ಪಾಲಿಕೆಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಮಹಾಪ್ರಸಾದದ ವಿತರಣೆ..
ನಿತ್ಯವೂ ಮಹಾಪ್ರಸಾದದ ಸಡಗರವಿರುವದು ಪಾಲಿಕೆಯ ವಿಶೇಷ..
ಬೆಳಗಾವಿ : ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಗುರುವಾರ ದಿನಾಂಕ 04/09/2025ರಂದು ಸತ್ಯನಾರಾಯಣ ಪೂಜೆ ಹಾಗೂ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ಹನ್ನೊಂದು ಗಂಟೆಗಾಗಲೇ ಪಾಲಿಕೆಯ ಮಹಾಪೌರರು ತಮ್ಮ ಧರ್ಮಪತ್ನಿಯವರೊಂದಿಗೆ ಶ್ರೀ ಸತ್ಯ ನಾರಾಯಣ ಪೂಜಾ ವಿಧಿ ವಿಧಾನಗಳಲ್ಲಿ ತೊಡಗಿಕೊಂಡಿದ್ದು, ಉಪಮಹಾಪೌರರು, ಆಡಳಿತ ಪಕ್ಷದ ನಾಯಕರು, ನಗರ ಸೇವಕರು, ಪಾಲಿಕೆಯ ಸಿಬ್ಬಂದಿಗಳು ಸುಮಾರು ಒಂದು ಗಂಟೆ ಕಾಲ ನಡೆದ ಈ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು.

ನಂತರ ಪಾಲಿಕೆಯ ಆಯುಕ್ತರಾದಿಯಾಗಿ ಎಲ್ಲಾ ಉಪ ಆಯುಕ್ತರು, ಅಧಿಕಾರಿಗಳು ಸೇರಿಕೊಂಡು, ಮಹಾಪೌರರು, ಉಪಮಹಾಪೌರರು ನೆರವೇರಿಸಿದ ಅನ್ನಸಂತರ್ಪಣೆ ಪೂಜಾಕಾರ್ಯಕ್ಕೆ ಕೈಜೋಡಿಸಿದ್ದು, ಇದಾದ ನಂತರ ಎಲ್ಲರೂ ಸೇರಿಕೊಂಡು ಮಹಾಪ್ರಸಾದದ ವಿತರಣೆಗೆ ಚಾಲನೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಮತ್ತೊಂದು ವಿಶೇಷವೆಂದರೆ ಇಲ್ಲಿ ಗಣೇಶ ಪ್ರತಿಷ್ಠಾಪನೆ ಆದ ದಿನದಿಂದ ವಿಸರ್ಜನೆ ಆಗುವ ದಿನದವರೆಗೂ ನಿತ್ಯವೂ ವಿಶೇಷ ಪೂಜೆ ಹಾಗೂ ಮಹಾಪ್ರಸಾದದ ಸಡಗರದಂತಹ ವಾತಾವರಣ ಇರುವದು ವಿಶೇಷವಾಗಿದೆ.

ಪಾಲಿಕೆಯ ಸುಮಾರು ಐದಾರು ವಿಭಾಗಗಳು ಹಾಗೂ ವೈಯಕ್ತಿಕವಾಗಿ ಕೆಲವರು ಪ್ರಸಾದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ, ಗಣೇಶ ಬಂದ ಮರುದಿನದಿಂದ ಮುಂಜಾನೆ 11 ಗಂಟೆಗೆ ಹಾಗೂ ಸಂಜೆ 4 ಗಂಟೆಗೆ ಪ್ರತಿದಿನ ಎರಡು ಸಲ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆಯನ್ನು ಮಾಡುವದು ವಾಡಿಕೆಯಾಗಿದೆ.
ಮುಂಜಾನೆ ಕಂದಾಯ ಶಾಖೆ, ಸಂಜೆ ಅಭಿವೃದ್ಧಿ ಶಾಖೆ, ಮತ್ತೊಂದು ದಿನ ಆರೋಗ್ಯ ವಿಭಾಗ, ಲೆಕ್ಕಶಾಖೆ, ಮರುದಿನ ಸಾಮಾನ್ಯ ಆಡಳಿತ ಶಾಖೆ, ದತ್ತಾಂಶ ನಮೂದಕರು, ಹೀಗೆ ಪಾಲಿಕೆಯ ಪ್ರತಿ ವಿಭಾಗದವರೂ ಹಾಗೂ ವೈಯಕ್ತಿಕವಾಗಿ ಕೆಲ ಅಧಿಕಾರಿಗಳು ಪ್ರಸಾದ ವಿತರಣೆಯ ಜವಾಬ್ದಾರಿ ತಗೆದುಕೊಂಡಿರುತ್ತಾರೆ..

ಪ್ರತಿದಿನ ಮುಂಜಾನೆ ಸಂಜೆ ಪೂಜೆಯ ನಂತರ ವಿತರಿಸುವ ಪ್ರಸಾದ ಲಘು ಪ್ರಸಾದವಾಗಿರದೆ ಮಹಾಪ್ರಸಾದದ ರೂಪದಲ್ಲೇ ಇದ್ದು, ಹಣ್ಣು ಹಂಪಲು, ಎರಡ್ಮೂರು ಸಿಹಿ ತಿನಿಸುಗಳು, ಜೊತೆಗೆ ಹೊಟ್ಟೆ ತುಂಬುವಷ್ಟು ಉಪಹಾರದ ರೂಪದಲ್ಲಿ ಪ್ರಸಾದವನ್ನು ವಿತರಿಸುವ ಮಹಾಕಾರ್ಯವನ್ನು ಪಾಲಿಕೆಯ ಸಿಬ್ಬಂದಿಗಳು ಮಾಡುತ್ತಾರೆ, ಇದರಿಂದ ಗಣೇಶ ಬಂದು ಹೋಗುವವರೆಗೆ ಪ್ರತಿ ದಿನವೂ ಮಹಾ ಪ್ರಸಾದ ಸವಿಯುವ ಸಡಗರ ಪಾಲಿಕೆಯ ಸಿಬ್ಬಂದಿಗಳ ಪಾಲಿಗೆ ದೊರಕಿದೆ ಎನ್ನಬಹುದಾಗಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..