ಗಂಟೆ ಹತ್ತಾದರೂ ಕಡಿಮೆಯಾಗದ ಗಣರಾಯಣ ಪಯಣ..

ಗಂಟೆ ಹತ್ತಾದರೂ ಕಡಿಮೆಯಾಗದ ಗಣರಾಯಣ ಪಯಣ..

ಕುಗ್ಗದ ಉತ್ಸಾಹದಲ್ಲಿ ಬೆಳಿಗ್ಗೆಯಿಂದಲೇ ಕರ್ತವ್ಯನಿರತರಾದ ಪಾಲಿಕೆ ಸಿಬ್ಬಂದಿಗಳು.

ಬೆಳಗಾವಿ : ನಿನ್ನೆ ಶನಿವಾರ ಸಾಯಂಕಾಲದಿಂದಲೇ ಪ್ರಾರಂಭವಾದ ಸಾರ್ವಜನಿಕ ಮಂಡಳಿಗಳ, ಬ್ರಹತ್ ಮೂರ್ತಿಗಳ ಗಣೇಶ ವಿಸರ್ಜನೆಯು ಮರುದಿನ ಅಂದರೆ ಇಂದು ರವಿವಾರ ಮುಂಜಾನೆ ಹತ್ತು ಗಂಟೆಯಾದರೂ ಕಡಿಮೆಯಾದಂತೆ ಕಾಣುತ್ತಿರಲಿಲ್ಲ, ನಗರದ ಅನೇಕ ದೊಡ್ಡ ದೊಡ್ಡ ಗಣಪತಿಗಳು ಇನ್ನೂ ಸಾಲಾಗಿ ನಿಂತು ವಿಸರ್ಜನೆಗೆ ಅಣಿಯಾಗುತ್ತಿರುವ ದೃಶ್ಯ ಕಂಡುಬಂದಿತ್ತು.

ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಹಲವಾರು ಕಡೆಗಳಲ್ಲಿ ಗಣೇಶ ವಿಸರ್ಜನೆಗಾಗಿ ಹೊಂಡಗಳನ್ನು ಸುವ್ಯವಸ್ಥಿತವಾಗಿ ಸಿದ್ಧತೆ ಮಾಡಿದ್ದರೂ, ರಾತ್ರಿ ಪೂರ್ತಿ ವಿಸರ್ಜನೆಯ ಕಾರ್ಯ ಸಾಗಿದ್ದರೂ, ಇನ್ನೂ ಕೂಡಾ ವಿಸರ್ಜನೆಗಾಗಿ ಗಣಪತಿಗಳ ಸಾಲು ಎಲ್ಲೆಡೆ ಕಂಡು ಬರುತ್ತಿದ್ದು, ಇದು ಬೆಳಗಾವಿಯ ಗಣೇಶೋತ್ಸವದ ಸಡಗರ ಸಂಭ್ರಮಕ್ಕೆ ಸಾಕ್ಷಿಯಾದಂತಿದೆ.

ಇನ್ನು ಶನಿವಾರ ಬೆಳಿಗ್ಗೆಯಿಂದ ಗಣೇಶ ವಿಸರ್ಜನೆಯ ಕಾರ್ಯದಲ್ಲಿ ಕರ್ತವ್ಯ ನಿರತರಾದ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿಗಳು ರಾತ್ರಿ ಪೂರ್ತಿ ಜವಾಬ್ದಾರಿಯಿಂದ ಕಾರ್ಯ ಮಾಡಿದ್ದು, ಇಂದು ಬೆಳಿಗ್ಗೆಯಾದರೂ ಕುಗ್ಗದ ಉತ್ಸಾಹದಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಭಾಗಿಯಾಗಿದ್ದರು.

ಪಾಲಿಕೆ ಸಿಬ್ಬಂದಿಗಳಿಗೆ ಎರಡು ಪಾಳಿಗಳಲ್ಲಿ (ಶಿಪ್ಟ್) ತಮ್ಮ ಕರ್ತವ್ಯವನ್ನು ಹಂಚಿಕೆ ಮಾಡಿದ್ದು, ನಿನ್ನೆ ಸಂಜೆಯಿಂದ ಇಂದು ಬೆಳಿಗ್ಗೆ 6ರ ವರೆಗೆ ಕೆಲ ಸಿಬ್ಬಂದಿಗಳು, ನಂತರ ಇಂದು ಬೆಳಿಗ್ಗೆ 6ರಿಂದ ಸಂಜೆ ಮೂರರ ವರೆಗೆ ಮತ್ತೆ ಕೆಲ ಸಿಬ್ಬಂದಿಗಳು ಗಣೇಶ ವಿಸರ್ಜನಾ ಕರ್ತವ್ಯದಲ್ಲಿ ಅತೀ ಉತ್ಸಾಹದಿಂದ ಭಾಗಿಯಾಗಿದ್ದರು.

ಕಪಿಲೇಶ್ವರ ದೇವಸ್ಥಾನದ ಬಳಿ ಇರುವ ಎರಡು ಹೊಂಡಗಳ ಎದುರಿನ ವೇದಿಕೆಗಳಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಧ್ವನಿವರ್ಧಕಗಳ ಮೂಲಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಸದಸ್ಯರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು, ಶಾಂತಿಯುತ ಹಾಗೂ ಸುವ್ಯವಸ್ಥಿತವಾದ ಗಣೇಶ ವಿಸರ್ಜನೆಗೆ ಪೊಲೀಸ್ ಸಿಬ್ಬಂದಿಗಳು ಕೂಡಾ ಹೊಂಡದ ಪಕ್ಕದಲ್ಲೇ ನಿಂತು ಸಾರ್ವಜನಿಕರಿಗೆ ಸಹಕರಿಸುತ್ತಿದ್ದರು.

ನಗರದ ಕಾವೇರಿ ಕೊಲ್ಡ್ರಿಂಕ್ಸ್ , ಸಮಾದೇವಿ ಗಲ್ಲಿ, ಕಾಲೇಜ್ ರಸ್ತೆ, ತಿಲಕಚೌಕ, ಶನಿಮಂದಿರ, ಕಪಿಲೇಶ್ವರ ಸೇತುವೆ ರಸ್ತೆಗಳಲ್ಲಿ ಇನ್ನೂ ವಿಸರ್ಜನೆಗಾಗಿ ಗಣಪತಿಗಳ ಸಾಲು ನಿಂತಿದ್ದು, ಇಂದು ಸಂಜೆವರೆಗೂ ಈ ವಿಸರ್ಜನಾ ಕಾರ್ಯ ಮುಂದುವರೆಯುವ ಸಾಧ್ಯತೆ ಇದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..