆವರಣದ ಪಕ್ಕದಲ್ಲೇ ಇರುವ ವಾರ್ತಾ ಇಲಾಖೆಯಲ್ಲಿ ಜರುಗಿದ ಸತ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಗರದ ಮೇಯರ್ ಹಾಗೂ ಡೆಪ್ಯುಟಿ ಮೇಯರ್ ಎರಡು ನಿಮಿಷ ಪೂಜಾ ಕಾರ್ಯಕ್ರಮಕ್ಕೆ ಬಂದು ಹೋಗಬಹುದಿತ್ತು, ವಾರ್ತಾ ಇಲಾಖೆಯ ಅಧಿಕಾರಿಗಳಾದರೂ ಈ ಮಹಾಚೇತನದ ಜಯಂತಿಯ ಪೂಜಾ ಕಾರ್ಯದ ಬಗ್ಗೆ ಜನಪ್ರತಿನಿಧಿಗಳಿಗೆ ತಿಳಿಸಬಹುದಿತ್ತು.

ಪೂಜಾಕಾರ್ಯ ಹಾಗೂ ಭಾವಚಿತ್ರದ ಮೆರವಣಿಗೆ ನಂತರ ಸಂಗಮೇಶ್ವರ ನಗರದ ಬಾಬು ಜಗಜೀವನರಾಮ್ ಅವರ ಪುತ್ಥಳಿಗೆ ಗಣ್ಯರು ಹಾಗೂ ಅಧಿಕಾರಿಗಳಿಂದ ಮಾಲಾರ್ಪಣೆ ಪುಷ್ಪಾರ್ಚನೆ ಹಾಗೂ ಜೈಘೋಷಣೆಗಳ ನಂತರ ವೇದಿಕೆ ಕಾರ್ಯಕ್ರಮ ಪ್ರಾರಂಭವಾದ ಮೇಲೆ ಸುದ್ದಿ ತಿಳಿದು, ಮಹಾಪೌರರು ಹಾಗೂ ಉಪ ಮಹಾಪೌರರು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಸಮುದಾಯದ ಜನರ ಸಮಾಧಾನಕ್ಕೆ ಕಾರಣವಾಗಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..