ಪಾಲಿಕೆಯಿಂದ ಚುರುಕುಗೊಂಡ ಎ ಹಾಗೂ ಬಿ ಖಾತಾ ಆಸ್ತಿ ದಾಖಲಾತಿ ಪ್ರಕ್ರಿಯೆ.
ಆಸ್ತಿ ದಾಖಲಾತಿಗೆ ಬಂದ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುತ್ತಿರುವ ಪಾಲಿಕೆ ಸಿಬ್ಬಂದಿ.
ಬೆಳಗಾವಿ : ರಾಜ್ಯ ಸರ್ಕಾರದ ಆದೇಶದಂತೆ ಕಳೆದ ಮಾರ್ಚ ತಿಂಗಳಿನಿಂದ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಾರಂಭವಾದ ಎ ಹಾಗೂ ಬಿ ಖಾತೆಗಳ ಆಸ್ತಿಗಳ ದಾಖಲಾತಿ ಕಾರ್ಯ ಚುರುಕಾಗಿ ನಡೆಯುತ್ತಿದ್ದು, ಈ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳು ಸಾರ್ವಜನಿಕರಿಗೆ ಸೂಕ್ತ ಮಾಹಿತಿಯನ್ನು ನೀಡುತ್ತಾ, ಸರ್ಕಾರಿ ನಿಯಮಾವಳಿಯಂತೆ ಆಸ್ತಿ ನೋಂದಣಿಗಳನ್ನು ಮಾಡುತ್ತಿದ್ದಾರೆ.
ಕಳೆದ ಎರಡು ತಿಂಗಳಿನಿಂದ ನುರಿತ ಆಪರೇಟರ್, ಸರ್ವರದಂತಹ ತಾಂತ್ರಿಕ ಹಾಗೂ ಸಿಬ್ಬಂದಿಗಳ ಕೊರತೆಯಂತಹ ಸಮಸ್ಯೆಗಳ ನಡುವೆಯೂ ಆಸ್ತಿ ದಾಖಲಾತಿ ಕಾರ್ಯ ಈಗೀಗ ಸುಗಮವಾಗಿ ಸಾಗುತ್ತಿದ್ದು, ಸಾರ್ವಜನಿಕರಿಗೆ ಯಾವ ಆಸ್ತಿ ದಾಖಲೆಗೆ ಯಾವ್ಯಾವ ಪೇಪರ್ಸ್ ತರಬೇಕು ಅಂತ ಪಾಲಿಕೆಯ ಸಿಬ್ಬಂದಿಗಳು ಜಾಗೃತಿ ಮೂಡಿಸಿದ್ದಾರೆ.

ಈ ಆಸ್ತಿ ನೋಂದಣಿಯ ಕಾರ್ಯದ ವಿಶೇಷ ಕರ್ತವ್ಯ ನಿರ್ವಹಣೆಗಾಗಿ ಪಾಲಿಕೆಯ ಕೆಲ ಅಧಿಕಾರಿಗಳನ್ನು ವಲಯ ಆಯುಕ್ತರನ್ನಾಗಿ ನೇಮಿಸಿದ್ದು, ಇಂದು ಬೆಳಿಗ್ಗೆ 9 ಗಂಟೆಗೆ ಈ ಆಸ್ತಿ ನೋಂದಣಿಯ ದಕ್ಷಿಣ ವಲಯದ ಆಯುಕ್ತರಾದ ಉದಯಕುಮಾರ ತಳವಾರ ಅವರು ಹಿರಿಯ ನಾಗರಿಕರೊಂದಿಗೆ ಚರ್ಚಿಸುತ್ತ, ಆಸ್ತಿ ನೋಂದಣಿಗಾಗಿ ಆಗಮಿಸಿರುವ ಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕಿರುವ ಪರಿಹಾರೋಪಾಯಗಳನ್ನು ತಿಳಿಸಿದ್ದಾರೆ.
ಜೊತೆಗೆ ಈ ಆಸ್ತಿ ನೋಂದಣಿ ಕಾರ್ಯದ ಬಗ್ಗೆ ಮಾಹಿತಿ ನೀಡಿದ ದಕ್ಷಿಣದ ವಲಯ ಆಯುಕ್ತರು, ನಮ್ಮ ವ್ಯಾಪ್ತಿಗೆ ಒಂದರಿಂದ ಇಪ್ಪತ್ತು ವಾರ್ಡಿನ ವರೆಗಿನ ಆಸ್ತಿಗಳ ನೋಂದಣಿ ಕಾರ್ಯ ಬರುತ್ತಿದ್ದು, ಎ ಮತ್ತು ಬಿ ಖಾತೆಗಳು ಎರಡೂ ಸೇರಿ ದಿನಕ್ಕೆ ಸುಮಾರು 50 ಆಸ್ತಿಗಳ ನೋಂದಣಿ ಕಾರ್ಯ ನಡೆಯುತ್ತಿದ್ದು, ಸರ್ವರ ಹಾಗೂ ನುರಿತ ಸಿಬ್ಬಂದಿಗಳ ಕೊರತೆಯ ಸಮಸ್ಯೆ ಕೂಡ ಸ್ವಲ್ಪ ಮಟ್ಟಿಗೆ ಇದೆ ಎಂಬ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಸುಮಾರು 25% ರಷ್ಟು ಆಸ್ತಿಗಳ ನೋಂದಣಿ ಆಗಿದ್ದು, ಸರ್ಕಾರ ಆಗಷ್ಟ್ ವರೆಗೆ ಆಸ್ತಿ ನೋಂದಣಿ ಕಾಲಾವಧಿಯನ್ನು ವಿಸ್ತರಣೆ ಮಾಡಿದ್ದು, ಸಾಧ್ಯವಾದಷ್ಟು ಹೆಚ್ಚಿಗೆ ನೋಂದಣಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಸಾರ್ವಜನಿಕರು ನಮ್ಮ ಸಿಬ್ಬಂದಿಗಳಿಂದ ಸರಿಯಾದ ಮಾಹಿತಿ ಪಡೆಯಬೇಕು, ಮಧ್ಯವರ್ತಿಗಳ ಮೂಲಕ ಬರಬಾರದು, ತಿಳಿದುಕೊಂಡು ಸರಿಯಾದ ಎಲ್ಲಾ ದಾಖಲೆಗಳನ್ನು ತಂದಾಗ ಕೆಲಸ ಮತ್ತಷ್ಟು ಸರಳ ಆಗುತ್ತದೆ, ನಾವು ಯಾವುದೇ ಸಮಯದಲ್ಲಿಯೂ ಕೂಡಾ ನಗರವಾಸಿಗಳ ಜೊತೆಗೆ ಇರುತ್ತೇವೆ, ಅವರ ಸಮಸ್ಯೆಗೆ ಪರಿಹಾರ ಇರುತ್ತದೆ, ಸಾರ್ವಜನಿಕರು ಸಹಕರಿಸಿ, ತಮ್ಮ ಅನುಕೂಲಕ್ಕಾಗಿ ಸರ್ಕಾರ ತಂದ ಈಆಸ್ತಿ ನೋಂದಣಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..