ಪಾಲಿಕೆಯ ಆಯುಕ್ತರಿಂದ ಇಆಸ್ತಿ, ಬಿಆಸ್ತಿ ಪ್ರಕ್ರಿಯೆಯ ಪರಿಶೀಲನೆ..
ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಥಳದಲ್ಲೇ ಪರಿಹಾರೋಪಾಯ..
ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸೂಕ್ತ ಸಲಹೆ ಸೂಚನೆ ನೀಡಿದ ಆಯುಕ್ತರು.
ಬೆಳಗಾವಿ : ಗುರುವಾರ ದಿನಾಂಕ 05/06/2025 ರಂದು ಪಾಲಿಕೆ ಆಯುಕ್ತರಾದ ಶುಭ ಬಿ ಅವರು, ಪಾಲಿಕೆಯ ಕಂದಾಯ ವಿಭಾಗದ ವಿವಿಧ ಶಾಖೆಗಳಾದ ಗೋವಾವೆಸ್, ಕೋನವಾಳಗಲ್ಲಿ ಹಾಗೂ ಇತರ ಸ್ಥಳಗಳಿಗೆ ಅನಿರೀಕ್ಷಿತ ಬೇಟಿ ನೀಡಿ, ಎಖಾತಾ ಮತ್ತು ಬಿಖಾತಾ ಪ್ರಕ್ರಿಯೆಯನ್ನು ಪರಿಶೀಲನೆಯನ್ನು ಮಾಡಿದ್ದಾರೆ.

ಸುಮಾರು ಹೊತ್ತು ಕಂದಾಯ ವಿಭಾಗದ ವಿವಿಧ ಶಾಖಾ ಕಚೇರಿಯಲ್ಲಿ ಕುಳಿತು ಈಖಾತಾ ಕೆಲಸದ ಸಲುವಾಗಿ ಅಲ್ಲಿಗೆ ಬಂದ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ವಿಚಾರಿಸಿ, ಅವರ ಅರ್ಜಿಗಳು ಬಾಕಿ ಉಳಿದಿದ್ದರೆ, ಸಂಬಂದಿಸಿದ ಸಿಬ್ಬಂದಿಯನ್ನು ಕರೆಸಿ, ಅರ್ಜಿಯ ಸ್ಥಿತಿಗತಿಯನ್ನು ತಿಳಿದು, ವಿಳಂಬ ಆಗದಂತೆ ಸಾರ್ವಜನಿಕರ ಕಾರ್ಯಗಳು ನಡೆಯಬೇಕು ಎಂದು ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ನಗರದ ವಿವಿಧ ವಿಭಾಗಗಳಿಂದ ಆಗಮಿಸಿದ ಸಾರ್ವಜನಿಕರು ತಮ ತಮ್ಮ ಸಮಸ್ಯೆಗಳನ್ನು ಆಯುಕ್ತರ ಎದುರು ಹೇಳಿಕೊಂಡಾಗ, ದಾಖಲಾತಿಗಳ, ಅರ್ಜಿ ಹಾಕುವುದರ, ಈಖಾತಾ ಪೂರ್ಣಗೊಳ್ಳುವ ಪ್ರಕ್ರಿಯೆ, ಅದರ ಕಾಲಾವಕಾಶದ ಬಗ್ಗೆ ಮತ್ತು ಸಾರ್ವಜನಿಕರು ತಮ್ಮ ಕಾರ್ಯ ವಿಳಂಬ ಆಗುತ್ತಿದ್ದರೆ ಏನು ಮಾಡಬೇಕೆಂಬ ಮಾಹಿತಿಯನ್ನು ಅಲ್ಲಿ ಬಂದಂತ ಸಾರ್ವಜನಿಕರಿಗೆ ನೀಡಿದ್ದಾರೆ.

ಇತ್ತ ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ಕೂಡಾ, ಅರ್ಜಿಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ, ಲೋಪದೋಷವಿದ್ದರೆ ಹಿಂಬರಹ ಬರೆದು ತಿಳಿಸಿ, ಆನ್ಲೈನ್ ಇರುವದರಿಂದ, ಅರ್ಜಿಯ ಕಡತಗಳು ಎದುರಿಗೆ ಬಂದಾಗಲೇ ಕಾರ್ಯ ಮಾಡುವೆ ಎನ್ನುವ ಮನೋಭಾವ ಬೇಡ, ವಿನಾಕಾರಣ ವಿಳಂಬ ಮಾಡಬೇಡಿ, ಒಂದು ವೇಳೆ ಸಾರ್ವಜನಿಕರು ದೂರು ಬಂದರೆ ಶಿಸ್ತು ಕ್ರಮ ಜರುಗುತ್ತದೆ, ಕಾಲಮಿತಿಯಲ್ಲಿ ಶಿಸ್ತಿನಿಂದ ಕಾರ್ಯ ನಿರ್ವಹಣೆ ಮಾಡಬೇಕು, ಮದ್ಯವರ್ತಿಗಳನ್ನು ದೂರವಿಡಿ ಎಂಬ ಸೂಚನೆ ನೀಡಿದ ಆಯುಕ್ತರು ಕೆಲಸದಲ್ಲಿ ನಿರ್ಲಕ್ಷ ತೋರಿದ ಕಂದಾಯ ವಿಭಾಗದ ನಾಲ್ಕು ಸಿಬ್ಬಂದಿಗಳಿಗೆ ನೋಟಿಸ್ ಕೂಡಾ ಜಾರಿ ಮಾಡಿರುವ ಮಾಹಿತಿ ಇದೆ.

ಪಾಲಿಕೆಯಿಂದ ಈಆಸ್ತಿ ಬಿಆಸ್ತಿ ನೋಂದಣಿಯ ಪ್ರಕ್ರಿಯೆ ರಭಸದಿಂದ ನಡೆಯುತ್ತಿದ್ದು, ಪಾಲಿಕೆ ಆಯುಕ್ತರ ಈ ಅನಿರೀಕ್ಷಿತ ಬೇಟಿಯಿಂದ ಸಿಬ್ಬಂದಿಗಳ ಕಾರ್ಯವೈಖರಿ ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದ್ದು, ಆ ಮೂಲಕ ಸಾರ್ವಜನಿಕರ ಕಾರ್ಯಗಳು ಸಕಾಲದಲ್ಲಿ ಆಗುವಂತಾಗಲಿ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..