ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಗೈದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಗೈದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ.

ಪ್ರತಿ ತಾಲೂಕಿನ ವಿಧ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಸಾಧನೆ ಮಾಡುವಂತಾಗಬೇಕು.

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಯ ಎರಡು ತಾಲ್ಲೂಕುಗಳ ಸರ್ಕಾರಿ ಪಿಯು ವಿದ್ಯಾರ್ಥಿಗಳ ಸಾಧನೆ ಖುಷಿ ತಂದಿದ್ದು, ಈ ಸಾಧನೆ ಪ್ರತಿ ತಾಲೂಕಿನ ಪಿಯು ಕಾಲೇಜುಗಳಲ್ಲಿ ಆಗಬೇಕು ಆ ಮೂಲಕ ಜಿಲ್ಲೆಯ ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಅತ್ಯುತ್ತಮ ಸ್ಥಾನ ಪಡೆಯುವಂತಾಗಬೇಕು, ಅದಕ್ಕೆ ಸರ್ಕಾರದಿಂದ ಬೇಕಾದ ಮೂಲಭೂತ ಸೌಲಭ್ಯಗಳನ್ನು ನಿಡುತ್ತೇವೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ.

ಮಂಗಳವಾರ ದಿನಾಂಕ 27/05/2025ರಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಬೆಳಗಾವಿ ಹಾಗೂ ಚಿಕ್ಕೋಡಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಗೈದ ಪದವಿ ಪೂರ್ವ ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯ ನೆರವೇರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು,
ಮೊದಲಿಗೆ ಸಾಧನೆಗೈದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ, ಮಕ್ಕಳ ಪರೀಕ್ಷಾ ಸಾಧನೆಯಲ್ಲಿ ಶಿಕ್ಷಕರ ಪಾತ್ರ ತುಂಬಾ ಮುಖ್ಯ, ಸರ್ಕಾರಿ ಕಾಲೇಜಿನ ಪಿಯು ವಿಧ್ಯಾರ್ಥಿಗಳಿಗೆ ವಿಶೇಷ ಪರೀಕ್ಷಾ ತರಬೇತಿ ಕಾರ್ಯಗಾರ ಏರ್ಪಡಿಸಿದ ಜಿಪಂ ಸಿಇಒ ಅವರ ವಿಶೇಷ ಕಾಳಜಿ ಮೆಚ್ಚುವಂತಹದ್ದು, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದ್ದೆ ಇದೆ, ಒಂದನೇ ತರಗತಿಯಿಂದ ಡಿಗ್ರಿವರೆಗೆ ಸಮಸ್ಯೆ ಇವೆ, ಆದರೂ ಇಲ್ಲಿ ಕಲಿತ ವಿಧ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡಿ ನಾವು ಯಾವುದಕ್ಕೂ ಕಡಿಮೆ ಇಲ್ಲಾ ಎಂದು ತೋರಿಸಿದ್ದೀರಾ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಸರ್ಕಾರದಿಂದ ಶೈಕ್ಷಣಿಕವಾಗಿ ಅವಶ್ಯಕವಿರುವ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಗೆ ಮಾಡುತ್ತೇವೆ, ಫಲಿತಾಂಶ ಇನ್ನು ಹೆಚ್ಚಾಗಲು ಎಲ್ಲರೂ ಪ್ರಯತ್ನಿಸೋಣ, ಮಜಲಟ್ಟಿ ಬೈಲಹೊಂಗಲನಲ್ಲಿ ಅಷ್ಟೇ ಉತ್ತಮ ಕಾಲೇಜುಗಳು ಇದ್ದರೆ ಸಾಲದು, ಪ್ರತಿ ತಾಲೂಕಿಗೂ ಇಂತಹ ಉತ್ತಮ ಕಾಲೇಜುಗಳು ಆಗಬೇಕು ಎಂದರು.

ನಮ್ಮ ಇಲಾಖೆಯಿಂದ ಉತ್ತಮ ಶಾಲಾ ಕಟ್ಟಡಗಳನ್ನು ನೀಡುವ ಕಾರ್ಯ ಮಾಡುತ್ತೇವೆ, ಪ್ರತಿ ವರ್ಷ ಒಂದು ಕಾಲೇಜಿಗೆ ಐದು ಕೋಟಿ ಕೊಡುತ್ತೇವೆ, ಒಂದು ವರ್ಷ ಬೆಳಗಾವಿಗೆ ಮತ್ತೊಂದು ವರ್ಷ ಚಿಕ್ಕೊಡಿಗೆ, ಕಲಿಯುವ ಕಲಿಸುವ ಇಬ್ಬರಿಗೂ ಇಚ್ಛಾಶಕ್ತಿ ಇರಬೇಕು, ಇಲ್ಲಾಂದ್ರೆ ನೀವು ಎಷ್ಟೇ ಲಕ್ಷ ಡೊನೇಶನ್ ಕೊಟ್ಟು ಕಲಿತರೂ ಉಪಯೋಗವಿಲ್ಲ, ಸರ್ಕಾರಿ ಶಾಲಾ ಕಾಲೇಜುಗಳನ್ನು ಉತ್ತಮ ಮಟ್ಟಕ್ಕೆ ಒಯ್ಯಲು ಸತತ ಪ್ರಯತ್ನ ಮಾಡುತ್ತೇವೆ, ಒಂದೇ ಮಗು ಇದ್ದರೂ ಒಬ್ಬ ಶಿಕ್ಷಕ ಇರಬೇಕು ಎಂಬ ಸಿದ್ಧಾಂತ ನಮ್ಮದು, ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದರು.

ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ 70 ವರ್ಷದಿಂದ ಯಾರು ಮಾಡದ ಸುಮಾರು ನೂರು ಶಾಲಾ ಕಟ್ಟಡಗಳನ್ನು ಕಟ್ಟಿದ್ದೇವೆ, ಇನ್ನು 50 ಕಟ್ಟಡ ಕಟ್ಟಿದರೆ ಶಾಲಾ ಕಾಲೇಜು ಕಟ್ಟಡಗಳ ಸಮಸ್ಯೆ ಪೂರ್ಣ ಆಗಬಹುದು, ಶಿಕ್ಷಕರ ಕೊರತೆಯ ಸಮಸ್ಯೆಯನ್ನು ಕೂಡಾ ಆದಷ್ಟು ನೀಗಿಸುವ ಪ್ರಯತ್ನ ಮಾಡುತ್ತೆವೆ, ಎಲ್ಲಾ ತಾಲೂಕಿನಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವ ಕಾಲೇಜನ್ನು ತೆರೆಯುವ ಪ್ರಯತ್ನ ಇಲಾಖೆ ಮಾಡಬೇಕು, ಅದಕ್ಕೆ ಬೇಕಾದ ಸಹಾಯ ಸರ್ಕಾರ ನೀಡುತ್ತದೆ ಎಂದಿದ್ದಾರೆ..

ಇನ್ನು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು, ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಯಿಂದ 50 ಸಾವಿರ ರ್ಯಾಂಕಿಂಗ್ ಒಳಗಡೆ 42 ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಒಂದು ಲಕ್ಷದ ರ್ಯಾಂಕಿಂಗ್ ಒಳಗಡೆ 156 ವಿಧ್ಯಾರ್ಥಿಗಳು ಇದ್ದಾರೆ. ಜಿಲ್ಲಾಡಳಿತ, ಜಿಲ್ಲಾಪಂಚಾಯತ ಮತ್ತು ಶಿಕ್ಷಣ ಇಲಾಖೆಯಿಂದ ನಡೆಸುತ್ತಿರುವ ಸಿಇಟಿ ಪರೀಕ್ಷಾ ಪೂರ್ವ ತಯಾರಿಕೆಯ ವಿಶೇಷ
ಕಾರ್ಯಾಗಾರದ ಪ್ರಯೋಜನೆಯನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು ಎಂಬ ಸಲಹೆ ನೀಡಿದರು.

ಶಾಸಕ ಆಸಿಫ್ (ರಾಜು) ಸೇಠ್ ಮಾತನಾಡಿ, ಸತೀಶಣ್ಣ ಅವರು ಶಿಕ್ಷಣದ ಮೇಲೆ ತುಂಬಾ ಆಸಕ್ತಿ ತೋರಿಸಿ, ಅದಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತ ಬಂದಿದ್ದಾರೆ.
ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನಿಡುತ್ತಿರುವದು ಮಹತ್ವದ ಸಂಗತಿಯಾಗಿದೆ ಎಂದಿದ್ದಾರೆ. ಜೊತೆಗೆ ಜಿಲ್ಲೆಯ ಅಧಿಕಾರಿಗಳು ನೀಡಿದ ಸಹಕಾರ ಹಾಗೂ ಮಾರ್ಗದರ್ಶನದಿಂದ ಜಿಲ್ಲೆಯ ವಿದ್ಯಾರ್ಥಿಗಳು ಇಂತಹ ಉತ್ತಮ ಸಾಧನೆ ಮಾಡಿದ್ದಾರೆ ಎಂದಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..